ನವದೆಹಲಿ: ಮಸಾಲಾ ಪುಡಿಗಳ ಉತ್ಪಾದನಾ ಸಂಸ್ಥೆ ಎಂಡಿಎಚ್ನ ಮಾಲೀಕ ಧರ್ಮಪಾಲ ಗುಲಾಟಿ ಇಂದು ಮುಂಜಾನೆ 5.30ರ ವೇಳೆಗೆ ನಿಧನರಾಗಿದ್ದಾರೆ. ಅವರಿಗೆ 98 ವರ್ಷ ವಯಸ್ಸಾಗಿತ್ತು. ಕಳೆದ ಮೂರುವಾರಗಳಿಂದ ಅವರು ದೆಹಲಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯತ್ತಿದ್ದರು. ಇಂದು ಬೆಳಗ್ಗೆ ಅವರಿಗೆ ಹೃದಯ ಸ್ತಂಭನವಾಗಿತ್ತು ಎಂದು ಮೂಲಗಳು ತಿಳಿಸಿವೆ.
ಪಾಕಿಸ್ತಾನದ ಸಿಯಾಲ್ ಕೋಟ್ನಲ್ಲಿ 1923ರಲ್ಲಿ ಜನಿಸಿದ ಧರ್ಮಪಾಲ ಗುಲಾಟಿ ಅವರು ಆಪ್ತವಲಯದಲ್ಲಿ ದಾಲಾಜಿ, ಮಹಾಶಯಾಜಿ ಎಂದೇ ಕರೆಯಿಸಿಕೊಳ್ಳುತ್ತಿದ್ದವರು. ಬಾಲ್ಯದಲ್ಲೇ ಶಾಲೆ ಬಿಟ್ಟ ಅವರು ತಂದೆ ಆರಂಭಿಸಿದ ಮಸಾಲಾ ವ್ಯಾಪಾರಕ್ಕೆ ಜತೆಗೂಡಿದ್ದರು. ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ಸಂದರ್ಭದಲ್ಲಿ ಅವರು ಭಾರತಕ್ಕೆ ಆಗಮಿಸಿ ಅಮೃತಸರದಲ್ಲಿ ನಿರಾಶ್ರಿತರ ಶಿಬಿರದಲ್ಲಿ ಉಳಿದುಕೊಂಡಿದ್ದರು.
ನಂತರ ದೆಹಲಿಗೆ ಆಗಮಿಸಿ ಕರೋಲ್ ಬಾಗ್ನಲ್ಲಿ ಅಂಗಡಿಯೊಂದನ್ನು ತೆರೆದರು. ಅಧಿಕೃತವಾಗಿ ಕಂಪನಿಯನ್ನು ಆರಂಭಿಸಿದ್ದು 1959ರಲ್ಲಿ. ಮಸಾಲಾ ವ್ಯಾಪಾರವನ್ನು ಉದ್ಯಮ ಸ್ವರೂಪಕ್ಕೆ ತಂದ ಅವರು, ಎಂಡಿಎಚ್ ಮಸಾಲಾವನ್ನು ಜಗತ್ತಿಗೇ ಪರಿಚಯಿಸಿದರು. ಕಳೆದ ವರ್ಷ ಅವರು ಪದ್ಮಭೂಷಣ ಪ್ರಶಸ್ತಿಗೆ ಭಾಜನರಾಗಿದ್ದರು. ಎಂಡಿಎಚ್ ಮಸಾಲಾ ಕಂಪನಿ ಹೇಳುವ ಪ್ರಕಾರ, ಗುಲಾಟಿ ತಮ್ಮ ವೇತನದ ಶೇಕಡ 90 ಪಾಲನ್ನು ದೇಣಿಗೆ ನೀಡಿದ್ದಾರೆ.
ಗುಲಾಟಿ ಅವರನ್ನು “ಕಿಂಗ್ ಆಫ್ ಸ್ಪೈಸ್” ಎಂದೇ ಕರೆಯಲಾಗುತ್ತಿತ್ತು. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ದೆಹಲಿಯ ಮಾತಾ ಚನ್ನನ್ ದೇವಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಮಹಾಶಯ್ ಎಂಬ ಹೆಸರಿನಿಂದ ಜನಪ್ರಿಯರಾಗಿರುವ ಎಂಡಿಎಚ್ ಮಾಲೀಕ ಧರ್ಮಪಾಲ್ ಅವರು ಎಂಡಿಎಚ್ ಮಸಾಲ ಕಂಪನಿ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುವ ಅಜ್ಜ ಎಂದೇ ಗುರುತಿಸಲ್ಪಡುತ್ತಿದ್ದರು.