
ಧರ್ಮಸ್ಥಳ: ಶ್ರೀಕ್ಷೇತ್ರ ಧರ್ಮಸ್ಥಳದ ಕಲ್ಯಾಣ ಮಂಟಪವನ್ನು ಡಿಸಿಎಂ ಡಿ.ಕೆ ಶಿವಕುಮಾರ್ ರವರು ಉದ್ಘಾಟಿಸಿದರು ಬಳಿಕ ಮಾತನಾಡಿದ ಅವರು, ನಾನು ರಾಜಕೀಯದಲ್ಲಿ ವಿವಿಧ ಹುದ್ದೆಗೆ ಏರಿದರೂ ಇಲ್ಲಿಗೆ ಮಂಜುನಾಥನ ಭಕ್ತನಾಗಿ ಬರ್ತೇನೆ. ಅಧಿಕಾರ ಬರ್ತದೆ, ಅಧಿಕಾರ ಹೋಗ್ತದೆ, ಇಲ್ಲಿ ಯಾವುದೂ ಶಾಶ್ವತ ಅಲ್ಲ ಎಂದು ಡಿಸಿಎಂ ಹೇಳಿದರು.
ರಾಜ ಆದವನೂ ಅಧಿಕಾರ ಕಳೆದುಕೊಳ್ತಾನೆ, ರಾಜಕಾರಣಿ ಆದವನೂ ಅಧಿಕಾರ ಕಳೆದುಕೊಳ್ತಾನೆ. ಹೆಗ್ಗಡೆಯವರು ನಡೆದು ಬಂದ ದಾರಿ ಮತ್ತು ರಾಜ್ಯಕ್ಕೆ ಕೊಟ್ಟ ಮಾರ್ಗದರ್ಶನ ದೊಡ್ಡದು. ಭಕ್ತನಿಗೂ ಭಗವಂತನಿಗೂ ವ್ಯವಹಾರ ನಡೆಯುವ ಸ್ಥಳ ದೇವಾಲಯ. ಹೆಗ್ಗಡೆಯವರು ಮಾಡಿದ ಸಾಧನೆ ಧರ್ಮ ಮತ್ತು ಧಾರ್ಮಿಕ ಚರಿತ್ರೆಯಲ್ಲಿ ದಾಖಲಾಗಿದೆ ಎಂದರು. ನನ್ನ ತಮ್ಮ ಪ್ರತೀ ವರ್ಷ ಧರ್ಮಸ್ಥಳದಲ್ಲೇ ಹುಟ್ಟು ಹಬ್ಬ ಆಚರಿಸ್ತಾನೆ. ನಾನು ಮತ್ತು ನನ್ನ ಕುಟುಂಬ ಕೂಡ ಇಲ್ಲಿಗೆ ಬರ್ತಾ ಇರ್ತೇವೆ. ನನ್ನ ಯಶಸ್ಸಿನಲ್ಲಿ ಈ ಶಿವನ ಕ್ಷೇತ್ರದ ಪಾಲು ದೊಡ್ಡದಿದೆ. ಮಂಜುನಾಥನ ನಂಬಿದ ಯಾರಿಗೂ ತೊಂದರೆ ಆಗಿಲ್ಲ. ಕೆಲವರು ಧರ್ಮಸ್ಥಳದ ವಿಚಾರದಲ್ಲಿ ವಾದ ಮತ್ತು ಟೀಕೆಗಳನ್ನು ಮಾಡ್ತಾರೆ. ಶ್ರೀಗಳು ಜೈನರು, ಅವರು ಹೇಗೆ ಮಂಜುನಾಥನ ನಂಬ್ತಾರೆ ಅಂತ. ಹೀಗೆ ವಾದ ಮಾಡಿದ ಕೆಲ ನಾಯಕರು, ಸಮಾಜ ಸೇವಕರು, ಚಿಂತಕರೆಲ್ಲ ಇದಾರೆ. ಧರ್ಮ ಯಾವುದಾದರೂ ತತ್ವ ಒಂದೆ, ನಾಮ ನೂರಾದರೂ ದೈವ ಒಂದೇ, ಪೂಜೆ ಯಾವುದಾದರೂ ಭಕ್ತಿ ಒಂದೇ. ಇಂತಹ ಪವಿತ್ರವಾದ ಕ್ಷೇತ್ರವನ್ನ ಉಳಿಸಿಕೊಂಡು ಬೆಳೆಸಿಕೊಂಡು ಹೋಗಬೇಕಿದೆ ಎಂದು ಹೇಳಿದರು.ಸಣ್ಣಪುಟ್ಟ ಮಾತನಾಡೋರು ಹಾಗೂ ಟೀಕೆ ಮಾಡೋರು ಬೇಕಾದಷ್ಟು ಜನ ಇರ್ತಾರೆ. ನಾನು ಶ್ರೀಗಳಿಗೆ ಹೇಳೋದು ಇಷ್ಟೇ, ಟೀಕೆಗಳು ಸಾಯ್ತವೆ, ಮಾಡುವ ಕೆಲಸಗಳು ಉಳೀತಾವೆ. ಹಾಗಾಗಿ ನೀವು ಯಾವುದಕ್ಕೂ ಅಂಜುವ ಸಂಧರ್ಭನೇ ಇಲ್ಲ. ನನ್ನಂಥ ಸಾವಿರಾರು ಜನ ಡಿಕೆ ಶಿವಕುಮಾರ್ ನಿಮ್ಮ ಬೆನ್ನಿಗೆ ನಿಲ್ಲಲು ಸಿದ್ದರಿದ್ದೇವೆ. ನಿಮ್ಮ ಪರಿಶುದ್ದವಾದ ಶ್ರಮ, ಸೇವೆ ಇಡೀ ರಾಷ್ಟ್ರದಲ್ಲಿ ನಾವು ಗಮನಿಸಿದ್ದೇವೆ. ಹಾಗಾಗಿ ನೀವು ಚಿಂತೆ ಮಾಡೋದು ಬೇಡ, ಸಮಾಜ ಸೇವೆ ಮಾಡಿ. ಚಿಂತೆ ಮಾಡದೇ ಆರೋಗ್ಯ ಕಾಪಾಡಿಕೊಂಡು ಸೇವೆ ಮುಂದುವರೆಸಿ. ನನ್ನಂಥ ನೂರಾರು ಡಿ.ಕೆ.ಶಿವಕುಮಾರ್ ಈ ಕ್ಷೇತ್ರವನ್ನ ಮತ್ತು ನಿಮ್ಮನ್ನ ರಕ್ಷಣೆ ಮಾಡೋ ಕೆಲಸ ಮಾಡ್ತಾರೆ ಎಂದು ಡಿಕೆಶಿ ತಿಳಿಸಿದರು.