
ಕಡಿರುದ್ಯಾವರ: ಚಿರಂಜೀವಿ ಯುವಕ ಮಂಡಲ (ರಿ) ಕಾನರ್ಪ, ಶ್ರೀ ದುರ್ಗಾಶಕ್ತಿ ಮಹಿಳಾ ಸಂಘ ಮತ್ತು 35ನೇ ವರ್ಷದ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣಾ ಸಮಿತಿ ಇದರ ವತಿಯಿಂದ 35ನೇ ವರ್ಷದ ಶ್ರೀಕೃಷ್ಣ ಜನ್ಮಾಷ್ಟಮಿ ಧಾರ್ಮಿಕ ಪೂಜಾ ಕಾರ್ಯಕ್ರಮ ಹಾಗೂ ವಿವಿಧ ಗ್ರಾಮೀಣ ಕ್ರೀಡಾಕೂಟಗಳು ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಬಹಳ ವಿಜೃಂಭಣೆಯಿಂದ ನಡೆಯಿತು.

ಕಾರ್ಯಕ್ರಮವನ್ನು ವೇ.ಮೂ.ಪ್ರಕಾಶ್ ಶರ್ಮ ಕಾನರ್ಪ ಉದ್ಘಾಟಿಸಿ ಮಾತನಾಡಿದ ಅವರು ಮಥುರೆಯ ರಾಜ ಕಂಸನ ಕ್ರೌರ್ಯದಿಂದ ಜನರು ಸಂಕಷ್ಟದಲ್ಲಿದ್ದ ಸಂದರ್ಭದಲ್ಲಿ, ದೇವಕಿ–ವಸುದೇವರ ಎಂಟನೇ ಪುತ್ರನಾಗಿ ಶ್ರೀಕೃಷ್ಣನು ಜನಿಸಿದನು. ದೇವಕಿಯ ಎಂಟನೇ ಮಗನಿಂದ ತನ್ನ ಮರಣ ಸಂಭವಿಸಲಿದೆ ಎಂಬ ಭಯದಿಂದ ಕಂಸನು ದೇವಕಿ ಮತ್ತು ವಸುದೇವರನ್ನು ಸೆರೆಮನೆಗೆ ಹಾಕಿದ್ದನು. ಭಾದ್ರಪದ ಮಾಸದ ಕೃಷ್ಣಪಕ್ಷದ ಅಷ್ಟಮಿ ತಿಥಿಯ ಮಧ್ಯರಾತ್ರಿಯಲ್ಲಿ ಶ್ರೀಕೃಷ್ಣನು ಜನಿಸಿದನು. ದೈವಿಕ ಸೂಚನೆಯಂತೆ ವಸುದೇವರು ನವಜಾತ ಕೃಷ್ಣನನ್ನು ಯಮುನಾ ನದಿಯನ್ನು ದಾಟಿಸಿ ಗೋಕುಲಕ್ಕೆ ಕರೆದೊಯ್ದು, ಯಶೋಧೆ–ನಂದರ ಮನೆಯಲ್ಲಿ ಬೆಳೆಸಿದರು.
ಶ್ರೀಕೃಷ್ಣನ ಜನ್ಮವು ಅಧರ್ಮದ ಮೇಲೆ ಧರ್ಮದ ವಿಜಯ, ಅಹಂಕಾರದ ಮೇಲೆ ಸತ್ಯದ ಗೆಲುವು ಹಾಗೂ ಲೋಕಕ್ಕೆ ಧರ್ಮಮಾರ್ಗದ ಸಂದೇಶ ಸಾರುವ ಪವಿತ್ರ ಘಟನೆಯಾಗಿದೆ. ಇದೇ ಕಾರಣಕ್ಕೆ ದೇಶಾದ್ಯಂತ ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಭಕ್ತಿಭಾವದಿಂದ ಆಚರಿಸಲಾಗುತ್ತದೆ ಎಂದು ಶುಭ ಹಾರೈಸಿದರು.

ಬಳಿಕ ಮೊಸರುಕುಡಿಕೆ ಉತ್ಸವ ಹಾಗೂ ವಿವಿಧ ಗ್ರಾಮೀಣ ಕ್ರೀಡಾಕೂಟಗಳು ಕೆಸರುಗದ್ದೆಯಲ್ಲಿ ನಡೆಯಿತು.
ಶ್ರೀಕೃಷ್ಣನ ಪ್ರೇರಣೆ ನಮಗೆಲ್ಲರಿಗೂ ಆದರ್ಶವಾಗಲಿ: ಶಾಸಕ ಹರೀಶ್ ಪೂಂಜಾ

ಭಗವಾನ್ ಶ್ರೀಕೃಷ್ಣನ ಜೀವನ ಮತ್ತು ಸಂದೇಶಗಳು ನಮ್ಮೆಲ್ಲರಿಗೂ ಸದಾ ಪ್ರೇರಣೆಯಾಗಲಿ. ಶ್ರೀಕೃಷ್ಣ ವೇಷಧರಿಸಿದ ಪುಟಾಣಿಗಳು ಮುಂದಿನ ಭವಿಷ್ಯದ ಶಕ್ತಿಗಳಾಗಿ ಬೆಳೆದು ಉತ್ತಮ ಸಮಾಜ ನಿರ್ಮಾಣಕ್ಕೆ ಕೊಡುಗೆ ನೀಡಲಿ ಎಂದು ಶಾಸಕ ಹರೀಶ್ ಪೂಂಜಾ ಹೇಳಿದರು.
ಚಿರಂಜೀವಿ ಯುವಕಮಂಡಲದ ವತಿಯಿಂದ ಆಯೋಜಿಸಿದ್ದ ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶ್ರೀಕೃಷ್ಣ ವೇಷ ಸ್ಪರ್ಧೆಯಲ್ಲಿ ಭಾಗವಹಿಸಿದ ಪುಟಾಣಿಗಳು ಸಾಕ್ಷಾತ್ ಶ್ರೀಕೃಷ್ಣನ ಸ್ವರೂಪದಂತೆ ಕಂಗೊಳಿಸುತ್ತಿದ್ದಾರೆ. ಇಂತಹ ಸಾಂಸ್ಕೃತಿಕ ಕಾರ್ಯಕ್ರಮಗಳು ಮಕ್ಕಳಲ್ಲಿ ನಮ್ಮ ಧರ್ಮ, ಸಂಸ್ಕೃತಿ ಮತ್ತು ಪರಂಪರೆಯ ಬಗ್ಗೆ ಅರಿವು ಮೂಡಿಸುವುದರ ಜೊತೆಗೆ ಉತ್ತಮ ಮೌಲ್ಯಗಳನ್ನು ಬೆಳೆಸುತ್ತವೆ ಎಂದು ಹೇಳಿದರು.
ಶ್ರೀಕೃಷ್ಣನ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಮಕ್ಕಳು ಜ್ಞಾನ, ಸಂಸ್ಕಾರ ಹಾಗೂ ಮಾನವೀಯ ಮೌಲ್ಯಗಳೊಂದಿಗೆ ಬೆಳೆಯಬೇಕು ಎಂದು ಅವರು ಆಶಿಸಿದರು.
ಚಿರಂಜೀವಿ ಯುವಕಮಂಡಲವು ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ನಿರಂತರವಾಗಿ ಸೇವಾ ಚಟುವಟಿಕೆಗಳನ್ನು ನಡೆಸುತ್ತಿರುವುದು ಶ್ಲಾಘನೀಯ. ಯುವಕರನ್ನು ಸಂಘಟಿಸಿ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಸಂಘಟನೆಯು ಮಾದರಿಯ ಕೆಲಸ ಮಾಡುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು ಮುಂದಿನ ದಿನಗಳಲ್ಲಿಯೂ ಇನ್ನಷ್ಟು ಸಮಾಜಮುಖಿ ಕಾರ್ಯಗಳನ್ನು ನಡೆಸಲಿ ಎಂದು ಅವರು ಶುಭ ಹಾರೈಸಿದರು.

ಸಮಾರೋಪ: ಸಾತ್ವಿಕ ಆಹಾರದಿಂದ ಆರೋಗ್ಯಕರ ಜೀವನ: ಡಾ. ಸುಜಾತ ಕೆ.ಜೆ
ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮದಲ್ಲಿ ಮಾತನಾಡಿದ ಎಸ್‌ಡಿಎಂ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನಗಳ ಕಾಲೇಜು, ಉಜಿರೆಯ ಡಾ. ಸುಜಾತ ಕೆ.ಜೆ. ಅವರು, ಆರೋಗ್ಯಕರ ಜೀವನಕ್ಕೆ ಸಾತ್ವಿಕ ಆಹಾರ ಸೇವನೆ ಅತ್ಯಂತ ಮುಖ್ಯವಾಗಿದೆ ಎಂದು ಹೇಳಿದರು.
ನೈಸರ್ಗಿಕವಾಗಿ ದೊರೆಯುವ ತಾಜಾ ಹಣ್ಣು, ತರಕಾರಿ, ಸೊಪ್ಪು, ಧಾನ್ಯ, ಬೇಳೆಕಾಳು ಹಾಗೂ ಪೌಷ್ಟಿಕ ಆಹಾರಗಳನ್ನು ಸೇವಿಸುವುದರಿಂದ ದೇಹ ಮತ್ತು ಮನಸ್ಸಿನ ಆರೋಗ್ಯ ಉತ್ತಮವಾಗಿರುತ್ತದೆ. ಸಾತ್ವಿಕ ಆಹಾರವು ಜೀರ್ಣಕ್ರಿಯೆ ಸುಧಾರಿಸುವುದರ ಜೊತೆಗೆ ದೇಹಕ್ಕೆ ಚೈತನ್ಯ ನೀಡುತ್ತದೆ. ಆಹಾರ ಪದ್ಧತಿಯೊಂದಿಗೆ ಯೋಗ ಮತ್ತು ಪ್ರಕೃತಿ ಚಿಕಿತ್ಸೆಯನ್ನೂ ಜೀವನಶೈಲಿಯಲ್ಲಿ ಅಳವಡಿಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.
ಶ್ರೀಕೃಷ್ಣನ ಸರಳತೆ ಮತ್ತು ಪ್ರಕೃತಿಯೊಂದಿಗೆ ಬೆಸೆದುಕೊಂಡ ಜೀವನಶೈಲಿಯಿಂದ ಇಂದಿನ ಪೀಳಿಗೆಯೂ ಆರೋಗ್ಯಕರ ಬದುಕಿನ ಪಾಠ ಕಲಿಯಬೇಕು ಎಂದು ಅವರು ತಿಳಿಸಿದರು.

ಧರ್ಮ, ಸಂಸ್ಕೃತಿ ಹಾಗೂ ಆಚಾರ ವಿಚಾರಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸಬೇಕು: ಕಿರಣ್ ಚಂದ್ರ ಪುಷ್ಪಗಿರಿ
ಧಾರ್ಮಿಕ ಮುಖಂಡರಾದ ಕಿರಣ್ ಚಂದ್ರ ಡಿ. ಪುಷ್ಪಗಿರಿಯವರು ಮಾತನಾಡುತ್ತಾ ನಮ್ಮ ಧರ್ಮ, ಸಂಸ್ಕೃತಿ, ಆಚಾರ–ವಿಚಾರ ಹಾಗೂ ಸಾಂಪ್ರದಾಯಿಕ ಆಚರಣೆಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸಿ ಉಳಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಶ್ರೀಕೃಷ್ಣನ ಜೀವನ ಮತ್ತು ಸಂದೇಶಗಳು ಧರ್ಮ, ಸತ್ಯ, ಕರ್ತವ್ಯ ಹಾಗೂ ಮಾನವೀಯ ಮೌಲ್ಯಗಳನ್ನು ಸಾರುತ್ತವೆ. ಇಂದಿನ ಯುವ ಪೀಳಿಗೆಗೆ ನಮ್ಮ ಪರಂಪರೆ ಮತ್ತು ಸಂಸ್ಕೃತಿಯ ಮಹತ್ವವನ್ನು ತಿಳಿಸುವ ಮೂಲಕ ಉತ್ತಮ ಮೌಲ್ಯಗಳನ್ನು ಬೆಳೆಸಬೇಕು. ಹಬ್ಬ–ಹರಿದಿನಗಳು ಕೇವಲ ಆಚರಣೆಗೆ ಸೀಮಿತವಾಗದೆ, ನಮ್ಮ ಸಂಸ್ಕೃತಿ ಮತ್ತು ಪರಂಪರೆಯನ್ನು ಉಳಿಸುವ ವೇದಿಕೆಗಳಾಗಬೇಕು.
ಯುವಕರು ಇಂತಹ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ, ನಮ್ಮ ನಾಡಿನ ಆಚಾರ–ವಿಚಾರಗಳನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯಬೇಕು ಎಂದು ಕರೆ ನೀಡಿದರು.

ಚಿರಂಜೀವಿ ಯುವಕಮಂಡಲದ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಸೇವೆಗಳು ಅವಿಸ್ಮರಣೀಯ: ಪತ್ರಕರ್ತ ಮನೋಹರ ಬಳಂಜ
ಚಿರಂಜೀವಿ ಯುವಕಮಂಡಲವು ಹಲವು ವರ್ಷಗಳಿಂದ ಸಾಮಾಜಿಕ, ಧಾರ್ಮಿಕ ಹಾಗೂ ಶೈಕ್ಷಣಿಕ ಕ್ಷೇತ್ರಗಳಲ್ಲಿ ಸಲ್ಲಿಸುತ್ತಿರುವ ಸೇವೆಗಳು ಅವಿಸ್ಮರಣೀಯವಾಗಿವೆ ಎಂದು ಪತ್ರಕರ್ತ ಮನೋಹರ ಬಳಂಜ ಹೇಳಿದರು.
ಶ್ರೀಕೃಷ್ಣ ಜನ್ಮಾಷ್ಟಮಿ ಸೇರಿದಂತೆ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಯುವಜನರಲ್ಲಿ ನಮ್ಮ ಸಂಸ್ಕೃತಿ, ಆಚಾರ–ವಿಚಾರ ಮತ್ತು ಪರಂಪರೆಯ ಬಗ್ಗೆ ಅರಿವು ಮೂಡಿಸುತ್ತಿರುವುದು ಶ್ಲಾಘನೀಯ. ಸಮಾಜಮುಖಿ ಚಟುವಟಿಕೆಗಳ ಮೂಲಕ ಯುವಕರನ್ನು ಸಂಘಟಿಸಿ, ಸೇವಾ ಮನೋಭಾವ ಬೆಳೆಸುತ್ತಿರುವ ಯುವಕಮಂಡಲದ ಕಾರ್ಯ ಇತರರಿಗೆ ಮಾದರಿಯಾಗಿದೆ ಎಂದು ಅವರು ಹೇಳಿದರು.
ಸಂಘಟನೆಯು ಮುಂದಿನ ದಿನಗಳಲ್ಲಿಯೂ ಸಮಾಜದ ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಬೆಳವಣಿಗೆಗೆ ಇನ್ನಷ್ಟು ಕೊಡುಗೆ ನೀಡಲಿ ಎಂದು ಅವರು ಆಶಿಸಿದರು.
ವರ್ತಕರ ಸಂಘದ ಅಧ್ಯಕ್ಷರಾದ ಪ್ರಸಾದ್ BS ಹಾಗೂ ವಿವೇಕಾನಂದ ಶಿಕ್ಷಣ ಸಂಸ್ಥೆ ಮುಂಡಾಜೆ ಇದರ ಅಧ್ಯಕ್ಷರಾದ ವಿನಯಚಂದ್ರ.ಕೆ ಕಾರ್ಯಕ್ರಮಕ್ಕೆ ಶುಭಹಾರೈಸಿದರು.

ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ:
ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮದ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಮನಾರ್ಹ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಲಾಯಿತು. ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆಗೈದು 38 ವರ್ಷಗಳ ಕಾಲ ಶಿಕ್ಷಕಿಯಾಗಿ ಸೇವೆ ಸಲ್ಲಿಸುವುದರ ಜೊತೆಗೆ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಫಿಲೋಮಿನಾ ಸಿ.ಜೆ., ನಾಟಿ ವೈದ್ಯಕೀಯ ಕ್ಷೇತ್ರದಲ್ಲಿ ವಿಶೇಷ ಸಾಧನೆಗೈದ ವಿಶ್ವನಾಥ ಕಜೆ ಹಾಗೂ ಕ್ರೀಡಾ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಮಾಡಿದ ಭೂಷಣ್ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು.
ಸಮಾಜದ ವಿವಿಧ ಕ್ಷೇತ್ರಗಳಲ್ಲಿ ತಮ್ಮದೇ ಆದ ಕೊಡುಗೆ ನೀಡಿರುವ ಸಾಧಕರನ್ನು ಗುರುತಿಸಿ ಗೌರವಿಸುವ ಮೂಲಕ ಯುವ ಪೀಳಿಗೆಗೆ ಪ್ರೇರಣೆ ನೀಡುವ ಕಾರ್ಯವನ್ನು ಕಾರ್ಯಕ್ರಮದಲ್ಲಿ ಮಾಡಲಾಯಿತು.
ಕಾರ್ಯಕ್ರಮವನ್ನು ಯುವಕ ಮಂಡಲದ ಅಧ್ಯಕ್ಷರಾದ ಜನಾರ್ಧನ ಕಾನರ್ಪ ಪ್ರಾಸ್ತಾವಿಕನುಡಿಗಳೊಂದಿಗೆ ಸ್ವಾಗತಿಸಿ, ವೈ ಜೈರಾಜ್ ಸಾಲಿಯಾನ್ ಕಾನರ್ಪ ವಂದಿಸಿದರು, ರಾಜೇಶ್ ಎಂ ಕಾನರ್ಪ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಜಿನ್ನಪ್ಪಗೌಡ, ಬಾಲಕೃಷ್ಣ ಗೌಡ, ರಾಮಚಂದ್ರ ಗೌಡ, ಜಾನಕಿ, ಕುಸುಮ, ಸುಮಿತ್ರಾ, ಲೋಕೇಶ್, ಪ್ರವೀಣ್, ರವೀಂದ್ರ ಪೂಜಾರಿ, ಹಾಗೂ ದುರ್ಗಾ ಶಕ್ತಿ ಮಹಿಳಾ ಸಂಘದ ಸದಸ್ಯರು ಹಾಗೂ ಚಿರಂಜೀವಿ ಯುವಕ ಮಂಡಲದ ಸದಸ್ಯರು ಹಾಗೂ ಕ್ರೀಡಾಭಿಮಾನಿಗಳು ಭಾಗವಹಿಸಿದ್ದರು.





