ಉಜಿರೆ : ಪತ್ರಿಕೆಗಳಲ್ಲಿ ಸುದ್ದಿಯಾದರೆ ಮಾತ್ರ ಉಗ್ರರ ಜೊತೆಗಿನ ಸೈನಿಕರ ಸಂಘರ್ಷದ ಬಗ್ಗೆ ಜನರಿಗೆ ಮಾಹಿತಿ ತಲುಪುತ್ತದೆ. ಆದರೆ ಗಡಿಯಲ್ಲಿರುವ ಯೋಧರಿಗೆ ಪ್ರತಿದಿನವೂ ಸಂಘರ್ಷದ ದಿನವೇ. ಅವುಗಳು ಸುದ್ದಿಯಾಗುವುದಿಲ್ಲವಷ್ಟೆ ಎಂದು ಭಾರತೀಯ ಭೂಸೇನೆ ಮಾಜಿ ಯೋಧ ಮೇಜರ್ ಜನರಲ್ ಎಂ.ವಿ. ಭಟ್ ಹೇಳಿದರು.
ಉಜಿರೆಯ ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದ ಸೆಮಿನಾರ್ ಹಾಲ್ ನಲ್ಲಿ ಸಮಾಜಕಾರ್ಯ ವಿಭಾಗ ಏರ್ಪಡಿಸಿದ್ದ ‘ಪುಲ್ವಾಮ ದುರ್ಘಟನೆಯಲ್ಲಿ ಹುತಾತ್ಮರಾದ ಯೋಧರನ್ನು ಸ್ಮರಿಸುವ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಪ್ರತಿದಿನದ ಸುದ್ದಿಗಳನ್ನು ನೋಡುವ ಮೂಲಕ ಪರಿಸ್ಥಿತಿಯನ್ನು ಗ್ರಹಿಸಲು ಸಾಧ್ಯವಿದೆ. ಭೌಗೋಳಿಕವಾಗಿ ನಮಗೆ ನಕ್ಷೆಯ ಪರಿಚಯವಿರಬೇಕು. ಹಾಗಿದ್ದಾಗ ಮಾತ್ರ ಘಟನೆಗಳನ್ನು ನಾವು ಊಹಿಸಿಕೊಳ್ಳಲು ಸಾಧ್ಯವಿದೆ ಎಂದರು.
ಜೀವನದಲ್ಲಿ ಧೈರ್ಯವನ್ನು ಅಳವಡಿಸಿಕೊಳ್ಳಿ. ನಿಮ್ಮ ಸಾಮರ್ಥ್ಯದ ಅರಿವು ನಿಮಗಿರಲಿ, ಅಭ್ಯಾಸ ನಿರಂತರವಾಗಿರಲಿ, ವಿಶ್ವಾಸವಿರಲಿ, ಸಮಯದ ಮಹತ್ವ ಮತ್ತು ಬಳಕೆಯ ಬಗ್ಗೆ ಗಮನವಿರಲಿ. ವ್ಯಕ್ತಿಯ ಸೌಂದರ್ಯ ಅಡಿಗಿರುವುದು ಬಾಹ್ಯ ಸೌಂದರ್ಯದಲ್ಲಲ್ಲ. ವ್ಯಕ್ತಿಯ ಅಂತರ್ಯದಲ್ಲಿ ಎಂದರು.
ಪ್ರತಿದಿನ ದೇವರಲ್ಲಿ ಎರಡು ನಿಮಿಷ ದೇಶದ ಗಡಿಯಲ್ಲಿ ಸೇವೆ ಸಲ್ಲಿಸುವ ಯೋಧರ ಆರೋಗ್ಯಕ್ಕಾಗಿ ಪ್ರಾರ್ಥಿಸುವವರು ನಾವಾಗೋಣ ಎಂದರು.
ತಮ್ಮ ಸೇವಾವಧಿಯಲ್ಲಿ ನಡೆದ ಕಮಾಂಡೋ ಆಪರೇಷನ್, ಭೂಮಿಂಗ್ ಟ್ರಾಪ್ ಇತ್ಯಾದಿ ಅನುಭವಗಳನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡರು.
ಪುಲ್ವಾಮ ದಾಳಿಯಲ್ಲಿ ಹುತಾತ್ಮರಾದ ಯೋಧರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ನಿವೃತ್ತ ಯೋಧ ಗೋಪಾಲಕೃಷ್ಣ ಕಾಂಚೋಡು ಮಾತನಾಡಿ ದೇಶದ ಗಡಿ ಕಾಯುವ ಸೈನಿಕ ಎಷ್ಟು ಮುಖ್ಯವೋ ಹಾಗೆ ಕೃಷಿಕ, ಅಧ್ಯಾಪಕ, ವೈದ್ಯರು ಎಲ್ಲರೂ ಕೂಡ ಸಮಾಜಕ್ಕೆ ಒಂದಕ್ಕೊಂದು ಪೂರಕವಾಗಿರುವ ಅಂಶಗಳು. ಎಲ್ಲರೂ ಅವರವರ ಜೀವನದಲ್ಲಿ ಸೈನಿಕರೇ. ನಮ್ಮ ನಡುವೆ ಇರುವ ದುರಾಭ್ಯಾಸಗಳ ವಿರುದ್ದ ಹೋರಾಡಿ ಸಮಾಜದ ಹಿತಕ್ಕಾಗಿ ಕೆಲಸ ಮಾಡೋಣ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಮುಖ್ಯಸ್ಥ ಡಾ. ವಿಶ್ವನಾಥ್ ಪಿ. ಮಾತನಾಡಿ ಇಂತಹ ಕಾರ್ಯಕ್ರಮಗಳಲ್ಲಿ ದೊರೆತ ಮಾಹಿತಿಗಳನ್ನು ಜೀವನಕ್ಕೆ ಅಳವಡಿಸಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಸಮಾಜಕಾರ್ಯ ವಿಭಾಗದ ಮುಖ್ಯಸ್ಥ ಪ್ರೊ. ರವಿಶಂಕರ್ ಕೆ.ಆರ್, ಉಪನ್ಯಾಸಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವಿಭಾಗದ ವಿದ್ಯಾರ್ಥಿ ಶ್ರೀದೇವಿ ಕಾರ್ಯಕ್ರಮ ನಿರೂಪಿಸಿದರು. ಪಾರ್ಶ್ವನಾಥ ಜೈನ್ ಸ್ವಾಗತಿಸಿ ರಂಜಿತಾ ವಂದಿಸಿದರು.
ರಿಪೋರ್ಟ್ : ಸ್ವಸ್ತಿಕ್ ಕನ್ಯಾಡಿ