ಬೆಳ್ತಂಗಡಿ: ಪ್ರಾಚೀನ ಸಂಪ್ರದಾಯ ಹಾಗೂ ಹಬ್ಬಗಳ ಮಹತ್ವವನ್ನು ಯುವ ಜನತೆಗೆ ಪ್ರಾತ್ಯಕ್ಷಿಕವಾಗಿ ಮನದಟ್ಟು ಮಾಡಿಕೊಡುವ ಸದಾಶಯದಿಂದ ಬೆಳ್ತಂಗಡಿ ಭಾರತೀಯ ಜನತಾ ಪಾರ್ಟಿ ಯುವ ಮೋರ್ಚಾ ವತಿಯಿಂದ ನ. 3ರಂದು ಬೆಳ್ತಂಗಡಿಯಲ್ಲಿ ದೀಪಾವಳಿ ದೋಸೆ ಹಬ್ಬ ಬೆಳ್ತಂಗಡಿ ಬಸ್ ನಿಲ್ದಾಣದ ಬಳಿ ಪೂರ್ವಾಹ್ನ 8 ಗಂಟೆಯಿಂದ ಆಯೋಜಿಸಲಾಗಿದೆ ಎಂದು ಬಿ.ಜೆ.ಪಿ ಯುವ ಮೋರ್ಚಾ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕರ್ನಾಟಕ ಸರ್ಕಾರದ ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಅವರು ದೋಸೆ ಹಬ್ಬಕ್ಕೆ ಚಾಲನೆ ನೀಡಲಿದ್ದಾರೆ. ರಾತ್ರಿ 7 ಗಂಟೆಗೆ ಸಮಾರೋಪ ಸಮಾರಂಭ ಜರಗಲಿದ್ದು, ಹಾಸನ ವಿಧಾನ ಸಭಾ ಕ್ಷೇತ್ರದ ಶಾಸಕ ಪ್ರೀತಂ ಗೌಡ ಭಾಗವಹಿಸಲಿದ್ದಾರೆ.
ಸಂಜೆ 5ರಿಂದ ಭಜನಾ ತಂಡಗಳಿಂದ ಭಜನಾ ಕಾರ್ಯಕ್ರಮ ನಡೆಯಲಿದ್ದು, 100 ಕೋಟಿ ಲಸಿಕೆ ವಿತರಣೆ ಅಂಗವಾಗಿ ಆರೋಗ್ಯ ಇಲಾಖೆಯ ಸಾಧನೆಯನ್ನು ಶ್ಲಾಘಿಸಲು ಆರೋಗ್ಯಕರ ಬೆಳ್ತಂಗಡಿಗಾಗಿ ಕೋವಿಡ್-19ರ ಸಂಕಷ್ಟ ಸಂದರ್ಭದಲ್ಲಿ ಶ್ರಮಿಸಿದ ಆರೋಗ್ಯ ಇಲಾಖೆಯ ಹಾಗೂ ಮುಂಚೂಣಿ ಕೋರೊನ ವಾರಿಯರ್ಸ್‌ಗೆ ಗೌರವಾರ್ಪಣೆ ನಡೆಯಲಿದೆ. ನಾಡಿನ ಒಳಿತಿಗಾಗಿ ಒಂದು ಸಾವಿರಕ್ಕೂ ಹೆಚ್ಚು ಹಣತೆ ಹಚ್ಚಿ, ಪ್ರಾರ್ಥಿಸಿ ಗೋಮಾತೆಗೆ ವೈಭವದ ಗೋ ಪೂಜೆ ಉತ್ಸವವನ್ನು ನಡೆಸಲಾಗುವುದು. ಬಳಿಕ ಜಗದೀಶ ಆಚಾರ್ಯ ಪುತ್ತೂರು ಅವರಿಂದ ಭಕ್ತಿಗಾನ ವೈಭವ ನಡೆಯಲಿದೆ.
ಶಾಸಕ ಹರೀಶ್ ಪೂಂಜ, ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್, ಬೆಳ್ತಂಗಡಿ ಬಿ.ಜೆ.ಪಿ ಮಂಡಲಾಧ್ಯಕ್ಷ ಜಯಂತ್ ಕೋಟ್ಯಾನ್ ಪದಾಧಿಕಾರಿಗಳು, ಸಕ್ರಿಯವಾಗಿ ಉಸ್ಥಿತರಿರಲಿದ್ದಾರೆ.
“ಬಂದುತ್ವ ಬೆಸೆಯೋಣ ಸೇರಿದಂತೆ ಬಿ.ಜೆ.ಪಿ ದೊಸೆ ಸವಿಯೋಣ ಹಣತೆ ಹಚ್ಚೋಣ” ಪರಿಕಲ್ಪನೆಯಡಿ ಬೆಳ್ತಂಗಡಿ ಬೆಳಗಿಸೋಣ ಕಾರ್ಯಕ್ರಮ ನಡೆಯಲಿದೆ ಎಂದುಬಿ.ಜೆ.ಪಿ ಯುವ ಮೋರ್ಚಾ ಅಧ್ಯಕ್ಷ ಯಶವಂತ ಗೌಡ, ಬೆಳಾಲು, ಪ್ರ.ಕಾರ್ಯದರ್ಶಿ ಗಳಾದ ಉಮೇಶ್ ಕುಲಾಲ್, ಗುರುವಾಯನಕೆರೆ ವಿನಿತ್ ಸಾವ್ಯ, ಮಂಡಲ ಯುವ ಮೋರ್ಚಾ ಪ್ರಭಾರಿ ಮಂಡಲ ಉಪಾಧ್ಯಕ್ಷ ಸೀತಾರಾಮ್ ಬೆಳಾಲು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.