ಉಜಿರೆ–ಬೆಳ್ತಂಗಡಿಯಲ್ಲಿ ಮೊಬೈಲ್ ಕಳ್ಳರ ಕೈಚಳಕ!
ಮಹಿಳೆಯರೇ ಟಾರ್ಗೆಟ್!? ಬಸ್ ಏರುವ ವೇಳೆ ಮೊಬೈಲ್ ಕಳ್ಳತನದ ಆತಂಕ
ಬೆಳ್ತಂಗಡಿ: ಉಜಿರೆ ಹಾಗೂ ಬೆಳ್ತಂಗಡಿ ಭಾಗದಲ್ಲಿ ಬಸ್ ಪ್ರಯಾಣಿಕರ ಮೊಬೈಲ್ ಕಳ್ಳತನ ಪ್ರಕರಣಗಳು ಹೆಚ್ಚುತ್ತಿರುವ ಬಗ್ಗೆ ಆತಂಕ ವ್ಯಕ್ತವಾಗಿದೆ.
ವಿಶೇಷವಾಗಿ ಬೆಳಿಗ್ಗೆ ಹಾಗೂ ಸಂಜೆ ಜನದಟ್ಟಣೆ ಹೆಚ್ಚಿರುವ ಸಮಯದಲ್ಲಿ ಬಸ್ ಏರುವ ವೇಳೆ ಮೊಬೈಲ್ ಕಳ್ಳತನ ನಡೆಯುತ್ತಿರುವುದು ಸಾರ್ವಜನಿಕರಲ್ಲಿ ಭಯ ಮೂಡಿಸಿದೆ.
ಇಂದು ಬೆಳಿಗ್ಗೆ ಖಾಸಗಿ ಕಾಲೇಜಿನ ಉಪನ್ಯಾಸಕಿಯೊಬ್ಬರ ಮೊಬೈಲ್ ಕಳುವಾಗಿರುವ ಘಟನೆ ವರದಿಯಾಗಿದೆ. ಅದೇ ದಿನ ಸಂಜೆ ಸುಮಾರು 6 ಗಂಟೆಯ ವೇಳೆಗೆ ಉಜಿರೆಯ ಖಾಸಗಿ ಆಸ್ಪತ್ರೆಯ ಸಿಬ್ಬಂದಿಯೊಬ್ಬರು ಕರ್ತವ್ಯ ಮುಗಿಸಿ ಬಸ್ ಹತ್ತಿ ಮನೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ಅವರ ಬ್ಯಾಗ್‌ನಲ್ಲಿದ್ದ ಮೊಬೈಲ್ ಕಳ್ಳತನವಾಗಿದೆ ಎಂದು ತಿಳಿದುಬಂದಿದೆ.
ಇದೇ ರೀತಿಯಲ್ಲಿ ಈ ಹಿಂದೆಯೂ ಹಲವಾರು ಮಹಿಳೆಯರ ಮೊಬೈಲ್‌ಗಳು ಕಳವಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ನಿರಂತರವಾಗಿ ಇಂತಹ ಘಟನೆಗಳು ನಡೆಯುತ್ತಿರುವುದು ಸಾರ್ವಜನಿಕರಲ್ಲಿ ಹಲವು ಅನುಮಾನಗಳಿಗೆ ಕಾರಣವಾಗಿದೆ.
ಮೊಬೈಲ್ ಕಳ್ಳತನದ ಹಿಂದೆ ದೊಡ್ಡ ಜಾಲವೇ?
ಒಂದೇ ಪ್ರದೇಶದಲ್ಲಿ, ಜನದಟ್ಟಣೆ ಹೆಚ್ಚಿರುವ ಬಸ್ ನಿಲ್ದಾಣಗಳಲ್ಲಿ ಪದೇಪದೇ ಮೊಬೈಲ್ ಕಳ್ಳತನದ ಘಟನೆಗಳು ನಡೆಯುತ್ತಿರುವುದರಿಂದ, ಈ ಕೃತ್ಯಗಳ ಹಿಂದೆ ವ್ಯವಸ್ಥಿತ ಕಳ್ಳರ ಜಾಲವಿದೆಯೇ ಎಂಬ ಅನುಮಾನ ವ್ಯಕ್ತವಾಗುತ್ತಿದೆ. ಮಹಿಳೆಯರನ್ನೇ ಗುರಿಯಾಗಿಸಿಕೊಂಡು ಕಳ್ಳತನ ನಡೆಸಲಾಗುತ್ತಿದೆಯೇ ಎಂಬ ಪ್ರಶ್ನೆಯೂ ಸಾರ್ವಜನಿಕರಲ್ಲಿ ಮೂಡಿದೆ. ಆದರೆ, ಈ ಕಳ್ಳತನಗಳ ಹಿಂದೆ ದೊಡ್ಡ ಜಾಲವನ್ನು ಪತ್ತೆ ಹಚ್ಚುವ ಕಾರ್ಯ ಅತೀ ಶೀಘ್ರದಲ್ಲಿ ಆಗಬೇಕಾಗಿದೆ
ಮಹಿಳೆಯರೇ, ಎಚ್ಚರ… ಎಚ್ಚರ… ಎಚ್ಚರ!
ಬಸ್ ಏರುವ ಹಾಗೂ ಇಳಿಯುವ ವೇಳೆ ಮೊಬೈಲ್‌ಗಳನ್ನು ಸುರಕ್ಷಿತವಾಗಿ ಇಟ್ಟುಕೊಳ್ಳಿ. ಬ್ಯಾಗ್‌ಗಳನ್ನು ಜಾಗರೂಕತೆಯಿಂದ ಹಿಡಿದುಕೊಳ್ಳಿ.
ಜನದಟ್ಟಣೆಯ ಸಂದರ್ಭದಲ್ಲಿ ಅಪರಿಚಿತ ವ್ಯಕ್ತಿಗಳ ಚಲನವಲನಗಳ ಬಗ್ಗೆ ಗಮನವಿರಲಿ.
ಉಜಿರೆ ಹಾಗೂ ಬೆಳ್ತಂಗಡಿ ಭಾಗದಲ್ಲಿ ನಡೆಯುತ್ತಿರುವ ಮೊಬೈಲ್ ಕಳ್ಳತನದ ಘಟನೆಗಳಿಗೆ ಕಡಿವಾಣ ಹಾಕಲು ಸಂಬಂಧಪಟ್ಟ ಪೊಲೀಸ್ ಇಲಾಖೆ ಬಸ್ ನಿಲ್ದಾಣಗಳಲ್ಲಿ ನಿಗಾ ವಹಿಸಿ, ಕಳ್ಳರನ್ನು ಪತ್ತೆಹಚ್ಚುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.




