ಸರ್ಕಾರಿ ಬಸ್ ತಡೆದು ಗಲಾಟೆ ನಡೆಸಿದ ಪ್ರಕರಣ: ಮೂವರ ಬಂಧನ

ಬೆಳ್ತಂಗಡಿ: ವಿದ್ಯಾರ್ಥಿಗಳನ್ನು ಬಸ್ಸಿನಲ್ಲಿ ಮುಂದೆ ಹೋಗಿ ಎಂದು ಕಂಡೆಕ್ಟರ್ ಮುಂದೆ ತಳ್ಳಿದ ಎಂಬ ಕಾರಣಕ್ಕಾಗಿ ಬಸ್ ನಿಲ್ಲಿಸಿ ದಾಂಧಲೆ ಮಾಡಿದ ಘಟನೆ ಜೂ 17 ರಂದು ಚಾರ್ಮಾಡಿ ಚೆಕ್ ಪೋಸ್ಟ್ ಬಳಿ ನಡೆದಿದ್ದು, ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಜೂನ್ 18 ರಂದು ಕಂಡಕ್ಟರ್ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿತ್ತು. ಇದರ ಬೆನ್ನಲ್ಲೇ ಪ್ರಕರಣ ಸಂಬಂಧ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಧರ್ಮಸ್ಥಳ ಪೊಲೀಸರು ಯಶಸ್ವಿಯಾಗಿದ್ದಾರೆ.

ಮಂಗಳೂರಿನಿಂದ ಮೂಡಿಗೆರೆಗೆ ಸಂಚಾರಿಸುವ ಸರ್ಕಾರಿ ಬಸ್ಸಿಗೆ ಉಜಿರೆಯಲ್ಲಿ ವಿದ್ಯಾರ್ಥಿಗಳು ಹತ್ತಿದ್ದು ಈ ವೇಳೆ ನಿರ್ವಾಹಕ ವಿದ್ಯಾರ್ಥಿಗಳನ್ನು ಬಸ್ ಒಳಗೆ ಮುಂದೆ ಹೋಗಲು ಕೈ ಹಿಡಿದು ಮುಂದೆ ಕಳುಹಿಸುವ ಸಂದರ್ಭ ಬಸ್ ಕಂಡಕ್ಟರ್ ಹಾಗೂ ಕೆಲವು ವಿದ್ಯಾರ್ಥಿಗಳ ನಡುವೆ ಮಾತಿನ ಚಕಮಕಿ ನಡೆದಿದೆ. ಅದಲ್ಲದೇ ಈ ವಿಚಾರವನ್ನು ವಿದ್ಯಾರ್ಥಿಗಳು ಚಾರ್ಮಾಡಿಯ ಯುವಕರಿಗೆ ತಿಳಿಸಿ ಬಸ್ ಅಡ್ಡ ಹಾಕುವಂತೆ ಸೂಚಿಸಿದ್ದಾರೆ. ಈ ವಿಚಾರವನ್ನು ಬಸ್ಸಿನಲ್ಲಿದ್ದವರು ಧರ್ಮಸ್ಥಳ ಪೊಲೀಸರಿಗೆ ಮಾಹಿತಿ ತಿಳಿಸಿದ್ದು ತಕ್ಷಣ ಧರ್ಮಸ್ಥಳ ಠಾಣಾ ಇನ್ಸ್ ಪೆಕ್ಟರ್ ಅನಿಲ್ ಕುಮಾರ್ ಡಿ ಚಾರ್ಮಾಡಿ ಚೆಕ್ ಪೋಸ್ಟ್ ಬಳಿ ಬಸ್ ನಿಲ್ಲಿಸುವಂತೆ ಕರ್ತವ್ಯದಲ್ಲಿದ್ದ ಪೊಲೀಸ್ ಸಿಬ್ಬಂದಿಗಳಿಗೆ ಸೂಚಿಸಿದ್ದಾರೆ.

READ ALSO

ಅದರೆ ಚೆಕ್ ಪೋಸ್ಟ್ ನಲ್ಲಿ ಬಸ್ ತಡೆದು ಹೆಚ್ಚಿನ ಗಲಾಟೆ ಅಗದಂತೆ ನೋಡಿಕೊಂಡಿದ್ದರು. ಈ ವೇಳೆ ಅಲ್ಲಿಗೆ ಆಗಮಿಸಿದ ಯುವಕರ ತಂಡ ಕಂಡೆಕ್ಟರ್ ನಲ್ಲಿ ಗಲಾಟೆ ಮಾಡಿದೆ. ಈ ವೇಳೆ ಕಂಡೆಕ್ಟರ್ ಪರವಾಗಿ ಮಾತನಾಡಿದ ಬಸ್ ಪ್ರಯಾಣಿಕರೊಬ್ಬರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆಗೆ ಮುಂದಾಗಿದ್ದು. ಅದಲ್ಲದೇ ವಿಡಿಯೋ ಮಾಡುತಿದ್ದ ವ್ಯಕ್ತಿಯೊಬ್ಬರಿಗೆ ಹಲ್ಲೆಗೈದಿದ್ದರು. ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಗೆ ಚಿಕ್ಕಮಗಳೂರು ವಿಭಾಗದ ಮೂಡಿಗೆರೆ ಘಟಕದ ಡಿಪೋ ಗೆ ಸೇರಿದ ಸರಕಾರಿ ಬಸ್ ಕಂಡಕ್ಟರ್ ಶಿವಕುಮಾರ್.ಕೆ.ಎಮ್ ಧರ್ಮಸ್ಥಳ ಪೊಲೀಸ್ ಠಾಣೆಗೆ ಬಂದು ದುರ್ವರ್ತನೆ ಹಾಗೂ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಸಂಬಂಧ ಪ್ರಕರಣ ದಾಖಲಾಯಿಸಿದ್ದು. ಅದರಂತೆ ಅಪರಿಚಿತರ ಮೇಲೆ ಧರ್ಮಸ್ಥಳ ಠಾಣೆಯಲ್ಲಿ 143.147.353.341.504,506 ಜೊತೆಗೆ 149 ಐಪಿಸಿ ಸೆಕ್ಷನ್ ಅಡಿಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಧರ್ಮಸ್ಥಳ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಪ್ರಕರಣದಲ್ಲಿ ಭಾಗಿಯಾದ ಮೂರು ಜನ ಆರೋಪಿಗಳಾದ ಬೆಳ್ತಂಗಡಿ ತಾಲೂಕಿನ ಚಾರ್ಮಾಡಿ ಗ್ರಾಮದ ಮೇಗಿನ ಮನೆ ನಿವಾಸಿ ಅಬೂಬಕ್ಕರ್ ಅವರ ಮಗ ಮಹಮ್ಮದ್ ಶಬೀರ್(21) , ಬೆಳ್ತಂಗಡಿ ತಾಲೂಕಿನ ಚಾರ್ಮಾಡಿ ಗ್ರಾಮದ ಮೇಗಿನ ಮನೆ ನಿವಾಸಿ ಅಬೂಬಕ್ಕರ್ ಅವರ ಮಗ ಮಹಮ್ಮದ್ ಮಹಾರೂಫ್(22), ಬೆಳ್ತಂಗಡಿ ತಾಲೂಕಿನ ಚಾರ್ಮಾಡಿ ಗ್ರಾಮದ ಪಾಂಡಿಕಟ್ಟೆ ನಿವಾಸಿ ಮೊಹಮ್ಮದ್ ಅವರ ಮಗ ಮಹಮ್ಮದ್ ಮುಬಶೀರ್ (23) ಎಂಬವರನ್ನು ಧರ್ಮಸ್ಥಳ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಅನಿಲ್ ಕುಮಾರ್ ನೇತೃತ್ವದ ತಂಡ ಜೂನ್ 18 ರಂದು ರಾತ್ರಿ ಕಾರ್ಯಾಚರಣೆ ನಡೆಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಇನ್ನು ಪ್ರಕರಣದಲ್ಲಿ ಭಾಗಿಯಾದ ಉಳಿದ ಆರೋಪಿಗಳಿಗಾಗಿ ಧರ್ಮಸ್ಥಳ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ.