ಬೆಂಗಳೂರು: ರಾಜ್ಯಾದ್ಯಂತ ಭಾರಿ ವಿವಾದ ಸೃಷ್ಟಿಸಿದ ಹಿಜಾಬ್ ಪ್ರಕರಣಕ್ಕೆ ಇಂದು ಮಹತ್ತರದ ತೀರ್ಪು ಪ್ರಕಟ ವಾಗಿದೆ. ಪ್ರತಿಭಟನೆಗಳು, ಆರೋಪ, ಪ್ರತ್ಯಾರೋಪಗಳು ಮತ್ತು ಒಂದರ ಹಿಂದೊಂದು ವಿಚಾರಣೆಗಳ ನಂತರ, ಕರ್ನಾಟಕ ಹೈಕೋರ್ಟ್ ಇಂದು ಹಿಜಾಬ್ ಪ್ರಕರಣದ ತೀರ್ಪು ಪ್ರಕಟಿಸಿದೆ.
ಹಿಜಾಬ್ ಧರಿಸಿವುದು ಇಸ್ಲಾಂ ನ ಅತ್ಯಗತ್ಯ ಭಾಗವಲ್ಲ. ಸಮವಸ್ತ್ರ ಸಂಹಿತೆ ಕುರಿತಾಗಿ ಸರ್ಕಾರದ ಆದೇಶ ಕಾನೂನು ಬದ್ಧವಾಗಿದೆ. ಇದನ್ನು ಪ್ರಶ್ನಿಸುವಂತಿಲ್ಲ ಎಂದು ಹೈಕೋರ್ಟ್ ತೀರ್ಪು ನೀಡಿದೆ.
ಉಡುಪಿ ಕಾಲೇಜಿಗೆ ನಿರ್ದೇಶನ ಹೇರುವ ಅಗತ್ಯವಿಲ್ಲ ಎಂದ ಕೋರ್ಟ್, ಹಿಜಾಬ್ ಗೆ ಅವಕಾಶ ಕೋರಿ ಸಲ್ಲಿಕೆಯಾಗಿದ್ದ ರಿಟ್ ಅರ್ಜಿಯನ್ನು ವಜಾ ಮಾಡಿದೆ.
ಉಡುಪಿಯ ಕಾಲೇಜಿನಲ್ಲಿ ಆರಂಭವಾದ ಹಿಜಾಬ್- ಕೇಸರಿ ಶಾಲು ವಿವಾದ ನಂತರ ರಾಜ್ಯದ ಹಲವು ಜಿಲ್ಲೆಗಳಿಗೆ ಹಬ್ಬಿತ್ತು. ಹಲವೆಡೆ ಪ್ರತಿಭಟನೆಗಳು ನಡೆದಿದ್ದವು. ನಂತರ ಸರ್ಕಾರ ಶಿಕ್ಷಣ ಸಂಸ್ಥೆಗಳಿಗೆ ವಸ್ತ್ರಸಂಹಿತೆ ಜಾರಿ ಮಾಡಿತ್ತು. ಇದನ್ನು ಪ್ರಶ್ನಿಸಿ ವಿದ್ಯಾರ್ಥಿನಿಯರು ಕೋರ್ಟ್ ಮೆಟ್ಟಿಲೇರಿದ್ದರು.
ಕಾಲೇಜುಗಳಲ್ಲಿ ಹಿಜಾಬ್ ನಿರ್ಬಂಧಿಸಿರುವ ಕ್ರಮ ಹಾಗೂ ಶಿಕ್ಷಣ ಸಂಸ್ಥೆಗಳಲ್ಲಿ ವಸ್ತ್ರಸಂಹಿತೆ ಜಾರಿ ಸಂಬಂಧ ಕಳೆದ ಫೆ.5ರಂದು ಸರ್ಕಾರ ಹೊರಡಿಸಿದ್ದ ಆದೇಶ ಪ್ರಶ್ನಿಸಿ ಕೆಲ ಮುಸ್ಲಿಂ ವಿದ್ಯಾರ್ಥಿನಿಯರೂ ಸೇರಿ 10ಕ್ಕೂ ಅಧಿಕ ಅರ್ಜಿಗಳು ಹಾಗೂ ಮಧ್ಯಂತರ ಅರ್ಜಿಗಳು ಸಲ್ಲಿಕೆಯಾಗಿದ್ದವು. ಈ ಎಲ್ಲ ಅರ್ಜಿಗಳ ಕುರಿತು ಸತತ 11 ದಿನಗಳ ಕಾಲ ಸುದೀರ್ಘ ವಾದ-ಪ್ರತಿವಾದ ಆಲಿಸಿದ್ದ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ, ನ್ಯಾ. ಕೃಷ್ಣ ಎಸ್. ದೀಕ್ಷಿತ್, ನ್ಯಾ. ಖಾಜಿ ಜೈಬುನ್ನಿಸಾ ಅವರಿದ್ದ ತ್ರಿಸದಸ್ಯ ನ್ಯಾಯಪೀಠ ವಿಚಾರಣೆ ಪೂರ್ಣಗೊಳಿಸಿ ಫೆ.25ರಂದು ತೀರ್ಪು ಕಾಯ್ದಿರಿಸಿತ್ತು.