ಕೊಡಗು: ಕೊರೊನಾದಿಂದ ಸಾವನ್ನಪ್ಪಿದ ಮಹಿಳೆಯ ಮೊಬೈಲ್ ಕಳ್ಳತನ ಮಾಡಿರುವ ಘಟನೆ ಕೊಡಗು ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ. ಕೊಡಗು ಜಿಲ್ಲೆಯ ಕುಶಾಲನಗರದ ಗುಮ್ಮನಕೊಲ್ಲಿ ಗ್ರಾಮದ ಪ್ರಭಾ ಎಂಬವರು ಕೊರೊನಾ ಹಿನ್ನೆಲೆ ಮೇ 6 ರಂದು ಕೊಡಗು ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದರು. ಮೇ 16 ರಂದು ಅವರು ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದರು. ಈ ವೇಳೆ ಅವರ ಮೊಬೈಲ್ ನ್ನು ಪಾಪಿಗಳು ಯಾರೋ ಕದ್ದಿದ್ದಾರೆ. ಇದೀಗ ಅವರ ಪುಟ್ಟ ಮಗಳು ಅಮ್ಮನ ಮೊಬೈಲ್ ದಯವಿಟ್ಟು ಹುಡುಕಿ ಕೊಡಿ, ತೆಗೆದುಕೊಂಡವರು ದಯವಿಟ್ಟು ವಾಪಾಸ್ ಕೊಡಿ ಎಂದು ಅಂಗಲಾಚುತ್ತಿದ್ದಾಳೆ.
ಅಲ್ಲದೇ ಅದರಲ್ಲಿ ನನ್ನ ಅಮ್ಮನ ಸವಿ ನೆನಪುಗಳಿವೆ. ಅದರಲ್ಲಿ ಆಕೆಯ ಫೋಟೋಗಳಿವೆ ಎಂದು ಬೇಡಿಕೊಂಡಿದ್ದಾಳೆ. ಅಲ್ಲದೇ ಪತ್ರ ಕೂಡ ಬರೆದಿದ್ದಾಳೆ.
ಪತ್ರದಲ್ಲಿ ಏನಿದೆ?
ಕೊಡಗು ಜಿಲ್ಲಾಧಿಕಾರಿಗಳು ಮತ್ತು ಶಾಸಕರುಗಳು ಹಾಗೂ ಜಿಲ್ಲಾ ಕೋವಿಡ್ ಆಸ್ಪತ್ರೆ ಸಿಬ್ಬಂದಿಗಳಲ್ಲಿ ಮನವಿ..
ಸುಮಾರು 15 ದಿನಗಳ ಹಿಂದೆ ನಾನು ಮತ್ತು ಅಪ್ಪ, ಅಮ್ಮ ಅವರು ಕೋವಿಡ್ ಗೆ ತುತ್ತಾಗಿದ್ದು, ತಾಯಿಯವರು 15 ದಿನಗಳ ಹಿಂದೆ ಕೋವಿಡ್ ಆಸ್ಪತ್ರೆ, ಮಡಿಕೇರಿ ಇಲ್ಲಿಗೆ ಕಾಯಿಲೆ ಉಲ್ಬಣಗೊಂಡು, ಸೇರಿರುತ್ತಾರೆ.
ನಾನು ಮತ್ತು ಅಪ್ಪ, ಹೋಂ ಕ್ವಾರೆಂಟ್ ಆಗಿದ್ದು, ಹೊರಗೆ ಬರಲಾರದ ಸ್ಥಿತಿಯಲ್ಲಿದ್ದು, ತಂದೆಯವರು ದಿನಗೂಲಿ ನೌಕರರಾಗಿದ್ದು, ಅಕ್ಕ-ಪಕ್ಕದವರ ಸಹಾಯದಿಂದ ಈ ದಿನಗಳನ್ನು ಕಳೆದೆವು.
ದಿನಾಂಕ 16-05-2021ರಂದು ನಮ್ಮ ತಾಯಿಯವರು ಮೃತರಾದರು. ಅವರ ಜೊತೆಯಲ್ಲಿ ಇದ್ದಂತಹ ಮೊಬೈಲ್ ಅನ್ನು ಯಾರೋ ತೆಗೆದುಕೊಂಡಿರುತ್ತಾರೆ. ನಾನು ತಬ್ಬಲಿಯಾಗಿದ್ದು, ನನ್ನ ತಾಯಿಯ ನೆನಪುಗಳು ಆ ಮೊಬೈಲ್ ನಲ್ಲಿ ಇರುತ್ತದೆ. ಆದ್ದರಿಂದ ಯಾರಾದರೂ ತೆಗೆದುಕೊಂಡಿದ್ದಾರೆ ಅಥವಾ ಸಿಕ್ಕಿದ್ದರೆ, ದಯವಿಟ್ಟು ಈ ತಬ್ಬಲಿಯ ವಿಳಾಸ ಹಾರಂಗಿ ರಸ್ತೆ, ಗುಮ್ಮನಕೊಲ್ಲಿ ಗ್ರಾಮ, ಬಸಪ್ಪ ಬಡಾವಣೆ, ಕುಶಾಲನಗರ-571234, ಕೊಡಗು ಜಿಲ್ಲೆ ಇಲ್ಲಿಗೆ ತಲುಪಿಸಿ ಕೊಡಬೇಕಾಗಿ ಕೇಳಿಕೊಳ್ಳುತ್ತೇನೆ.
ಇಂತಿ……… ತಾಯಿಯನ್ನು ಕಳೆದುಕೊಂಡ ನತದೃಷ್ಟೆ, ಹೃತಿಕ್ಷ
ಹೀಗೆಂದು ಬರೆದುಕೊಂಡಿದ್ದು ಬಾಲಕಿಯ ಮನವಿ ಪತ್ರ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅಲ್ಲದೇ ಅನೇಕರು ಮೊಬೈಲ್ ಕದ್ದವರು ದಯವಿಟ್ಟು ವಾಪಾಸ್ ಕೊಡಿ ಎಂದು ಮನವಿ ಮಾಡಿಕೊಂಡಿದ್ದಾರೆ.