ಚಾರ್ಮಾಡಿ: ಪಶ್ಚಿಮ ಘಟ್ಟಗಳ ಸೂಕ್ಷ್ಮ ಹುಲ್ಲುಗಾವಲು ಭಸ್ಮವಾಗಿರುವ ಘಟನೆ ವರದಿಯಾಗಿದೆ. ದ.ಕ-ಚಿಕ್ಕಮಗಳೂರು ಸಂಪರ್ಕಿಸುವ ಚಾರ್ಮಾಡಿ ಘಾಟಿ ವ್ಯಾಪ್ತಿಯ ಅರಣ್ಯ ಪ್ರದೇಶದಲ್ಲಿ ಭಾರೀ ಪ್ರಮಾಣದ ಬೆಂಕಿ ಕಾಣಿಸಿಕೊಂಡಿದೆ. ಮೂಡಿಗೆರೆ ಅರಣ್ಯ ವಲಯದ ಜೇನುಕಲ್ಲು- ಆಲೇಖಾನ್ ಮಧ್ಯೆ ಬರುವ ಸ್ಥಳದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ರಸ್ತೆ ಬದಿಯಿಂದ ಆರಂಭವಾದ ಬೆಂಕಿ ಕಾಡಿನತ್ತ ವ್ಯಾಪಿಸಿದೆ. ಪಶ್ಚಿಮ ಘಟ್ಟಗಳ ಸಾಲಿನ ಸೂಕ್ಷ್ಮ ಹುಲ್ಲುಗಾವಲು ಪ್ರದೇಶ ಸಂಪೂರ್ಣವಾಗಿ ಧಗಧಗಿಸಿ ಉರಿಯುತ್ತಿದೆ. ಗಾಳಿಯ ವೇಗ ಹೆಚ್ಚಿರುವುದರಿಂದ ಬೆಂಕಿ ಕ್ಷಿಪ್ರವಾಗಿ ಹರಡುತ್ತಿದ್ದು, ಅರಣ್ಯ ಸಂಪತ್ತಿಗೆ ಭಾರೀ ಹಾನಿಯಾಗುವ ಆತಂಕ ವ್ಯಕ್ತವಾಗಿದೆ. ರಸ್ತೆಯ ಪಕ್ಕದಲ್ಲೇ ಬೆಂಕಿ ಕಾಣಿಸಿಕೊಂಡಿರುವುದರಿಂದ ಚಾರ್ಮಾಡಿ ಘಾಟಿಯಲ್ಲಿ ಸಂಚರಿಸುವ ವಾಹನ ಸವಾರರಲ್ಲಿ ಆತಂಕ ಮೂಡಿದೆ.

ಕಿಡಿಗೇಡಿಗಳು ಉದ್ದೇಶಪೂರ್ವಕವಾಗಿ ಬೆಂಕಿ ಹಚ್ಚಿರುವ ಶಂಕೆ ವ್ಯಕ್ತವಾಗಿದ್ದು, ಈ ಕುರಿತು ತನಿಖೆ ನಡೆಸಲಾಗುತ್ತಿದೆ. ಮಾಹಿತಿ ಪಡೆದ ಕೂಡಲೇ ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿಗಳು ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳು ದೌಡಾಯಿಸಿದ್ದು, ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಪರಿಸ್ಥಿತಿಯನ್ನು ನಿರಂತರವಾಗಿ ನಿಗಾ ವಹಿಸಲಾಗುತ್ತಿದ್ದು, ಬೆಂಕಿ ಸಂಪೂರ್ಣ ನಿಯಂತ್ರಣಕ್ಕೆ ತರಲು ಪ್ರಯತ್ನಗಳು ಮುಂದುವರಿದಿವೆ ಎಂದು ತಿಳಿದುಬಂದಿದೆ.

ಜ.18ರಂದು ಕೂಡ ಚಾರ್ಮಾಡಿ ಘಾಟಿಯ ಮಲಯ ಮಾರುತ ಪ್ರದೇಶದ ಸಮೀಪ ಬೆಂಕಿ ಕಾಣಿಸಿಕೊಂಡು ಅದು ಅರಣ್ಯ ಪ್ರದೇಶದವರೆಗೂ ಹಬ್ಬಿತ್ತು. ಹೀಗೆ ನಿರಂತರವಾಗಿ ಕಾಡಿಗೆ ಕಿಚ್ಚು ಹಚ್ಚುವ ಕಿಡಿಗೇಡಿಗಳ ಪತ್ತೆ ಹಚ್ಚುವ ಕೆಲಸ ಶೀಘ್ರ ಆಗಬೇಕಾಗಿದೆ





