ಮಕ್ಕಳಿಲ್ಲದ ದಂಪತಿಗಳಿಗೆ ಸಂತಾನ ಭಾಗ್ಯ ಒದಗಿಸುವ ಚುಚ್ಚು ಮದ್ದು ನೀಡಿ ವಂಚಿಸಿದ ನಕಲಿ ವೈದ್ಯ ಜೋಡಿಯ ಬಂಧನ!

ತುಮಕೂರು: ಮಕ್ಕಳಿಲ್ಲದ ದಂಪತಿಗಳನ್ನು ಗುರಿಯಾಗಿಸಿಕೊಂಡು ಮಕ್ಕಳಾಗುವುದಾಗಿ ಭರವಸೆ ನೀಡಿ ವಂಚಿಸುತ್ತಿದ್ದ ದಂಪತಿಯನ್ನು ಇಲ್ಲಿನ ಪೊಲೀಸರು ಬಂಧಿಸಿದ್ದಾರೆ. ದಂಪತಿಯಿಂದ ದಾರಿತಪ್ಪಿದವರು ಹಣ ಕಳೆದುಕೊಂಡಿದ್ದಾರೆ. ಕೆಲವರು ಆರೋಗ್ಯವನ್ನೂ ಕಳೆದುಕೊಂಡು ಚೇತರಿಸಿಕೊಳ್ಳಲು ಹರಸಾಹಸ ಪಡುತ್ತಿದ್ದಾರೆ. ವೈದ್ಯ ದಂಪತಿ ಎಂದು ಹೇಳಿಕೊಂಡಿದ್ದ ದಂಪತಿಯನ್ನು ತುಮಕೂರು ಜಿಲ್ಲೆಯ ನೊಣವಿನಕೆರೆ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ವಾಣಿ ಮತ್ತು ಮಂಜುನಾಥ್ ವಂಚನೆ ಮಾಡಿದ ದಂಪತಿಗಳು.

ವಾಣಿ ಅವರು ವೈದ್ಯರ ಲೋಗೋ ಇರುವ ಕಾರಿನಲ್ಲಿ ಓಡಾಡುತ್ತಿದ್ದರು. ಕೈಯಲ್ಲಿ ಸ್ಟೆತಸ್ಕೋಪ್ ಹಿಡಿದು, ಪರಿಪೂರ್ಣ ವೈದ್ಯರಂತೆ ಕಾಣಿಸಿಕೊಳ್ಳುತ್ತಿದ್ದರು. ಮಕ್ಕಳಾಗದ ಎಷ್ಟೋ ದಂಪತಿಗಳಿಗೆ ಇವರಿಬ್ಬರು ಕೊಡುವ ಔಷಧಗಳನ್ನು ಸೇವಿಸಿ ಅವರು ಹೇಳಿದ ಕಟ್ಟುಪಾಡುಗಳನ್ನು ಪಾಲಿಸಿದರೆ ಸಂತಾನ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆಯನ್ನು ದಂಪತಿಗಳು ಮೂಡಿಸಿದ್ದಾರೆ. ಎರಡರಿಂದ ಐದು ಲಕ್ಷ ರೂಪಾಯಿಗಳ ಪ್ಯಾಕೇಜ್ ಫಿಕ್ಸ್ ಮಾಡಿ ಅವರಿಗೆ ಚುಚ್ಚುಮದ್ದು, ಪೌಡರ್ ಇತ್ಯಾದಿಗಳನ್ನು ನೀಡುತ್ತಿದ್ದರು. ಆರೋಗ್ಯ ಕಾಪಾಡಿಕೊಳ್ಳುವ ಬಗ್ಗೆ ಸೂಚನೆಗಳನ್ನು ತಿಳಿಸುತ್ತಿದ್ದರು ಮತ್ತು ಬೇರೆಡೆ ಸ್ಕ್ಯಾನಿಂಗ್ ಮಾಡಬಾರದು ಎಂದು ಹೇಳುತ್ತಿದ್ದರು ಈ ಖದೀಮರು.

READ ALSO

ಈ ವಂಚಕರಿಂದ ಪ್ರತಿಯಾಗಿ ಯಾವುದೇ ಪ್ರಯೋಜನವನ್ನು ಪಡೆಯದೆ ತಮ್ಮ ಹಣ ಮತ್ತು ಆರೋಗ್ಯ ಎರಡನ್ನೂ ಕಳೆದುಕೊಂಡ ದಂಪತಿಗಳು ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ದಂಪತಿಯನ್ನು ಬಂಧಿಸಿದ್ದಾರೆ.