ಸುಳ್ಯ: ಸುಳ್ಯ ತಾಲೂಕು ಕಲ್ಚೆರ್ಪೆ ಗ್ರಾಮದಲ್ಲಿ ಬಾವಿಗೆ ಬಿದ್ದಿದ್ದ ಕಾಡಾನೆಯನ್ನು ಯಶಸ್ವಿಯಾಗಿ ರಕ್ಷಿಸಿದ ಘಟನೆ ಇಂದು ಬೆಳಿಗ್ಗೆ ನಡೆದಿದೆ.
ರಕ್ಷಣೆ ಬಳಿಕ ಕಾಡಾನೆ ಜನವಸತಿ ಪ್ರದೇಶದತ್ತ ದೌಡಾಯಿಸಿದ್ದು ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಯಿತು. ನಿನ್ನೆ ರಾತ್ರಿ ಕಲ್ಚೆರ್ಪೆಯ ಪ್ರಜ್ವಲ್ ಎಂಬವರ ಬಾವಿಗೆ ಕಾಡಾನೆ ಬಿದ್ದಿರುವ ಮಾಹಿತಿ ದೊರಕುತ್ತಿದ್ದಂತೆ ಅರಣ್ಯ ಇಲಾಖೆ ಸಿಬ್ಬಂದಿಗಳು ಸ್ಥಳಕ್ಕೆ ದೌಡಾಯಿಸಿ ಕಾರ್ಯಾಚರಣೆ ಆರಂಭಿಸಿದ್ದರು.
ಇಂದು ಬೆಳಿಗ್ಗೆ ಸುಮಾರು 8 ಗಂಟೆಗೆ ಜೆಸಿಬಿ ಯಂತ್ರದ ಸಹಾಯದಿಂದ ಬಾವಿಯ ಬಳಿ ಅಗಲು ತೋಡುವ ಕಾರ್ಯ ಆರಂಭಿಸಲಾಯಿತು. ಸುಮಾರು ಮಧ್ಯಾಹ್ನ 12.50ರ ವೇಳೆಗೆ ಕಾಡಾನೆ ಬಾವಿಯಿಂದ ಮೇಲೆದ್ದು ಹೊರಬಂದಿದ್ದು, ನಂತರ ಜನವಸತಿ ಪ್ರದೇಶದತ್ತ ಓಡಿದ ಘಟನೆ ನಡೆದಿದೆ.
ರಕ್ಷಣಾ ಕಾರ್ಯಾಚರಣೆಯಲ್ಲಿ ಜೆಸಿಬಿ ಯಂತ್ರವನ್ನು ಲಕ್ಷ್ಮೀ ಪ್ರಸಾದ್ ತೊಡಿಕಾನ ಹಾಗೂ ತೇಜಸ್ ಚೆಮ್ನೂರು ನಿರ್ವಹಿಸಿದರು. ಅರಣ್ಯ ಇಲಾಖೆಯ ಸಿಸಿಎಫ್ ಕರಿಕಾಳನ್, ಡಿಎಫ್‌ಒ ಆಂಥೋನಿ ಎಸ್. ಮರಿಯಪ್ಪ, ಎಸಿಎಫ್ ಪ್ರಶಾಂತ್ ಪೈ, ಪುತ್ತೂರು ಎಸಿಎಫ್ ಸುಬ್ಬಯ್ಯ ನಾಯ್ಕ್, ರೇಂಜರ್‌ಗಳಾದ ಕಿರಣ್, ವಿಮಲ್ ಬಾಬು ಹಾಗೂ ಇತರ ಸಿಬ್ಬಂದಿಗಳು ಭಾಗವಹಿಸಿದ್ದರು. ಪೊಲೀಸ್ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಗಳೂ ಸಹಕರಿಸಿದರು.





