ಬೆಳ್ತಂಗಡಿ: ಕರೊನಾ ಮುಕ್ತವಾಗಿ ಸ್ವಸ್ಥ ಬೆಳ್ತಂಗಡಿ ತಾಲೂಕು ನಿರ್ಮಾಣ ಮಾಡಬೇಕೆಂಬ ಸಂಕಲ್ಪವನ್ನು ನಾವಿಂದು ಮಾಡೋಣ ಎಂದು ಶಾಸಕ ಹರೀಶ ಪೂಂಜ ಹೇಳಿದರು.
ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘದ ವತಿಯಿಂದ ತಾ.ಪಂ. ಸಭಾಂಗಣದಲ್ಲಿ ಶನಿವಾರ ನಡೆದ ಪತ್ರಿಕಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ಎರಡು ವರ್ಷದ ನನ್ನ ಶಾಸಕತ್ವದ ಅವಧಿಯಲ್ಲಿ ತಾಲೂಕಿನ ಸಮಸ್ಯೆಗಳನ್ನು ಪತ್ರಿಕೆಗಳ ಮೂಲಕ ಬಿಂಬಿಸಿ ಎಚ್ಚರಿಸಿದ್ದಾರೆ. ಅದೇ ರೀತಿ ಸಮಸ್ಯೆಗಳು ಪರಿಹಾರವಾದಾಗಲೂ ತಾಲೂಕಿನ ಪತ್ರಕರ್ತರು ಅಪಾರ ಬೆಂಬಲ ವ್ಯಕ್ತಪಡಿಸಿದ್ದಾರೆ. ಕ್ಲಿಷ್ಟಕರ ಸನ್ನಿವೇಶಗಳಲ್ಲಿ ನನ್ನನ್ನು ತಿದ್ದಿ ತೀಡಿ ಬೆಂಬಲ ನೀಡಿದ್ದೀರಿ ಎಂದರು.
ಪ್ರಧಾನಿ ನರೇಂದ್ರ ಮೋದಿ ಹಾಗು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸಮಾಜವನ್ನು ಕೊರೊನಾ ಮುಕ್ತವಾಗಿಸಲು ಪಣ ತೊಟ್ಟಿದ್ದಾರೆ. ಅದೇ ರೀತಿ ನಾವೆಲ್ಲಾ ಸೇರಿ ತಾಲೂಕಿನಲ್ಲಿ ಆರೋಗ್ಯವಂತ ಸಮಾಜವನ್ನು ನಿರ್ಮಿಸಲು ಪತ್ರಿಕಾ ದಿನಾಚರಣೆಯಂದೇ ಸಂಕಲ್ಪ ಮಾಡೋಣ ಎಂದರು.
ವಿಧಾನ ಪರಿಷತ್ ಸದಸ್ಯ ಪ್ರತಾಪ ಸಿಂಹ ನಾಯಕ್ ಮಾತನಾಡಿ, ನಾನು ತಾಲೂಕಿನ ಪತ್ರಕರ್ತರೊಂದಿಗೆ ಹಲವು ವರ್ಷಗಳಿಂದ ಅವಿನಾಭಾವ ಸಂಬಂಧ ಹೊಂದಿದ್ದೇನೆ. ನನ್ನ ಸಾರ್ವಜನಿಕ ಜೀವನದ ಪ್ರಭಾವಲಯಕ್ಕೆ ಪತ್ರಕರ್ತರ ಕೊಡುಗೆ ಅಪಾರ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮೂಲಭೂತ ಹಕ್ಕುಗಳನ್ನು ರಕ್ಷಿಸುವಲ್ಲಿ, ಉಳಿಸುವಲ್ಲಿ ಮತ್ತು ಜನರನ್ನು ಎಚ್ಚರಿಸುವಲ್ಲಿ ಪತ್ರಿಕೆಗಳ ಮಹತ್ವ ಹೆಚ್ಚಿನದು ಎಂದರು.
ಎಂ.ಎಲ್.ಸಿ. ಹರೀಶ ಕುಮಾರ್ ಅವರು, ಜನರಿಗೆ ಯಾವುದೇ ಸಂಶಯ ಬರದ ರೀತಿಯಲ್ಲಿ ಲೇಖನಗಳನ್ನು ಪ್ರಕಟಿಸಿದರೆ ಜನರಿಗೆ ಉಪಯೋಗವಾಗುತ್ತದೆ. ಸರಕಾರದ ವೈಫಲ್ಯಗಳನ್ನು ಎತ್ತಿ ಹಿಡಿಯುವಲ್ಲಿ ಪತ್ರಿಕೆಗಳ ಪಾತ್ರ ಮಹತ್ವದ್ದು ಎಂದರು.
ಈ ಸಂದರ್ಭ ಪತ್ರಕರ್ತ ಮನೋಹರ ಬಳಂಜ ಅವರು ಪುತ್ರಿಯ ಸ್ಮರಣಾರ್ಥ ಮೂವರು ಅನಾರೋಗ್ಯಕ್ಕೊಳಗಾದ ಮಕ್ಕಳಿಗೆ ಕೊಡಮಾಡಿದ ದಿತಿ ನಿಧಿಯನ್ನು ಅತಿಥಿಗಳು ಫಲಾನುಭವಿಗಳಿಗೆ ಹಸ್ತಾಂತರಿಸಿದರು.
ದ.ಕ.ಜಿ.ಕಾರ್ಯನಿರತ ಪತ್ರಕರ್ತರ ಸಂಘದ ಗ್ರಾಮೀಣ ಕಾರ್ಯದರ್ಶಿ ಭುವನೇಶ್ ಜಿ.ಗೇರುಕಟ್ಟೆ ವೇದಿಕೆಯಲ್ಲಿದ್ದರು. ಸಂಘದ ಅಧ್ಯಕ್ಷ ಅಶ್ರಫ್ ಆಲಿ ಕುಂಞ ಅಧ್ಯಕ್ಷತೆ ವಹಿಸಿ ಸಂಘಕ್ಕೆ ನಿವೇಶನದ ಬೇಡಿಕೆಯನ್ನಿಟ್ಟರು.
ಸಂಘದ ಕಾರ್ಯದರ್ಶಿ ಮನೋಹರ ಬಳಂಜ ಸ್ವಾಗತಿಸಿದರು. ಸಂಘದ ಕೋಶಾಧಿಕಾರಿ ಚೈತ್ರೇಶ್ ಇಳಂತಿಲ, ಗಣೇಶ ಶಿರ್ಲಾಲು ಕಾರ್ಯಕ್ರಮ ನಿರ್ವಹಿಸಿದರು.