ನವದೆಹಲಿ: ಯುವಕ, ಯುವತಿಯರ ಮದುವೆಗೆ ಏಕರೂಪದ ವಯಸ್ಸು ನಿಗದಿಪಡಿಸಬೇಕೆಂದು ಕೋರಿ ವಿವಿಧ ಹೈಕೋರ್ಟ್ ಗಳಲ್ಲಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂಕೋರ್ಟಿಗೆ ವರ್ಗಾಯಿಸಬೇಕೆಂದು ಸಲ್ಲಿಕೆಯಾಗಿರುವ ಅರ್ಜಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ನಿಂದ ನೋಟಿಸ್ ಜಾರಿ ಮಾಡಲಾಗಿದೆ.
ಸುಪ್ರೀಂಕೋರ್ಟ್ ಸಿಜೆ ಎಸ್.ಎ. ಬೋಬಡೆ, ನ್ಯಾಯಮೂರ್ತಿಗಳಾದ ಎ.ಎಸ್. ಬೋಪಣ್ಣ, ಬಾಲಸುಬ್ರಮಣಿಯನ್ ಅವರುಗಳಿದ್ದ ಪೀಠದಲ್ಲಿ ವಕೀಲ ಅಶ್ವಿನಿಕುಮಾರ್ ಉಪಾಧ್ಯಾಯ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ್ದು, ನಾಲ್ಕು ವಾರಗಳಲ್ಲಿ ಪ್ರತಿಕ್ರಿಯೆ ನೀಡಲು ಕೇಂದ್ರ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಲಾಗಿದೆ.
ರಾಜಸ್ಥಾನ ಮತ್ತು ದೆಹಲಿ ಹೈಕೋರ್ಟ್ ಗಳಲ್ಲಿ ಯುವಕ, ಯುವತಿಯರ ಮದುವೆಗೆ ಏಕರೂಪದ ವಯಸ್ಸು ನಿಗದಿಪಡಿಸಲಾಗಿರುವ ವಿಚಾರಣೆ ಬಾಕಿ ಇದೆ.
ಈ ಅರ್ಜಿ ವಿಚಾರಣೆಯನ್ನು ಸುಪ್ರೀಂಕೋರ್ಟ್ ಗೆ ವರ್ಗಾವಣೆ ಮಾಡಬೇಕು. ಈ ಮೂಲಕ ಭಿನ್ನ ಅಭಿಪ್ರಾಯ ಬರುವುದು ತಪ್ಪಿಸಬಹುದಾಗಿದ್ದು, ವಯಸ್ಸನ್ನು ಆಧರಿಸಿ ಸಮಾನತೆ ಮತ್ತು ನ್ಯಾಯ ಒದಗಿಸಬಹುದಾಗಿದೆ ಎಂದು ಹೇಳಲಾಗಿದೆ.
ಈಗಿನ ನಿಯಮದ ಪ್ರಕಾರ, ಮದುವೆಯಾಗಲು ಯುವತಿಯರಿಗೆ 18 ವರ್ಷ, ಯುವಕರಿಗೆ 21 ವರ್ಷ ವಯಸ್ಸು ನಿಗದಿ ಮಾಡಲಾಗಿದ್ದು, ಇದಕ್ಕೆ ಯಾವುದೇ ವೈಜ್ಞಾನಿಕ ಹಿನ್ನೆಲೆ ಇಲ್ಲ. ವಿಶ್ವದ 125 ದೇಶಗಳಲ್ಲಿ ಮದುವೆಗೆ ಏಕರೂಪದ ವಯಸ್ಸಿನ ಮಿತಿ ನಿಗದಿಪಡಿಸಲಾಗಿದೆ. ಭಾರತದಲ್ಲಿಯೂ ಯುವಕ-ಯುವತಿಯರಿಗೆ ಕನಿಷ್ಠ 21 ವರ್ಷ ವಯಸ್ಸಿನ ಮಿತಿ ನಿಗದಿಪಡಿಸಬೇಕೆಂದು ಹೇಳಲಾಗಿದ್ದು, ಈ ಕುರಿತಾದ ಪ್ರತಿಕ್ರಿಯೆಯನ್ನು ನಾಲ್ಕು ವಾರಗಳಲ್ಲಿ ತಿಳಿಸುವಂತೆ ಸುಪ್ರೀಂಕೋರ್ಟ್ ಪೀಠದಿಂದ ಕೇಂದ್ರ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಲಾಗಿದೆ.