ಬರಹ:🖋️ ನರೇಂದ್ರ ರೈ ದೇರ್ಲ
ನಮ್ಮನ್ನು ಸದಾ ಪೊರೆಯುವ ಹಸಿರುಗೋಡೆ ಪಶ್ಚಿಮ ಘಟ್ಟಕ್ಕೆ ಮುಂದಿನ ಎರಡು ತಿಂಗಳು ಸಂಕಟದ ಕಾಲ. ಜೂನ್ ತಿಂಗಳ ಮೊದಲ ಮಳೆಯವರೆಗೂ ಕಾಡಿನ ಹೃದಯವೇ ಒಣಗಿಬಿಡುವ ಕಡು ಸುಡುಗಾಲವಿದು . ಮರಗಳ ನೆರಳೂ ತಣ್ಣಗೆ ತಂಪು ಕೊಡಲು ವಿಫಲವಾಗುವಷ್ಟು ಗಾಳಿಯೇ ಈಗ ಉರಿಯುತ್ತದೆ. ಅಲ್ಲಿ ಬಿದ್ದಿರುವ ಒಣ ಎಲೆಗಳು, ಕೊಂಬೆಗಳು, ಕುಸಿದ ಮರಗಳು ಇವೆಲ್ಲವೂ ಬೆಂಕಿಗೆ ಕಾಯುತ್ತಿರುವ ಇಂಧನ. ಅವು ಬೆಂಕಿ ಮುತ್ತಿಕ್ಕಲು ಕಾರಣ ಹುಡುಕುವುದಿಲ್ಲ, ಅವಕಾಶಕ್ಕೆ ಕಾಯುತ್ತವೆ .
ನಾವು ಕೇಳಿರುವ ಊಹೆಯ ಕಥೆಗಳು ಜಿಂಕೆಗಳು ಓಡುವಾಗ ಗೊರಸಿನ ಘರ್ಷಣೆಯಿಂದ ಕಿಡಿ ಹೊತ್ತಿಕೊಳ್ಳುವುದು, ಮೃಗಗಳ ಕಾಲಿನಡಿಯ ಕಲ್ಲು ಕಲ್ಲಿಗೆ ಜರುಗಿ ಒಂದಕ್ಕೊಂದು ತಾಗಿ ಬೆಂಕಿ ಉಂಟಾಗುವುದು, ಮರದ ಕೊಂಬೆಗಳು ಒಂದಕ್ಕೊಂದು ಕೋದು ಉಜ್ಜಿ ಕಿಡಿ ಹತ್ತಿ ಕಾಡು ಉರಿಯುವುದು—ಇವೆಲ್ಲವೂ ಕೇಳಲು ರೋಮಾಂಚಕಾರಿ. ಆದರೆ ವಾಸ್ತವದಲ್ಲಿ ಇವುಗಳ ಸಂಭವನೀಯತೆ ಬಹಳ ಅಲ್ಪ. ಪ್ರಕೃತಿಯಲ್ಲೇ ಸ್ವಯಂಸ್ಫೂರ್ತಿಯಾಗಿ ಕಿಚ್ಚು ಹುಟ್ಟುವುದು ವಿರಳ. ಬೆಂಕಿಗೆ ಬೇಕಾಗುವ ಉಷ್ಣತೆ, ಒಣತನ, ಮತ್ತು ನಿರಂತರ ಘರ್ಷಣೆ ಈ ಮೂರೂ ಒಂದೇ ಸಮಯದಲ್ಲಿ ಕೂಡಿಬರುವುದು ಅಪರೂಪ. ಈ ಎಲ್ಲದಕ್ಕಿಂತಲೂ ಜೀವಲೋಕದ ಅತ್ಯಂತ ಬುದ್ಧಿವಂತ ಮಾನವನ ನಿರ್ಲಕ್ಷ್ಯ, ಅವಸರ, ಕೆಲವೊಮ್ಮೆ ಉದ್ದೇಶಪೂರ್ವಕ ದ್ವೇಷಗಳೇ ಬೆಂಕಿಗೆ ಹತ್ತಿರದ ದಾರಿಯಾಗುತ್ತದೆ .
ಪಶ್ಚಿಮ ಘಟ್ಟದ ಕಾಡುಗಳಲ್ಲಿ ಹಾದುಹೋಗುವ ರಸ್ತೆ, ಜೋತು ಬಿದ್ದ ವಿದ್ಯುತ್ ತಂತಿಗಳು ಸಾಕಷ್ಟು ಸಂದರ್ಭಗಳಲ್ಲಿ ಕಾಡುಕಿಡಿಗೆ ಕಾರಣವಾಗಿವೆ. ಮರದಿಂದ ಕಳಚಿ ಬೀಳುವ ಕೊಂಬೆ ತಂತಿಗೆ ಸಿಕ್ಕಿದರೆ, ಅಥವಾ ಗಾಳಿ ಜೋರಾದರೆ, ಆಗ ಕೆಳಗೆ ಬಿದ್ದ ಕಿಡಿ ಒಣ ಎಲೆಗಳ ಹಾಸಿಗೆಯನ್ನು ಹೊತ್ತಿ ಉರಿಯುವಂತೆ ಮಾಡುತ್ತದೆ. ಕಾಟಿ ಆನೆಯಂಥ ಬಲಶಾಲಿ ಪ್ರಾಣಿಗಳು ಕಂಬಗಳಿಗೆ ಬೆನ್ನುಜ್ಜುವಾಗ ,ಅವು ಕರೆಂಟು ಬೇಲಿಗೆ,ತಂತಿಗೆ ಉರುಳಿಸುವ ಗೆಲ್ಲುಗಳಿಗೆ ಕಿಡಿ ಉಂಟಾಗಬಹುದು. ಈ ಎಲ್ಲವೂ ಕಾಡಿನೊಳಗೆ ತೀರ ಅನಿರೀಕ್ಷಿತ ಅಪಘಾತದ ಬೆಂಕಿದಾರಿಯೇ .
ಇನ್ನೊಂದು ಅಪಾಯ ನಾವು ಸುಲಭವಾಗಿ ಆರೋಪ ಮಾಡುವ, ಆದರೆ ಅರ್ಥಮಾಡಿಕೊಳ್ಳಲು ಇಚ್ಛಿಸದ ಕಾಡುವಾಸಿ ಮನುಷ್ಯ ಕೇಂದ್ರೀತವಾದುದು. ಸಿದ್ದಿ, ಹಾಲಕ್ಕಿ, ಕುಣುಬಿ,ಸೋಲಿಗ… ಇವರಿಗೆಲ್ಲ ಅರಣ್ಯವು ಮನೆ ಮಾತ್ರವಲ್ಲ, ದೇವಾಲಯವೂ ಹೌದು. ಅವರು ದಿನವಹಿ ಬದುಕಿಗಾಗಿ ಅಲ್ಲೇ ಬೆಂಕಿ ಹಚ್ಚುತ್ತಾರೆ : ಅಡುಗೆಗೆ, ಜೇನು ಸಂಗ್ರಹಕ್ಕೆ, ಕೆಲವೊಮ್ಮೆ ಕಾಡು ಪ್ರಾಣಿಗಳನ್ನು ಹಿಡಿಯಲು, ಓಡಿಸಲು, ಬೇಯಿಸಲು ಹೀಗೆ…. ತಮ್ಮ ಆವಾರದ ಒಳಗಡೆಯ ಅಪಾರ ನಿಗದ ಈ ಬೆಂಕಿ ನಿಯಂತ್ರಿತವಾಗಿರುತ್ತವೆ. ಆದರೆ ಕಾಡಿನ ಒಣತನದಲ್ಲಿ,ಅಲ್ಲಿಯ ಒಂದು ಸಣ್ಣ ನಿರ್ಲಕ್ಷ್ಯವೂ ದೊಡ್ಡ ಬೆಂಕಿಯಾಗಿ ಬೆಳೆಯಬಹುದು. ಅದು ಉದ್ದೇಶಪೂರ್ವಕ ಅಪರಾಧವಲ್ಲ, ಪರಿಸ್ಥಿತಿಯ ಕ್ರೂರ ಸಂಗತಿ.
ಆದರೆ ಇಂತಹ ಎಲ್ಲ ಬೆಂಕಿಗೂ ಅಪಘಾತ ಎನ್ನುವ ಮುಚ್ಚಳ ಹಾಕಲು ಸಾಧ್ಯವಿಲ್ಲ. ಈ ದೇಶದ ಇತಿಹಾಸದಲ್ಲೇ ಹಲವು ಬಾರಿ ಕಾಡು ಬೆಂಕಿ ಮಾನವನ ಕೋಪದ ಭಾಷೆಯಾಗಿದೆ. ಅರಣ್ಯ ಇಲಾಖೆಯೊಂದಿಗೆ ಉಂಟಾಗುವ ಸಂಘರ್ಷಗಳು, ಸೊಪ್ಪು ಕಟ್ಟಿಗೆ ಭೂಮಿಯ ಹಕ್ಕುಗಳ ಪ್ರಶ್ನೆ, ಪ್ರವೇಶದ ನಿರ್ಬಂಧ, ಜೀವನೋಪಾಯದ ಒತ್ತಡ ಇವು ಕೆಲವೊಮ್ಮೆ ಬೆಂಕಿಯಾಗಿ ಹೊರಹೊಮ್ಮಿವೆ. ಕಾಡು ಪಕ್ಕದ ರೈತರ ಹಸುಗಳನ್ನು ಹುಲಿ ಕೊಂದಾಗ, ಗ್ರಾಮಸ್ಥರು ವಿಷ ಇಡುವ ಕಥೆ ನಾವು ಕೇಳಿದ್ದೇವೆ. ಅದೇ ಮನಸ್ಥಿತಿ, ಅದೇ ಬೇಸರ, ಕೆಲವೊಮ್ಮೆ ಕಾಡಿನ ಮೇಲೆಯೇ ತಿರುಗಿ ಬೀಳುತ್ತದೆ. “ನಮ್ಮ ಕಾಡು ನಮಗೆ ಸಿಗದಿದ್ದರೆ, ಅದನ್ನು ಸುಟ್ಟುಹಾಕೋಣ” ಎನ್ನುವ ಅಸಹಾಯಕ ಕೋಪ ಅದು ವಿರಳವಾದರೂ ಅಪರೂಪಕೊಮ್ಮೆ ಬೆಂಕಿಯ ರೂಪದಲ್ಲಿ ಇನ್ನೂ ಅಸ್ತಿತ್ವದಲ್ಲಿಲ್ಲ ಎನ್ನಲಾರೆ .
2016ರ ಉತ್ತರಾಖಂಡದ ಕಾಡು ಬೆಂಕಿ, 2019ರ ಬಂಡಿಪುರ-ನಾಗರಹೊಳೆ ಪ್ರದೇಶದ ಅಗ್ನಿ, 2021ರ ಸಿಮ್ಲಿಪಾಲ್ ಕಾಡಿನ ಕಿಡಿ ಇವೆಲ್ಲವೂ ನಮಗೆ ಒಂದೇ ಪಾಠ ಹೇಳುತ್ತವೆ:
ಬೆಂಕಿ ಕಾಡಿನೊಳಗೇ ಹುಟ್ಟುವುದಿಲ್ಲ; ಅದು ಮನುಷ್ಯನ ಅಜಾಗರೂಕತೆಯಿಂದ, ವ್ಯವಸ್ಥೆಯ ದೌರ್ಬಲ್ಯದಿಂದ, ಕೆಲವೊಮ್ಮೆ ನಮ್ಮ ನಿರ್ಲಕ್ಷ್ಯದಿಂದ ಹುಟ್ಟುತ್ತದೆ .
ಕಾಡು ಒಂದು ಜೀವಂತ ವ್ಯವಸ್ಥೆ. ಅದಕ್ಕೆ ತನ್ನನ್ನು ತಾನೇ ರಕ್ಷಿಸಿಕೊಳ್ಳುವ ಶಕ್ತಿಯಿದೆ. ಆದರೆ ಬೆಂಕಿ ಪ್ರಕೃತಿಯ ಮಿತಿಯನ್ನು ಮೀರುವ ಶಕ್ತಿ. ಒಂದು ಬಾರಿ ಹಿಡಿದರೆ, ಅದು ಮರ, ಮಣ್ಣು, ಗಿಡ, ಬಳ್ಳಿ ಎಲ್ಲವನ್ನು ಒಂದೇ ರೇಖೆಯಲ್ಲಿ ಕರಗಿಸುತ್ತದೆ. ಖಂಡಿತ ಮುಂದಿನ ಎರಡು ತಿಂಗಳು ಪಶ್ಚಿಮ ಘಟ್ಟದ ಪಾಲಿಗೆ ಪರೀಕ್ಷೆಯ ಕಾಲ. ಕಾಡು ಕಾಯುವವರಿಗೂ, ಕಾಡಿನೊಳಗೆ ಬದುಕುವವರಿಗೂ, ಕಾಡಿನ ಹೊರಗೆ ಇರುವ ನಮ್ಮಂತಹವರಿಗೂ ಇದು ಜವಾಬ್ದಾರಿಯ ಸಮಯ.
ನಮ್ಮ ಕಣ್ಣೆದುರು ಹೊತ್ತಿ ಉರಿಯುವ ಪುಟ್ಟ ಕಡ್ಡಿ—ಅದು ಕೇವಲ ಮಿಣಿ ಮಿಣಿ ಮಿನಿಪು ಅಲ್ಲ . ಅದು ನಮ್ಮ ಜೀವನಾಡಿ ಕಾಡಿನ ಭವಿಷ್ಯ. ನಾವು ಬೆಂಕಿಯನ್ನು ನೋಡುವಾಗ, ಅದನ್ನು ಕಾಡುಗಿಚ್ಚು ಎಂದು ಕಾವ್ಯಮಯಗೊಳಿಸುವುದಕ್ಕಿಂತ, ಅದು ನಮ್ಮ ತಪ್ಪು ಎಂದು ಅರಿತುಕೊಳ್ಳುವ ಕ್ಷಣವೇ ಕಾಡಿನ ರಕ್ಷಣೆಯ ನಿಜವಾದ ಆರಂಭ. ಕಿಚ್ಚು ಎನ್ನುವುದು ಪ್ರಕೃತಿಯ ಒಂದು ಸ್ವಾಭಾವಿಕ ಕ್ರಿಯೆ ಎಂಬ ಭ್ರಮೆಯನ್ನು ಬಿಟ್ಟು, ಅದು ಬಹುಪಾಲು ಮಾನವನ ಅಲಕ್ಷ್ಯದಿಂದಲೇ ಹೊತ್ತಿಕೊಳ್ಳುವ ಅನಾಹುತವೆಂಬುದು ಸಮುದಾಯಕ್ಕೆ ಅರಿವಾಗಬೇಕು. ಕಾಡಿನ ಅಂಚುಗಳಲ್ಲಿ ಓಡಾಡುವ ಜನರ ನಿರ್ಲಕ್ಷ್ಯ, ಪ್ರವಾಸಿಗರ ಅಜಾಗರೂಕತೆ, ಕೃಷಿ ಅವಶೇಷಗಳನ್ನು ಸುಡುವ ಚಟ ಇವೆಲ್ಲವೂ ಬೆಂಕಿಗೆ ಕಿಡಿಯಾಗುವ ಕ್ಷಣಗಳು. ಒಮ್ಮೆ ಕಿಚ್ಚು ಹೊತ್ತಿಕೊಂಡರೆ ಅದು ಕೇವಲ ಗಿಡ ಮರಗಳನಷ್ಟೇ ಸುಡುವುದಿಲ್ಲ; ಮಣ್ಣಿನೊಳಗಿನ ಕಣ್ಣಿಗೆ ಕಾಣದ ಲಕ್ಷಾಂತರ ಸೂಕ್ಷ್ಮ ಜೀವಿಗಳನ್ನು ನಾಶಮಾಡಿ, ಜೀವವಲಯದ ಅಡಿಪಾಯವನ್ನೇ ಕುಸಿಯಿಸುತ್ತದೆ. ಮಣ್ಣು ಎಂದರೆ ಕಣ್ಣಿಗೆ ಕಾಣಿಸುವ ಮೇಲ್ಪದರವಲ್ಲ. ಅದೊಂದು ಜೀವಂತ ವ್ಯವಸ್ಥೆ; ಅದರಲ್ಲಿ ನಡೆಯುವ ಬೆಂಕಿಮೂಲದ ನಾಶ ದೀರ್ಘಕಾಲದ ಪರಿಸರ ಹಾನಿಗೆ ದಾರಿ ಮಾಡಿಕೊಡುತ್ತದೆ. ಇಂತಹ ಕಿಚ್ಚು ಜೀವಜಾಲದ ವಲಸೆಗೆ ಕಾರಣವಾಗಿ, ಸಸ್ಯವರ್ಗದ ಕುಸಿತಕ್ಕೂ, ಜಲಚಕ್ರದ ವ್ಯತ್ಯಯಕ್ಕೂ ಹೇತು ಆಗುತ್ತದೆ . ಹೀಗಿರುವಾಗ ಬೆಂಕಿ ನಂದಿಸುವ ಕಾರ್ಯಕ್ಕಿಂತ ಅದು ಹೊತ್ತಿಕೊಳ್ಳದಂತೆ ತಡೆಯುವ ಜವಾಬ್ದಾರಿ ಮುಖ್ಯವಾಗಬೇಕು .
ಬೆಂಕಿ ಕಾಯುವ ಹೊಣೆಗಾರಿಕೆಯನ್ನು ಸರ್ಕಾರದ ಕ್ರಮಗಳಲ್ಲೇ ಸೀಮಿತಗೊಳಿಸಬಾರದು ; ಅದು ಬರಿ ಕಾಡಿನ ಇಲಾಖೆಯ ಬದ್ಧತೆಯಲ್ಲ. ನಮ್ಮನೆಯ ಪಕ್ಕದ ಗುಡ್ಡೆಗೆ, ಕಾಡಿಗೆ, ಬಣವೆಗೆ ಬೆಂಕಿ ಬಿದ್ದಾಗ ಅರಣ್ಯ ಇಲಾಖೆಗೆ ಪೋನಯಿಸುವ ಮುಂಚೆ ಒಂದು ಚೆಂಬು ನೀರು ಸುರಿಯುವ ಪ್ರಯತ್ನವನ್ನು ಈ ನೆಲದ ನಾಗರಿಕರಾಗಿ ನಾವು ಮಾಡಲೇಬೇಕು. ಆ ಕ್ಷಣ ಸ್ಥಳೀಯ ಸಮುದಾಯಗಳಲ್ಲಿ ಕಾಣಿಸುವ ಜಾಗೃತಿ ಮತ್ತು ಪ್ರತಿಯೊಬ್ಬರ ವರ್ತನೆ ಕಾಡಿನ ಭವಿಷ್ಯವನ್ನು ನಿರ್ಧರಿಸುತ್ತದೆ. ಕಾಡು ನಮ್ಮ ಸಂಪತ್ತು ಎನ್ನುವ ಭಾವನೆಗೆ ಬದಲಾಗಿ, ನಾವು ಪ್ರಕೃತಿಯ – ಕಾಡಿನ ಒಂದು ಅಂಶ ಎನ್ನುವ ಅರಿವು ಮೂಡಿದಾಗ ಮಾತ್ರ ಈ ಅನಾಹುತವನ್ನು ತಡೆಯಲು ಸಾಧ್ಯ. ಇಲ್ಲವಾದರೆ, ಅರಣ್ಯ ಬೆಂಕಿ ಎಂಬುದು ಕೇವಲ ಕಾಡಿನ ನಾಶವಲ್ಲ, ಅದು ನಮ್ಮದೇ ಬದುಕಿನ ಮೇಲೆ ಬೀಳುವ ಕರಿ ನೆರಳಾಗಿ ಉಳಿಯುತ್ತದೆ..
ಪಶ್ಚಿಮ ಘಟ್ಟದ ಆನೆ ಎಂದೇ ಖ್ಯಾತರಾದ ಶಿವರಾಮ ಕಾರಂತರು ಹೇಳಿದ ಆ ಮಾತನ್ನು ನೆನಪಿಸಿಕೊಳ್ಳದೇ ಈ ವನಾವರಣದೊಳಗೆ ಮುಂದೆ ಸಾಗಲು ಆಗುವುದಿಲ್ಲ. “ಒಂದು ಹಿಡಿ ಮಣ್ಣನ್ನು ಕ್ಷಣದಲ್ಲಿ ಸುಟ್ಟುಬಿಡಬಹುದು; ಆದರೆ ಅದೇ ಹಿಡಿ ಮಣ್ಣನ್ನು ಮತ್ತೆ ಸೃಷ್ಟಿಸಲು ನಮ್ಮಿಂದ ಆಗುವುದಿಲ್ಲ” — ಈ ಒಂದು ವಾಕ್ಯ ಕಾಡುಗಿಚ್ಚಿನ ನಿಜವಾದ ಪರಿಣಾಮ ಮತ್ತು ಅರ್ಥವನ್ನು ತೆರೆದಿಡುತ್ತದೆ.
ನಾವು ಯಾವತ್ತೂ ಕಾಡನ್ನು ನೋಡೋದು ಮೇಲ್ಮೈಯಲ್ಲಿ. ಓಡುವ ಜಿಂಕೆ, ದೂರದಲ್ಲಿ ಕಾಣಿಸುವ ಆನೆ, ಮರದ ಮೇಲಿನ ಕೋಗಿಲೆಯ ಹಾಡು, ಕೊಂಬೆಯ ಮೇಲೆ ಜೋತಾಡುವ ಜೇನು, ಕಣ್ಣೆದುರೇ ಹಾರಾಡುವ ಚಿಟ್ಟೆ, ಪತಂಗ, ಬಣ್ಣ ಬಣ್ಣದ ಹೂಗಳು… ಇವೆಲ್ಲ ಕಣ್ಣಿಗೆ ಬೀಳುವವು. ಆದರೆ ಕಾಡಿನ ನಿಜ ಮೂಲ ಅದಲ್ಲ . ಅದು ಮಣ್ಣಿನೊಳಗೆ ನಿಗೂಢವಾಗಿದೆ. ಆಳದಲ್ಲೇಕೆ ನಮ್ಮ ಕೈಗೆಟಕುವ ತರೆಗೆಲೆಯಡಿಯ ಒಂದು ಹಿಡಿ ಮಣ್ಣಿನೊಳಗೆ ಲಕ್ಷಾಂತರ ಜೀವಿಗಳು ಇವೆ. ಅವು ಕಣ್ಣಿಗೆ ಕಾಣಿಸುವುದಿಲ್ಲ, ಆದರೆ ಕಾಡಿನ ಇಡೀ ಜೀವಚಕ್ರ ಅವುಗಳ ಮೇಲೆ ನಿಂತಿದೆ.
ಕಾಡಿಗೆ ಬೆಂಕಿ ಬಿದ್ದಾಗ ಪತ್ರಕರ್ತನೊಬ್ಬ ಅರಣ್ಯಾಧಿಕಾರಿಗಳಿಗೆ ಕೇಳಿದ ಪ್ರಶ್ನೆ ನೆನಪಾಗುತ್ತದೆ — “ಕಾಡಿಗೆ ಬೆಂಕಿ ಬಿದ್ದಾಗ ಪ್ರಾಣಿಗಳು ಓಡಿ ಹೋಗುವುದಿಲ್ಲವೇ? ಆನೆ ಕಾಟಿ ಜಿಂಕೆ ಇವೆಲ್ಲ ತಪ್ಪಿಸಿಕೊಳ್ಳುವುದನ್ನು ನಾನು ಕಣ್ಣಾರೆ ಕಂಡಿದ್ದೇನೆ “-
ಈ ಪ್ರಶ್ನೆಗೆ ಉತ್ತರ ಇದೆ, ಆದರೆ ಅದು ಸಂಪೂರ್ಣ ಉತ್ತರ ಅಲ್ಲ. ಹೌದು, ಕೆಲವು ಪ್ರಾಣಿಗಳು ಓಡುತ್ತವೆ. ತಪ್ಪಿಸಿಕೊಳ್ಳುತ್ತವೆ. ನಮಗೆ ಸುಲಭಗ್ರಹಿಯವಲ್ಲದ ಮಣ್ಣಿನೊಳಗಿನ ಅಜ್ಞಾತ ಜೀವಿಗಳಿಗೆ ಓಡುವ ದಾರಿ ಇಲ್ಲ. ಎಲೆಗಳ ಕೆಳಗೆ, ಬೇರುಗಳ ಸುತ್ತ, ಮಣ್ಣಿನ ಪದರಗಳಲ್ಲಿ ಜೀವಿಸುವ ಅನೇಕ ಸೂಕ್ಷ್ಮ ಜೀವಿಗಳು ಬೆಂಕಿಗೆ ಸಿಕ್ಕಿದರೆ ಕ್ಷಣದಲ್ಲಿ ನಾಶವಾಗುತ್ತವೆ. ಆ ನಾಶ ನಮಗೆ ಕಾಣುವುದಿಲ್ಲ. ಆದ್ದರಿಂದ ನಾವು ಅದನ್ನು ಲೆಕ್ಕಕ್ಕೆ ತೆಗೆದುಕೊಳ್ಳುವುದಿಲ್ಲ.
ಕಾಡುಬೆಂಕಿಯ ನಂತರ ಮೊದಲ ಮಳೆಗೆ ಹುಲ್ಲು ಮತ್ತೆ ಮೊದಲಿನಂತೆ ಹುಟ್ಟುತ್ತದೆ. ಕೆಲವು ಗಿಡಗಳು ಮತ್ತೆ ಹಸಿರಾಗುತ್ತವೆ. ಅದರ ಕಾರಣ ಅವುಗಳ ಬೇರುಗಳಲ್ಲಿ ಉಳಿದಿರುವ ಜೀವ.ಆದರೆ ಜೀವಜಂತುಗಳ ವಿಷಯದಲ್ಲಿ ಅದೇ ಆಗುವುದಿಲ್ಲ. ಒಮ್ಮೆ ನಾಶವಾದ ಜೀವಸಂಪತ್ತು ಮತ್ತೆ ಅಷ್ಟೇ ಸರಳವಾಗಿ ಮರಳಿ ಹುಟ್ಟಲಾರವು. ಅದರ ಪರಿಣಾಮ ನಿಧಾನವಾಗಿ ಗೋಚರಿಸುತ್ತದೆ. ಮಣ್ಣಿನ ಗುಣ ಕುಸಿತ, ಸಸ್ಯಗಳ ಬೆಳವಣಿಗೆ ಕುಂದು, ಕೊನೆಗೆ ಸಂಪೂರ್ಣ ಪರಿಸರ ಸಮತೋಲನದ ವ್ಯತ್ಯಯ.
ಅಭಿವೃದ್ಧಿ ಎಂಬ ಹೆಸರಿನಲ್ಲಿ ಕಾಡು ದಿನೇ ದಿನೇ ಕಡಿಮೆಯಾಗುತ್ತಿದೆ. ಅತಿಕ್ರಮಣ ಹೆಚ್ಚುತ್ತಿದೆ. ಇಂತಹ ಸಂದರ್ಭದಲ್ಲೇ ಕಾಡುಗಿಚ್ಚು ಸಂಭವಿಸಿದರೆ ಅದರ ಪರಿಣಾಮ ಇನ್ನಷ್ಟು ತೀವ್ರವಾಗುತ್ತದೆ. ಒಂದು ಕ್ಷಣದಲ್ಲಿ ಸಾವಿರಾರು ಹೆಕ್ಟೇರು ಪ್ರದೇಶ ಸುಟ್ಟುಹೋಗಬಹುದು. ಅದನ್ನು ಮರಳಿ ಕಾಡಾಗಿಸಲು ವರ್ಷಗಳಷ್ಟೇ ಅಲ್ಲ, ತಲೆಮಾರುಗಳ ಕಾಲ ಬೇಕಾಗುತ್ತದೆ.ಕಾಡಿಗೆ ಬೆಂಕಿ ಹಚ್ಚುವವನು ದೊಡ್ಡ ಅಪರಾಧಿ ಎಂಬುದು ಸರಳವಾಗಿ ಹೇಳಬಹುದಾದ ಮಾತು. ಆದರೆ ಅದಕ್ಕಿಂತ ಮುಖ್ಯವಾದುದು — ಬೆಂಕಿ ಹಚ್ಚುವ ಮನಸ್ಸಿನ ಹಿಂದೆ ಇರುವ ಅರಿವಿನ ಕೊರತೆ.
ಒಂದು ಕಡ್ಡಿ ಹೊತ್ತಿಸಿದರೆ ಏನಾಗುತ್ತದೆ ಎಂಬುದನ್ನು ನಾವು ಅರ್ಥಮಾಡಿಕೊಂಡಿಲ್ಲ. ಅದು ಕೇವಲ ಒಣ ಎಲೆಗಳನ್ನು ಸುಡುವುದಲ್ಲ. ಅದು ಕಾಡಿನ ಮೂಲವನ್ನು ಹಾನಿಗೊಳಿಸುವುದು. ಕಾಡಿಗೆ ತನ್ನನ್ನು ತಾನೇ ಮರುಜೀವನಗೊಳಿಸಿಕೊಳ್ಳುವ ಶಕ್ತಿಯಿದೆ. ಆದರೆ ಅದಕ್ಕೂ ಮಿತಿಯಿದೆ. ನಾವು ಅದನ್ನು ಮೀರಿದಾಗ, ಪ್ರಕೃತಿ ನಮ್ಮ ತಪ್ಪನ್ನು ಸರಿಪಡಿಸಲು ಹೆಚ್ಚು ಕಾಲ ತೆಗೆದುಕೊಳ್ಳುತ್ತದೆ. ಕೆಲವೊಮ್ಮೆ ಸರಿಪಡಿಸಲಾಗುವುದೇ ಇಲ್ಲ.
ಈ ಹಿನ್ನೆಲೆಯಲ್ಲಿ ಕಾಡುಗಿಚ್ಚು ಬಗ್ಗೆ ಮಾತನಾಡುವಾಗ ಕೇವಲ ಬೆಂಕಿಯ ದೃಶ್ಯವನ್ನೇ ನೋಡಬಾರದು. ಅದರೊಳಗೆ ಸುಡುವ ಮಣ್ಣನ್ನು, ಅದರೊಳಗಿನ ಕಾಣದ ಜೀವಿಗಳನ್ನು, ಮತ್ತು ಅದರಿಂದ ಉಂಟಾಗುವ ದೀರ್ಘಕಾಲದ ಪರಿಣಾಮಗಳನ್ನು ಮನಸ್ಸಿನಲ್ಲಿ ಡಬೇಕು.ಅರಿವು ಇಲ್ಲದ ಜಾಗದಲ್ಲಿ ಬೆಂಕಿ ಸುಲಭವಾಗಿ ಹೊತ್ತಿಕೊಳ್ಳುತ್ತದೆ.ಆ ಅರಿವು ಇದ್ದರೆ, ಕಾಡು ಉಳಿಯುವ ಸಾಧ್ಯತೆ ಹೆಚ್ಚುತ್ತದೆ.ಪಶ್ಚಿಮ ಘಟ್ಟವನ್ನು ಯಾವತ್ತೂ ನಕ್ಷೆಯಲ್ಲಿ ನೋಡಿ ಅರ್ಥಮಾಡಿಕೊಳ್ಳಲು ಆಗುವುದಿಲ್ಲ; ಅದರ ನಿಜವಾದ ಸ್ವಭಾವ ಅದರೊಳಗೆ ಕಾಲಿಟ್ಟಾಗ ಮಾತ್ರ ತಿಳಿಯುತ್ತದೆ. ಕಡಿದಾದ ಬೆಟ್ಟಗಳು, ಆಳವಾದ ಕಣಿವೆಗಳು, ಮಧ್ಯೆ ಮಧ್ಯೆ ಮಸುಕಾದ ದಾರಿಗಳು — ಇವುಗಳ ಮಧ್ಯೆ ಹರಡಿಕೊಂಡಿರುವ ಈ ಭೂಪ್ರದೇಶಕ್ಕೆ ಬೆಂಕಿ ಬಿದ್ದರೆ, ಅದನ್ನು ಆರಿಸಲು ತಕ್ಷಣಕ್ಕೆ ನೀರುಯಂತ್ರಗಳಾಗಲಿ, ವಾಹನಗಳಾಗಲಿ, ಅಥವಾ ಮಾನವನ ಕಾಲೇ ಆಗಲಿ ಅಷ್ಟು ಸುಲಭವಾಗಿ ತಲುಪುವುದೇ ಅಸಾಧ್ಯ.
ಇಂತಹ ದುರ್ಗಮ ಕಾಡಿನ ಒಳಗಡೆ ಒಂದು ಕಿಡಿ ಹೊತ್ತಿಕೊಂಡರೆ ಅದು ಕೇವಲ ಒಂದು ಸ್ಥಳದಲ್ಲಿ ನಿಲ್ಲುವುದಿಲ್ಲ; ಭೂ ವಿನ್ಯಾಸವೇ ಅದನ್ನು ಹರಡುವಂತೆ ಮಾಡುತ್ತದೆ. ಹೀಗಿರುವಾಗ, ಬೆಂಕಿ ಬಿದ್ದ ನಂತರ ಅದನ್ನು ನಿಯಂತ್ರಿಸುವ ಪ್ರಯತ್ನಕ್ಕಿಂತ, ಅದು ಹುಟ್ಟದೇ ಇರುವಂತೆ ತಡೆಯುವ ಜಾಗೃತಿಯೇ ಇಲ್ಲಿ ಮುಖ್ಯವಾಗುತ್ತದೆ. ಪಶ್ಚಿಮ ಘಟ್ಟದ ಅನೇಕ ಭಾಗಗಳನ್ನು ಅನೇಕ ವರ್ಷಗಳಿಂದ ಚಾರಣದ ದಾರಿಯಲ್ಲಿ ಕಾಲಿನಿಂದ ಅಳೆಯುತ್ತಾ ಕಂಡುಕೊಂಡಿರುವ ಪರಿಸರವಾದಿ ಗೆಳೆಯ ದಿನೇಶ್ ಹೊಳ್ಳರ ಮಾತು ಇದನ್ನೇ ನಿಖರವಾಗಿ ಹೇಳುತ್ತದೆ, “ಬೆಂಕಿಯನ್ನು ನಂದಿಸುವುದಕ್ಕಿಂತ, ಅದು ಹೊತ್ತಿಕೊಳ್ಳದಂತೆ ತಡೆಯುವ ಜಾಗೃತಿ ಮಾನವನಲ್ಲಿ ಮೂಡದಿದ್ದರೆ, ಕಾಡು ಉಳಿಯುವುದೇ ಕಷ್ಟ.” ಎಂಬ ಅವರ ಅಭಿಪ್ರಾಯ ಕೇವಲ ಎಚ್ಚರಿಕೆ ಅಲ್ಲ, ಅನುಭವದಿಂದ ಬಂದ ನಿರ್ಣಯ.
ಪ್ರತೀ ಸಲ ಕಾಡಿನಲ್ಲಿ ಬೆಂಕಿ ಹೊತ್ತಿಕೊಂಡಾಗ, ಅರಣ್ಯ ಇಲಾಖೆಯ ಅಧಿಕಾರಿಗಳು ತಲುಪುವ ಮೊದಲೇ, ಆ ಸ್ಥಳವನ್ನು ಗುರುತಿಸಿ ಓಡಿಬಂದು ಬೆಂಕಿ ಆರಿಸುವ ಕೆಲಸ ಮಾಡುವವರು ಸ್ಥಳೀಯರು. ಕಾಡಿನ ಅಂಚಿನಲ್ಲಿ ಬದುಕುವ ಜನರ ಈ ತಕ್ಷಣದ ಪ್ರತಿಕ್ರಿಯೆ ಇಲ್ಲದೆ ಯಾವತ್ತೂ ಕಾಡನ್ನು ಉಳಿಸುವುದು ಕಷ್ಟ ಎಂಬುದು ಇಲ್ಲಿ ಸ್ಪಷ್ಟವಾಗುತ್ತದೆ. ಆದ್ದರಿಂದ ಕಾಡು ರಕ್ಷಣೆಯ ವಿಚಾರದಲ್ಲಿ ಕೇವಲ ಅಧಿಕೃತ ವ್ಯವಸ್ಥೆಗಳ ಮೇಲೆ ನಂಬಿಕೆ ಇಡುವುದಕ್ಕಿಂತ, ಕಾಡಿಗೆ ಹತ್ತಿರವಿರುವ ಜನರೊಂದಿಗೆ ಅರಣ್ಯ ಇಲಾಖೆ ಬೆಸೆದುಕೊಳ್ಳುವ ಸಂಬಂಧವೇ ಹೆಚ್ಚು ಬಲವಾಗಿರಬೇಕು; ಅಲ್ಲಿ ಹುಟ್ಟುವ ವಿಶ್ವಾಸ ಮತ್ತು ಸಹಕಾರವೇ ಕಾಡಿನ ಭವಿಷ್ಯವನ್ನು ನಿಶ್ಚಯಿಸುವ ನಿಜವಾದ ಶಕ್ತಿ.





