ನಿರಂತರ ಆನೆದಾಳಿಯಿಂದ ಕಂಗೆಟ್ಟ ರೈತರು, ಕೃಷಿ ಚಟುವಟಿಕೆಗಳಿಗೆ ಅಪಾರ ಹಾನಿ

ಬೆಳ್ತಂಗಡಿ: ಅರಣ್ಯ ಇಲಾಖೆಯಿಂದ ಆನೆ ದಾಳಿಗೆ ಸಂಬಂಧಿಸಿ ಆನೆ ಕಾಡಿಗಟ್ಟುವ ಅನೇಕ ಪ್ರಯತ್ನಗಳ ಮಧ್ಯೆಯೇ ಸೆ.30ರ ಶನಿವಾರ ರಾತ್ರಿ ತಾಲೂಕಿನ ಕಡಿರುದ್ಯಾವರ ಕಾನರ್ಪ ಸಮೀಪ ಗದ್ದೆ ಹಾಗೂ ಕೃಷಿ ಭೂಮಿಗಳಿಗೆ ದಾಳಿಯಿಟ್ಟು ಭತ್ತ ಹಾಗೂ ಇತರೆ ಕೃಷಿ ಸರ್ವನಾಶ ಮಾಡಿದೆ.

ಕಡಿರುದ್ಯಾವರ ಗ್ರಾಮದ ಕಾನರ್ಪ ಎರುಬಳ್ಳಿ ಬೊಮ್ಮಣ್ಣ ಗೌಡ ಹಾಗೂ ಬೆದ್ರಡಿ ನಾರಾಯಣ ಗೌಡ ಅವರ ಭತ್ತದ ಕೃಷಿಗೆ ಅನೆಗಳು ನುಗ್ಗಿ ಸುಮಾರು ಮೂರು ಎಕ್ರೆಗೂ ಅಧಿಕ ಸ್ಥಳದಲ್ಲಿ ಹಾನಿ ಮಾಡಿವೆ.

READ ALSO

ಒಂದು ವಾರದಿಂದ ಈ ಭಾಗದ ಫಣಿಕಲ್, ಹಿತ್ತಿಲಕೊಡಿ ಪರಿಸರದಲ್ಲಿ ಆನೆಗಳು‌ ನಿರಂತರವಾಗಿ ಕೃಷಿಗೆ ಹಾನಿ ಮಾಡುತ್ತಿವೆ. ಅರಣ್ಯ ಇಲಾಖೆ ಮೆಣಸಿನ ಹೊಗೆ ಪ್ರಯೋಗದ ನಡುವೆಯೂ ಆನೆಗಳ ಹಿಂಡು ಊರಿಂದ ಊರಿಗೆ ಸಂಚರಿಸಿ ದಾಳಿ ಪ್ರಮಾಣ ಹೆಚ್ಚಿಸುತ್ತಲೇ ಇವೆ.

ಇದರಿಂದ ಕೃಷಿಕರು ತೀವ್ರ ಸಂಕಷ್ಟ ಎದುರಿಸುವಂತಾಗಿದೆ. ಇಷ್ಟಾದರೂ ಸರಕಾರ ಅಥವಾ ಸಂಬಂಧಪಟ್ಟ ಸಚಿವರು ಗಮನ ಹರಿಸದಿರುವುದು ಕೃಷಿಕರನ್ನು ಆಕ್ರೋಶ ಹುಟ್ಟಿಸುವಂತೆ ಮಾಡಿದೆ.

ಈಗಾಗಲೇ ಇತ್ತೀಚೆಗೆ ರಾಜ್ಯದ ಬೇರೆ ಬೇರೆ ಪ್ರದೇಶಗಳಲ್ಲಿ ಆನೆ ದಾಳಿಯಿಂದ ರೈತರು ಪ್ರಾಣಕಳೆದುಕೊಂಡ ಘಟನೆ ಆಗಿದ್ದು ಇವೆಲ್ಲವೂ ಆಗುವ ಮುಂಚೆ ಸಂಬಂಧ ಪಟ್ಟ ಇಲಾಖೆ ಸೂಕ್ತ ಕ್ರಮ ಕೈಗೊಂಡು ಕೃಷಿ ಚಟುವಟಿಕೆಗಳಿಗೆ ಹಾಗೂ ಕೃಷಿಕರ ನಾಗರೀಕರ ರಕ್ಷಣೆಗೆ ನಿಲ್ಲಬೇಕಾಗಿದೆ.