ಟೋಕಿಯೊ: ಒಲಿಂಪಿಕ್ಸ್ ಜಾವೆಲಿನ್ ಥ್ರೋದಲ್ಲಿ ಚಿನ್ನದ ಪದಕ ಗೆದ್ದು ಇತಿಹಾಸ ನಿರ್ಮಿಸಿದ ಭಾರತದ ಹೆಮ್ಮೆಯ ಅಥ್ಲೀಟ್ ನೀರಜ್ ಚೋಪ್ರಾಗೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಗಣ್ಯರು, ಲಕ್ಷಾಂತರ ಅಭಿಮಾನಿಗಳಿಂದ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ.
‘ಟೋಕಿಯೊದಲ್ಲಿ ಇತಿಹಾಸ ರಚಿಸಲಾಗಿದೆ! ನೀರಜ್ ಚೋಪ್ರಾ ಇಂದು ಏನನ್ನು ಸಾಧಿಸಿದ್ದಾರೋ ಅದು ಎಂದೆಂದಿಗೂ ನೆನಪಿನಲ್ಲುಳಿಯಲಿದೆ. ಅವರು ಅಸಾಧಾರಣವಾದದ್ದನ್ನೇ ಸಾಧಿಸಿದ್ದಾರೆ. ಅವರು ಅಪರಿಮಿತ ಉತ್ಸಾಹ ಮತ್ತು ಕೆಚ್ಚೆದೆಯಿಂದ ಆಡಿದರು. ಚಿನ್ನದ ಪದಕ ಗೆದ್ದಿರುವುದಕ್ಕಾಗಿ ಅವರಿಗೆ ಅಭಿನಂದನೆಗಳು’ ಎಂದು #Tokyo2020 ಹ್ಯಾಷ್‌ಟ್ಯಾಗ್‌ನೊಂದಿಗೆ ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.
‘ನೀರಜ್ ಚೋಪ್ರಾ ಅವರಿಂದ ಅಭೂತಪೂರ್ವ ಗೆಲುವು! ನೀವು ಗೆದ್ದಿರುವ ಚಿನ್ನದ ಪದಕವು ಅಡೆತಡೆಗಳನ್ನು ಮುರಿದು ಇತಿಹಾಸವನ್ನು ಸೃಷ್ಟಿಸಿದೆ. ನಿಮ್ಮ ಮೊದಲ ಒಲಿಂಪಿಕ್ಸ್‌ನಲ್ಲೇ ಅಥ್ಲೀಟ್ ವಿಭಾಗದಲ್ಲಿ ಭಾರತಕ್ಕೆ ಮೊದಲ ಚಿನ್ನ ತಂದುಕೊಟ್ಟಿದ್ದೀರಿ. ನಿಮ್ಮ ಸಾಧನೆ ನಮ್ಮ ಯುವಕರಿಗೆ ಸ್ಫೂರ್ತಿ ನೀಡುತ್ತದೆ. ಭಾರತವಿಂದು ಸಂಭ್ರಮಿಸುತ್ತಿದೆ. ಹೃತ್ಪೂರ್ವಕ ಅಭಿನಂದನೆಗಳು’ ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಟ್ವೀಟ್ ಮಾಡಿದ್ದಾರೆ.
‘ಜಾವೆಲಿನ್ ಥ್ರೋದಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ಇತಿಹಾಸ ನಿರ್ಮಿಸಿರುವ ನೀರಜ್ ಚೋಪ್ರಾಗೆ ಹೃತ್ಪೂರ್ವಕ ಅಭಿನಂದನೆಗಳು. ದೇಶಕ್ಕಿದು ಹೆಮ್ಮೆಯ ಕ್ಷಣ. ಜೈಹಿಂದ್’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಟ್ವೀಟ್ ಮಾಡಿದ್ದಾರೆ.