ಕೋವಿಡ್ ಸೋಂಕು ನಿಯಂತ್ರಣಕ್ಕಾಗಿ ksrtc ವತಿಯಿಂದ ICU ಬಸ್!

ಬೆಂಗಳೂರು: ಐಸಿಯು ಮತ್ತು ಆಮ್ಲಜನಕ ಸಹಿತ ಹಾಸಿಗೆ ಸೌಲಭ್ಯ ಉಳ್ಳ ಸಾರಿಗೆ ಸುರಕ್ಷಾ ಸಂಚಾರಿ ಬಸ್‌ಗಳನ್ನು ಕೆಎಸ್‌ಆರ್‌ಟಿಸಿ ಸಿದ್ಧಪಡಿಸಿದ್ದು, ಸಾರಿಗೆ ಸಚಿವ ಲಕ್ಷ್ಮಣ ಸವದಿ ಅವರು ಬುಧವಾರ ಉದ್ಘಾಟಿಸಿದರು.

ಚಿತ್ರದುರ್ಗ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಕಲಬುರ್ಗಿ, ‌ಬೆಳಗಾವಿ, ಬೆಂಗಳೂರಿನಲ್ಲಿ 13 ಬಸ್‌ಗಳನ್ನು ಆಮ್ಲಜನಕ ಸಹಿತ ಸಂಚಾರಿ ಆಸ್ಪತ್ರೆಗಳನ್ನಾಗಿ ಪರಿವರ್ತನೆ ಮಾಡಲಾಗಿದೆ. ಇವುಗಳಲ್ಲಿ ಎರಡು ಬಸ್‌ಗಳನ್ನು ಆಂಬುಲೆನ್ಸ್ ಮಾದರಿಯಲ್ಲಿ ಪರಿವರ್ತಿಸಿ ಉಪಕರಣಗಳನ್ನು ಅಳವಡಿಸಲಾಗಿದೆ. ತಲಾ ₹10 ಲಕ್ಷ ವೆಚ್ಚವಾಗಿದ್ದು, ನಿಗಮವೇ ವೆಚ್ಚ ಭರಿಸಿಕೊಂಡಿದೆ ಎಂದು ಲಕ್ಷ್ಮಣ ಸವದಿ ತಿಳಿಸಿದರು. ‌

READ ALSO

ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿರುವ ಕಾರಣ ಬಸ್‌ಗಳನ್ನು ಈ ರೀತಿ ಪರಿವರ್ತಿಸಲಾಗುತ್ತಿದೆ. ವೈದ್ಯಕೀಯ ಉಪಕರಣಗಳನ್ನು ನಿರ್ವಹಿಸಲು ಖಾಸಗಿ ಸಹಭಾಗತ್ವ ದೊರೆತರೆ‌ ಎಲ್ಲ ಜಿಲ್ಲೆಗಳಲ್ಲಿಯೂ ಆಮ್ಲಜನಕ ಸಹಿತ ಹಾಸಿಗೆ ಸೌಲಭ್ಯ ಉಳ್ಳ ಬಸ್‌ಗಳನ್ನು ಒದಗಿಸಲು ಎಲ್ಲ ನಿಗಮಗಳಿಗೆ ನಿರ್ದೇಶನ ನೀಡಲಾಗಿದೆ. ಈ ಸಂಬಂಧ ಆರೋಗ್ಯ ಸಚಿವ ಕೆ.ಸುಧಾಕರ್ ಜತೆಯಲ್ಲೂ ಚರ್ಚಿಸಲಾಗಿದೆ ಎಂದು ಹೇಳಿದರು.  

‘ಕೋವಿಡ್ ಸೋಂಕು ಹೆಚ್ಚಾಗಿ ಆಸ್ಪತ್ರೆಗಳಲ್ಲಿ ಜಾಗ ಇಲ್ಲದಿದ್ದಾಗ ತಕ್ಷಣಕ್ಕೆ ಅವರಿಗೆ ಆಮ್ಲಜನಕ ನೀಡಲು ಈ ಬಸ್‌ಗಳು ಸಂಜೀವಿನಿಯಂತೆ ಉಪಕಾರಿ ಆಗಲಿವೆ. ಯಾವುದೇ ಜಿಲ್ಲೆಗಳಲ್ಲಿ ಆಮ್ಲಜನಕ ಸಹಿತ ಹಾಸಿಗೆಯ ಬಸ್‌ಗಳು ಅಗತ್ಯವಿದ್ದರೆ ಆಯಾ ಜಿಲ್ಲೆಗಳ ಸಾರಿಗೆ ನಿಗಮಗಳ ಅಧಿಕಾರಿಗಳನ್ನು ಸಂಪರ್ಕಿಸಬಹುದು’ ಎಂದು ತಿಳಿಸಿದರು.