ಹಾಸನ: ವರ್ಷಕ್ಕೊಮ್ಮೆ ಮಾತ್ರ ದರ್ಶನ ನೀಡುವ ಶಕ್ತಿ ದೇವತೆ ಹಾಸನಾಂಬೆ ದರ್ಶನೋತ್ಸವವು ಈ ಬಾರಿ ಎಲ್ಲಾ ಹಳೆಯ ದಾಖಲೆಗಳನ್ನು ಮುರಿದು ಸಾರ್ವಕಾಲಿಕ ಇತಿಹಾಸ ನಿರ್ಮಿಸಿದೆ. ದೇವಾಲಯದ ಹುಂಡಿ ಎಣಿಕೆ ಕಾರ್ಯವು ಗುರುವಾರ ಸಂಪೂರ್ಣಗೊಂಡಿದ್ದು, ಈ ವರ್ಷ ಬರೋಬ್ಬರಿ 29 ಕೋಟಿ 55 ಲಕ್ಷದ 27 ಸಾವಿರದ 852 ರೂಪಾಯಿ (₹29,55,27,852) ಆದಾಯ ಸಂಗ್ರಹವಾಗಿದೆ ಎಂದು ದೇವಾಲಯದ ಆಡಳಿತಾಧಿಕಾರಿ ಜಗದೀಶ್ ಗಂಗಣ್ಣನವರ್ ಅಧಿಕೃತವಾಗಿ ತಿಳಿಸಿದ್ದಾರೆ.
ಒಟ್ಟು 14 ದಿನಗಳ ಕಾಲ ನಡೆದ ಹಾಸನಾಂಬೆ ಜಾತ್ರಾ ಮಹೋತ್ಸವದಲ್ಲಿ 12 ದಿನಗಳ ಕಾಲ ಸಾರ್ವಜನಿಕ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ರಾಜ್ಯ ಹಾಗೂ ಹೊರರಾಜ್ಯಗಳಿಂದ ಹರಿದುಬಂದ 30 ಲಕ್ಷದ 600 ಭಕ್ತರು ದೇವಿಯ ದರ್ಶನ ಪಡೆದು ಪುನೀತರಾಗಿದ್ದಾರೆ. ಕಳೆದ ವರ್ಷ (2025) 25 ಲಕ್ಷದ 60 ಸಾವಿರ ಭಕ್ತರು ದರ್ಶನ ಪಡೆದು 25.59 ಕೋಟಿ ರೂಪಾಯಿ ಆದಾಯ ಸಂಗ್ರಹವಾಗಿತ್ತು. ಆದರೆ ಈ ಬಾರಿ ಕಳೆದ ವರ್ಷಕ್ಕಿಂತ 4 ಲಕ್ಷದ 40 ಸಾವಿರಕ್ಕೂ ಅಧಿಕ ಭಕ್ತರು ಹೆಚ್ಚುವರಿಯಾಗಿ ಆಗಮಿಸಿದ್ದು, ಆದಾಯದಲ್ಲಿ ಸುಮಾರು 4 ಕೋಟಿ ರೂಪಾಯಿಗಳಷ್ಟು ಭಾರಿ ಹೆಚ್ಚಳ ಕಂಡುಬಂದಿದೆ.
ಯಾವ ಮೂಲದಿಂದ ಎಷ್ಟು ಆದಾಯ ಸಂಗ್ರಹವಾಗಿದೆ?
ಹಾಸನಾಂಬೆ ದೇವಾಲಯಕ್ಕೆ ಟಿಕೆಟ್, ಲಾಡು ಪ್ರಸಾದ, ಹುಂಡಿ ಹಾಗೂ ವಿವಿಧ ಮೂಲಗಳಿಂದ ಬಂದಿರುವ ಆದಾಯದ ಸಂಪೂರ್ಣ ವಿವರ ಇಲ್ಲಿದೆ.
2026ರ ಹಾಸನಾಂಬೆ ದೇವಾಲಯದ ಅಧಿಕೃತ ಆದಾಯ
ಟಿಕೆಟ್ ಆದಾಯ: ₹24,22,11,257
ಹುಂಡಿ ಕಾಣಿಕೆ: ₹3,71,63,933
ಲಡ್ಡು ಪ್ರಸಾದ: ₹1,35,99,156
ಇತರ ಆದಾಯ: ₹25,53,506
ಒಟ್ಟು ₹29,55,27,852 (29 ಕೋಟಿ 55 ಲಕ್ಷ 27 ಸಾವಿರದ 852 ರೂಪಾಯಿ). ಆದಾಯ ಸಂಗ್ರಹವಾಗಿದೆ.
ಭಕ್ತರ ದರ್ಶನ: 30,06,000ಕ್ಕೂ ಅಧಿಕ ಭಕ್ತರು ದೇವಿಯ ಆಶೀರ್ವಾದ ಪಡೆದು ಪುನೀತರಾಗಿದ್ದಾರೆ.




