ಮಂಗಳೂರು: ಕಾಸರಗೋಡು ಜಿಲ್ಲೆಯಲ್ಲಿ ವಿಜಯಯಾತ್ರೆ ಕಾರ್ಯಕ್ರಮಕ್ಕೆ ಆಗಮಿಸಿದ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಕರ್ನಾಟಕ ಹಿಂದು ಧಾರ್ಮಿಕ ದತ್ತಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಭಾನುವಾರ ಮಂಗಳೂರು ವಿಮಾನ ನಿಲ್ದಾಣದಲ್ಲಿ ಭೇಟಿಯಾದರು.
ಅಯೋಧ್ಯಾ ರಾಮ ಜನ್ಮಭೂಮಿಯಲ್ಲಿ ನಿರ್ಮಾಣವಾಗುವ ರಾಮ ಮಂದಿರಕ್ಕೆ ಭವಿಷ್ಯದಲ್ಲಿ ಭೇಟಿ ನೀಡುವ ಕರ್ನಾಟಕದ ರಾಮಭಕ್ತರ ಸೌಲಭ್ಯಕ್ಕಾಗಿ ಸುಸಜ್ಜಿತ ಯಾತ್ರಿ ನಿವಾಸ ನಿರ್ಮಾಣಕ್ಕೆ 5ಎಕರೆ ಭೂಮಿ ಮಂಜೂರು ಮಾಡುವಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸಲ್ಲಿಸಿದ ಮನವಿ ಪುರಸ್ಕರಿಸುವಂತೆ ಯೋಗಿ ಆದಿತ್ಯನಾಥ್ ಅವರಲ್ಲಿ ಸಚಿವ ಕೋಟ ಕೋರಿದರು.
ಅಯೋಧ್ಯಾದಲ್ಲಿ ಕರ್ನಾಟಕ ಯಾತ್ರಿ ನಿವಾಸಕ್ಕಾಗಿ ಶೀಘ್ರದಲ್ಲಿ ಭೂಮಿ ಒದಗಿಸಿ ಕೊಟ್ಟರೆ, ನಮ್ಮ ಸರಕಾರ ಯಾತ್ರಿ ನಿವಾಸ ನಿರ್ಮಾಣಕ್ಕೆ ಬೇಕಾಗುವ ವ್ಯವಸ್ಥೆ ಮಾಡುತ್ತದೆ ಎಂದು ಸಚಿವ ಕೋಟ ವಿವರಿಸಿದರು. ಮನವಿಗೆ ಸ್ಪಂದಿಸಿದ ಯೋಗಿ ಅವರು, ಕೂಡಲೇ ಭೂಮಿ ಮಂಜೂರು ಮಾಡಿ, ಕರ್ನಾಟಕದ ರಾಮ ಭಕ್ತರಿಗೆ ಸೌಲಭ್ಯ ಕಲ್ಪಿಸಲು ಅನುಕೂಲ ಮಾಡಿಕೊಡುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ವಾಸುದೇವ ಭಟ್ ಪೆರಂಪಳ್ಳಿ ಸಚಿವರ ಜೊತೆಯಲ್ಲಿದ್ದರು.