ಬಂಗಾರ ಪಲ್ಕೆ ದುರಂತ : 22 ದಿನಗಳ ಕಾರ್ಯಾಚರಣೆ ಬಳಿಕ ಸನತ್ ಶೆಟ್ಟಿ ಮೃತದೇಹ ಪತ್ತೆ

ಬೆಳ್ತಂಗಡಿ: 22 ದಿನಗಳ ಹಿಂದೆ ತಾಲೂಕಿನ ಮಲವಂತಿಗೆ ಗ್ರಾಮದ ಬಂಗಾರಪಲ್ಕೆ ಜಲಪಾತದ ಸಮೀಪ ಗುಡ್ಡ ಕುಸಿದು ಸಂಭವಿಸಿದ ದುರಂತದ ಸಂದರ್ಭದಲ್ಲಿ ನಾಪತ್ತೆಯಾಗಿರುವ ಉಜಿರೆ ಸಮೀಪದ ಕಾಶಿಬೆಟ್ಟು ನಿವಾಸಿ ಸನತ್‌ ಶೆಟ್ಟಿ (20)ಯ ಮೃತದೇಹ ಇಂದು ದೊರೆತಿದೆ.

ಬಂಡೆಕಲ್ಲು ಒಡೆದು ಜೆಸಿಬಿ, ಹಿಟಾಚಿ 23 ದಿನ ಸುಮಾರು 30 ಅಡಿಗಳಷ್ಟು ಆಳದ ಮಣ್ಣು ತೆರವು ಕಾರ್ಯ ಸತತವಾಗಿ ನಡೆದಿತ್ತು. ವಿದ್ಯುತ್ ಸಂಪರ್ಕವಾಗಲಿ, ಯಂತ್ರೋಪಕರಣ ಬಳಸಲು ಸಾಧ್ಯವಿಲ್ಲದ ದುರ್ಗಮ ಸ್ಥಳವಾದ್ದರೂ ಜಿಲ್ಲಾಡಳಿತ, ಶಾಸಕರು, ಸ್ಥಳೀಯರು, ಸಂಘ ಸಂಸ್ಥೆಗಳ ಸಹಕಾರದಿಂದ ದೇಹ ಶೋಧ ಕಾರ್ಯದ ಎಲ್ಲ ಪ್ರಯತ್ನಗಳು ನಡೆದಿದ್ದವು.

READ ALSO

ಒಂದೆರಡು ಸಲ ವಾಸನೆ ಬಂದಿತ್ತಾದರೂ ದೇಹ ಪತ್ತೆಯಾಗದೆ ಪ್ರಕರಣ ಕಗ್ಗಂಟಾಗಿತ್ತು. ಇದೀಗ ಸನತ್ ಶೆಟ್ಟಿ ಮೃತದೇಹ ಪತ್ತೆಯಾಗಿರೋದು ಅವರ ಕುಟುಂಬಸ್ಥರಿಗೆ ಬೇಸರದ ನಡುವೆಯೂ ತುಸು ನೆಮ್ಮದಿ ತರಿಸಿದೆ.

ಘಟನಾ ಸ್ಥಳದಲ್ಲಿ ಪೊಲೀಸ್ ಇಲಾಖೆ,‌ ಅಗ್ನಿಶಾಮಕ ಇಲಾಖೆ, ಕಂದಾಯ ಇಲಾಖೆ, ಸ್ಥಳೀಯ ಗ್ರಾ.ಪಂ, ಎನ್‌ಡಿಆರ್‌ಎಫ್ ತಂಡ, ಮಹೇಶ್ ಶೆಟ್ಟಿ ತಿಮರೋಡಿ ಅವರ ನೇತೃತ್ವದ ತಂಡ  ಹಾಗೂ ಸ್ಥಳೀಯರು ಇಷ್ಟೂ ದಿನಗಳಲ್ಲಿ ಕಾರ್ಯಾಚರಣೆ ಯಲ್ಲಿ ಭಾಗಿಯಾಗಿದ್ದರು. ಶಾಸಕ ಹರೀಶ್ ಪೂಂಜ ಸಂಪೂರ್ಣ ಮಾರ್ಗದರ್ಶನ ಮತ್ತು ಸಹಕಾರ ನೀಡಿದ್ದರು.‌ ಜಿಲ್ಲಾಧಿಕಾರಿ,‌ಸಹಾಯಕ ಕಮಿಷನರ್, ತಹಶಿಲ್ದಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ವಿಧಾನ ಪರಿಷತ್ ಶಾಸಕ ಪ್ರತಾಪಸಿಂಹ ನಾಯಕ್, ಮಾಜಿ‌ಶಾಸಕ ವಸಂತ ಬಂಗೇರ ಮೊದಲಾದವರು ಸ್ಥಳಕ್ಕೆ ಭೇಟಿ‌ನೀಡಿ ಕಾರ್ಯಾಚರಣೆ ತಂಡವನ್ನು ಹುರಿದುಂಬಿಸಿದ್ದರು.

ಸ್ಥಳಕ್ಕೆ ವೈದ್ಯಕೀಯ ತಂಡ ಭೇಟಿ ನೀಡಲಿದೆ. ಮುಂದಿನ ಕಾರ್ಯಕ್ಕೆ ಪೊಲೀಸ್ ಇಲಾಖೆ ಪೂರ್ವ ಸಿದ್ಧತೆ ನಡೆಸಿದೆ.