ಮಂಗಳೂರು: ಉಜಿರೆ ಬಾಲಕನ ಅಪಹರಣ ಪ್ರಕರಣವನ್ನು ಕೇವಲ 36 ಗಂಟೆಯಲ್ಲೇ ಭೇದಿಸಿದ ದ.ಕ. ಜಿಲ್ಲಾ ಎಸ್ಪಿ ಲಕ್ಷ್ಮೀಪ್ರಸಾದ್ ನೇತೃತ್ವದ ಪೊಲೀಸ್ ತಂಡವನ್ನು ಸಂಸದ ನಳೀನ್ ಕುಮಾರ್ ಕಟೀಲ್ ಸಮ್ಮುಖದಲ್ಲಿ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅಭಿನಂದಿಸಿದ್ದಾರೆ.
ಪೊಲೀಸ್ ತಂಡವನ್ನು ಅಭಿನಂದಿಸಿ ಮಾತನಾಡಿದ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಬಾಲಕನ ಅಪಹರಣ ಪ್ರಕರಣ ಜಿಲ್ಲೆಯ ಜನತೆಯ ಆತಂಕಕ್ಕೆ ಕಾರಣವಾಗಿತ್ತು. ಪೊಲೀಸ್ ತಂಡ ಯೋಜನಾ ಬದ್ಧವಾಗಿ ಕಾರ್ಯಾಚರಣೆ ಮಾಡಿ ಆರೋಪಿಗಳನ್ನು ಬಂಧಿಸಿರುವುದು ಶ್ಲಾಘನೀಯ. ಪೊಲೀಸರ ಈ ಕಾರ್ಯ ಎಲ್ಲರಿಗೂ ಪ್ರೇರಣೆಯಾಗಲಿ ಎಂದರು.
ಜಿಲ್ಲೆಯಲ್ಲಿ ಕರ್ತವ್ಯನಿರತ ಪೊಲೀಸರ ಮೇಲೆ ಹಲ್ಲೆ ನಡೆಯುತ್ತಿರುವ ಕೃತ್ಯ ಖಂಡನೀಯ. ಇಂತಹ ಆರೋಪಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಕ್ಕೆ ಪೊಲೀಸರಿಗೆ ಸೂಚನೆ ನೀಡಲಾಗಿದೆ ಎಂದು ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.
ಅಭಿನಂದನೆ ಸ್ವೀಕರಿಸಿ ಮಾತನಾಡಿದ ಜಿಲ್ಲಾ ಎಸ್ಪಿ ಲಕ್ಷ್ಮೀಪ್ರಸಾದ್, ಕಾರ್ಯಾಚರಣೆಯ ಹಿಂದೆ ಇಡೀ ಪೊಲೀಸ್ ತಂಡದ ಶ್ರಮವಿದೆ. ಅಧಿಕಾರಿಗಳು ಘಟನೆ ನಡೆದ ಬಳಿಕ ಎರಡು ದಿನ ನಿದ್ದೆಬಿಟ್ಟು ಕೆಲಸ ಮಾಡಿದ್ದಾರೆ. ಎಲ್ಲರ ಸಹಕಾರದಿಂದ ಇದು ಸಾಧ್ಯವಾಗಿದೆ ಎಂದರು.
ಈ ಸಂಧರ್ಭದಲ್ಲಿ ಮೇಯರ್ ದಿವಾಕರ್, ಡಿವೈಎಸ್ಪಿ ವೆಲೆಂಟೈನ್ ಡಿಸೋಜ, ಇನ್‌ಸ್ಪೆಕ್ಟರ್ ಸಂದೇಶ್, ಎಸ್ಸೈಗಳಾದ ನಂದಕುಮಾರ್, ರವಿ ಬಿ.ಎಸ್., ಪವನ್, ಈರಯ್ಯ, ಬಿಜೆಪಿ ಜಿಲ್ಲಾ ವಕ್ತಾರ ಜಗದೀಶ್ ಶೇಣವ ಉಪಸ್ಥಿತರಿದ್ದರು.