ಅನುದಾನ ರಹಿತ ಶಾಲೆಗಳ ಸಮಸ್ಯೆ ಪರಿಹಾರಕ್ಕಾಗಿ ಇಲಾಖೆ ಕಾರ್ಯಕ್ರಮ ರೂಪಿಸಲಿದೆ: ಶಿಕ್ಷಣ ಸಚಿವ ಸುರೇಶ್ ಕುಮಾರ್

ತುಮಕೂರು: ನಗರದ ವಿವಿಧ ಎಸ್ಸೆಸ್ಸೆಲ್ಸಿ ಪರೀಕ್ಷಾ ಕೇಂದ್ರಗಳಿಗೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಭೇಟಿ ನೀಡಿ ವಿದ್ಯಾರ್ಥಿಗಳ ಜತೆ ಮಾತುಕತೆ ನಡೆಸಿದರು.

ಬೆಳಿಗ್ಗೆಯೇ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿದರು. ಮಠದ ಮಕ್ಕಳಿಗೆ ಉಪಾಹಾರ ಬಡಿಸಿದರು. ಪರೀಕ್ಷೆ ಮಾಡಿದ್ದು ಸರಿಯೇ ಎಂದು ಮಕ್ಕಳನ್ನು ಪ್ರಶ್ನಿಸಿದರು. ಕೇಂದ್ರಕ್ಕೆ ಭೇಟಿ ನೀಡಿ ಪರೀಕ್ಷೆ ಬರೆಯುತ್ತಿದ್ದ ವಿದ್ಯಾರ್ಥಿಗಳಿಗೆ ಆತ್ಮಸ್ಥೈರ್ಯ ತುಂಬಿದರು. ಕೊಠಡಿಗಳಿಗೆ ಸ್ಯಾನಿಟೈಸ್ ಮಾಡಿರುವುದನ್ನು ವೀಕ್ಷಿಸಿದರು.

READ ALSO

ಕಳೆದ ಬಾರಿ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಶೇ 98.76ರಷ್ಟು ಮಕ್ಕಳ ಹಾಜರಾತಿ ಇತ್ತು. ಈ ಬಾರಿ ಕೊರೊನಾ ಭಯದಿಂದ ಮಕ್ಕಳ ಹಾಜರಾತಿ ಮತ್ತಷ್ಟು ಕಡಿಮೆ ಆಗುವ ಭೀತಿ ಕಾಡುತ್ತಿತ್ತು. ಆದರೆ ಸರ್ಕಾರ ಸುರಕ್ಷತಾ ಕ್ರಮಗಳನ್ನು ಕೈಗೊಂಡ ಕಾರಣ ಶೇ 98ರಷ್ಟು ಹಾಜರಾತಿ ಇದೆ ಎಂದು ತಿಳಿಸಿದರು.

ಇದುವರೆಗೂ ಕೋವಿಡ್ ಪ್ರಕರಣದಿಂದ ಪರೀಕ್ಷೆಗೆ 32 ವಿದ್ಯಾರ್ಥಿಗಳು ಹಾಜರಾಗಿಲ್ಲ. ಈ ಮಕ್ಕಳಿಗೆ ಆಗಸ್ಟ್‌ನಲ್ಲಿ ನಡೆಯುವ ಪೂರಕ ಪರೀಕ್ಷೆಯಲ್ಲಿ ಬರೆಯಲು ಅವಕಾಶ ಮಾಡಿಕೊಡಲಾಗುವುದು ಎಂದರು.

ಸಿದ್ಧಗಂಗಾ ಮಠದಲ್ಲಿ ನಿಜವಾದ ಶಿಕ್ಷಣ ಸೇವೆ ನಡೆಯುತ್ತಿದೆ. ಬೇರೆ ಬೇರೆ ಊರುಗಳಲ್ಲಿದ್ದ ಮಕ್ಕಳು ಅಲ್ಲಿಯೇ ಪರೀಕ್ಷೆ ಬರೆಯಲು ಅವಕಾಶ ಇದ್ದರೂ ಮಠದ ಪರಿಸರದಲ್ಲೇ ಪರೀಕ್ಷೆ ಬರೆಯುವುದಕ್ಕೆ ಮಕ್ಕಳು ಬಂದಿದ್ದಾರೆ. ಇದನ್ನು ಗಮನಿಸಿದರೆ ಮಠದ ಶಿಕ್ಷಣ ಸೇವೆ ಎಂತಹದ್ದು ಎನ್ನುವುದು ಗೊತ್ತಾಗುತ್ತದೆ ಎಂದು ಹೇಳಿದರು.

ಆಗಸ್ಟ್ ಬಳಿಕ ಪ್ರಾರಂಭ: ರಾಜ್ಯದಲ್ಲಿ ಅನುದಾನ ಮತ್ತು ಅನುದಾನ ರಹಿತ ಶಾಲಾ, ಕಾಲೇಜುಗಳ ಶಿಕ್ಷಕರಿಗೆ ವೇತನ ನೀಡುವ ಬಗ್ಗೆ ಅನುದಾನ ಮತ್ತು ಅನುದಾನ ರಹಿತ ಶಾಲೆಗಳ ಸಂಘದ ಪ್ರತಿನಿಧಿಗಳನ್ನು ಮುಖ್ಯಮಂತ್ರಿ ಬಳಿಗೆ ಕರೆತಂದು ಚರ್ಚಿಸಿದ್ದೇವೆ. ಬಡ್ಡಿ ರಹಿತ ಸಾಲ ಕೊಟ್ಟರೆ ಶಿಕ್ಷಕರಿಗೆ ವೇತನ ನೀಡುವುದಾಗಿ ಅವರು ತಿಳಿಸಿದ್ದಾರೆ. ಈ ಬಗ್ಗೆ ಹಣಕಾಸು ಇಲಾಖೆ ಪ್ರಧಾನ ಕಾರ್ಯದರ್ಶಿಗೆ ರೂಪುರೇಷೆ ಸಿದ್ಧಪಡಿಸುವಂತೆ ತಿಳಿಸಿದ್ದೇನೆ. ಅವರು ಬ್ಯಾಂಕ್‌ನವರ ಜತೆ ಮಾತುಕತೆ ನಡೆಸಿದ್ದಾರೆ. ಎಸ್ಸೆಸ್ಸೆಲ್ಸಿ ಪರೀಕ್ಷೆ ನಂತರ ಅನುದಾನ ರಹಿತ ಶಾಲೆಗಳ ಸಮಸ್ಯೆ ಪರಿಹಾರಕ್ಕಾಗಿ ಇಲಾಖೆ ಕಾರ್ಯಕ್ರಮ ರೂಪಿಸಲಿದೆ ಎಂದರು.

ಶಾಸಕ ಜಿ.ಬಿ.ಜ್ಯೋತಿಗಣೇಶ್, ವಿಧಾನ ಪರಿಷತ್ ಸದಸ್ಯ ವೈ.ಎನ್.ನಾರಾಯಣಸ್ವಾಮಿ, ಮುಖಂಡ ಚಿದಾನಂದ ಎಂ.ಗೌಡ, ಡಿಡಿಪಿಐ ಎಂ.ಆರ್.ಕಾಮಾಕ್ಷಿ, ಬಿಇಒ ಹನುಮನಾಯಕ್ ಇದ್ದರು.