ಬೆಂಗಳೂರು: ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಹಾಗೂ ಶತಾಯುಷಿ ಹೆಚ್.ಎಸ್.ದೊರೆಸ್ವಾಮಿ ವಿಧಿವಶರಾಗಿದ್ದಾರೆ. ಇತ್ತಿಚೆಗಷ್ಟೆ ಕೊರೊನಾ ಸೋಂಕಿನಿಂದ ಗುಣಮುಖರಾಗಿ ಮನೆಗೆ ಹಿಂತಿರುಗಿದ್ದ ಅವರಿಗೆ ಇಂದು ಹೃದಯಘಾತವಾಗಿ ಇಹಲೋಕ ತ್ಯಜಿಸಿದ್ದಾರೆ ಎಂದು ಅವರ ಕುಟುಂಬ ಮೂಲಗಳು ತಿಳಿಸಿವೆ.
1918ರಲ್ಲಿ ಜನಿಸಿದ್ದ ಹಾರೋಹಳ್ಳಿ ಶ್ರೀನಿವಾಸಯ್ಯ ದೊರೆಸ್ವಾಮಿ ಅವರು ಸ್ವಾತಂತ್ರ ಹೋರಾಟದಲ್ಲಿ ಗುರುತಿಸಿಕೊಂಡು ಹಿರಿಯ ಹೋರಾಟಗಾರರೆನಿಸಿಕೊಂಡಿದ್ದರು. 2018 ನೇ ಇಸವಿಗೆ 100 ವರ್ಷಕ್ಕೆ ಕಾಲಿಟ್ಟ ಅವರು ಶತಾಯುಷಿಗಳಾದ ನಂತರವೂ ವಿಶ್ರಮಿಸದೆ ತಮ್ಮ ಹೋರಾಟ ಮುಂದುವರೆಸಿ ಸೈ ಎನಿಸಿಕೊಂಡಿದ್ದರು.
ಬ್ರಿಟಿಷರ ಆಳ್ವಿಕೆ ಸಂದರ್ಭದಲ್ಲಿ ಅವರು ಸಾಹಿತ್ಯ ಮಂದಿರ ಪ್ರಕಾಶನ ಸಂಸ್ಥೆ ಹಾಗೂ ಪೌರವಾಣಿ ಎಂಬ ದೈನಿಕ ಪತ್ರಿಕೆ ನಡೆಸುತ್ತ ಪತ್ರಕರ್ತರಾಗಿಯೂ ಗುರುತಿಸಿಕೊಂಡಿದ್ದರು. ತಮ್ಮ ಇಳಿ ವಯಸ್ಸಿನಲ್ಲೂ ಹೋರಾಟದಲ್ಲಿ ತೊಡಗಿಸಿಕೊಂಡಿದ್ದ ದೊರೆಸ್ವಾಮಿ ಅವರು ಭ್ರಷ್ಟರ ಪಾಲಿನ ಸಿಂಹಸ್ವಪ್ನವಾಗಿದ್ದರು.