ಒಂದು ರಾಷ್ಟ್ರ ಒಂದು ಚುನಾವಣೆ ಪ್ರಸ್ತಾಪಕ್ಕೆ ವಿರೋಧ ಪಕ್ಷದ ಆಕ್ಷೇಪ – ಶರ್ಟ್ ಕಳಚಿ ಸರ್ಕಾರದ ವಿರುದ್ಧ ಘೋಷಣೆ

ಬೆಂಗಳೂರು: ಇಂದು ಆರಂಭಗೊಂಡ ವಿಶೇಷ ಬಜೆಟ್ ಅಧಿವೇಶನ ನಿರೀಕ್ಷೆಯಂತೆ ಕಾಂಗ್ರೆಸ್ ಮತ್ತು ಬಿಜೆಪಿ ಮಧ್ಯೆ ಸಂಘರ್ಷಕ್ಕೆ ಸಾಕ್ಷಿಯಾಯಿತು. ಅಧಿವೇಶನದಲ್ಲಿ ಒಂದು ರಾಷ್ಟ್ರ ಒಂದು ಚುನಾವಣೆಯ ಮೇಲೆ ಚರ್ಚೆ ನಡೆಸಲು ಸ್ಪೀಕರ್ ಪ್ರಸ್ತಾಪಿಸಿದರು. ಇದಕ್ಕೆ ಕಾಂಗ್ರೆಸ್ ಪಕ್ಷದ ನಾಯಕರು ತೀವ್ರವಾಗಿ ವಿರೋಧ ವ್ಯಕ್ತಪಡಿಸಿದರು.

ಸ್ಪೀಕರ್ ಅವರು ತಮ್ಮ ವಿಶೇಷಾಧಿಕಾರ ಬಳಸಿ ಈ ವಿಷಯವನ್ನು ಚರ್ಚೆಗೆ ಸೇರಿಸಿದ್ದರು. ಇದಕ್ಕೆ ಆಕ್ಷೇಪಿಸಿದ ಮಾಜಿ ಸ್ಪೀಕರ್ ಹಾಗೂ ಕಾಂಗ್ರೆಸ್ ಸದಸ್ಯ ರಮೇಶ್ ಕುಮಾರ್, ಸ್ಪೀಕರ್ ವಿಶೇಷಾಧಿಕಾರದ ದುರುಪಯೋಗ ಸರಿಯಲ್ಲ ಎಂದು ಟೀಕಿಸಿದರು. ಯಾವ ನಿಯಮಾವಳಿಯಲ್ಲಿ ಈ ವಿಷಯ ತಂದಿದ್ದೀರಿ ಎಂದು ಪ್ರಶ್ನಿಸಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ಇದು ಯಾವ ನಿಯಮಾವಳಿಯಲ್ಲೂ ಬರುವುದಿಲ್ಲ. ಆದರೂ ಕೂಡ ಇದನ್ನು ತಂದಿದ್ದೀರಿ. ನಿಯಮದಲ್ಲಿ ಇಲ್ಲದೇ ಇರುವುದನ್ನು ಚರ್ಚೆ ಮಾಡಲು ಆಗುವುದಿಲ್ಲ. ಇದೊಂದು ಆರೆಸ್ಸೆಸ್ ಅಜೆಂಡಾ ಎಂದು ಸಿದ್ದರಾಮಯ್ಯ ಟೀಕಿಸಿದರು.

READ ALSO

ಈ ವೇಳೆ ಮಧ್ಯ ಪ್ರವೇಶಿಸಿದ ಸಿಎಂ ಯಡಿಯೂರಪ್ಪ, ಒನ್ ನೇಷನ್ ಒನ್ ಎಲೆಕ್ಷನ್ ವಿಷಯದ ಮೇಲೆ ಚರ್ಚೆಗೆ ಬಿಎಸಿ ಸಭೆಯಲ್ಲಿ ತೀರ್ಮಾನ ಆಗಿದೆ. ಇದು ಯಾರಿಗೆ ಒಪ್ಪಿಗೆ ಇದೆಯೋ ಇಲ್ಲವೋ ಎಂಬುದು ಬೇಡ. ಆದರೆ, ತೀರ್ಮಾನ ಆದಂತೆ ಚರ್ಚೆ ಆಗಲಿ. ಸಭಾಧ್ಯಕ್ಷರು ತಂದ ನಿಯಮವನ್ನು ಪ್ರಶ್ನಿಸಲು ಯಾರಿಗೂ ಅಧಿಕಾರ ಇಲ್ಲ. ಕಾನೂನು ರೀತಿ ಸಭಾಧ್ಯಕ್ಷರು ವಿಷಯ ಪ್ರಸ್ತಾಪಿಸಿದ್ದಾರೆ ಎಂದು ವಿಪಕ್ಷ ಸದಸ್ಯರಿಗೆ ತಿರುಗೇಟು ನೀಡಿದರು.

ನಿಮಗೆ ಇಷ್ಟ ಇಲ್ಲದಿದ್ದರೆ ಹೇಳಬೇಡಿ. ಆದರೆ, ವಿರೋಧ ಮಾತ್ರ ಮಾಡಬೇಡಿ. ವಿರೋಧ ಪಕ್ಷದವರಿಗೆ ಯಾವುದರ ಮೇಲೂ ನಂಬಿಕೆ ವಿಶ್ವಾಸ ಇಲ್ಲ. ನೀವು ಗಲಾಟೆ ಮಾಡದೇ ಬಂದು ಚರ್ಚೆ ಮಾಡುವುದನ್ನು ಬಿಟ್ಟು ಹೀಗೆ ನಡೆದುಕೊಳ್ಳುವುದು ಸರಿಯಲ್ಲ. ನಿಮ್ಮ ನಡವಳಿಗೆ ನಿಜವಾಗಿಯೂ ನಾಚಿಕೆಗೇಡಿನ ಸಂಗತಿಯಾಗಿದೆ. ಇದನ್ನು ರಾಜ್ಯದ ಜನರು ಸಹಿಸುವುದಿಲ್ಲ ಎಂದು ಯಡಿಯೂರಪ್ಪ ಕೆಂಡಕಾರಿದರು.

ಸದನದಲ್ಲಿ ಪ್ರತಿಭಟನೆ ನಡೆಯುತ್ತಿದ್ದ ವೇಳೆ ಕಾಂಗ್ರೆಸ್ ಶಾಸಕ ಬಿ.ಕೆ.ಸಂಗಮೇಶ್ ತಮ್ಮ ಶರ್ಟ್ ಕಳಚಿ ತೋಳನ್ನು ಮೇಲೆತ್ತಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಿದ್ದರು. ಇದರಿಂದ ಮತ್ತಷ್ಟು ಕೆರಳಿದ ಕಾಗೇರಿ ಅವರು, ಒಬ್ಬ ಹಿರಿಯ ಸದಸ್ಯರಾಗಿ ನಡೆದುಕೊಳ್ಳುವುದು ಹೀಗೆನಾ? ನಿಮ್ಮ ನಡವಳಿಕೆಯನ್ನು ತಿದ್ದಿಕೊಳ್ಳದಿದ್ದರೆ ಕ್ರಮ ಕೈಗೊಳ್ಳಬೇಕಾಗುತ್ತದೆ. ಸದನದಿಂದ ಹೊರ ಹಾಕಬೇಕಾಗುತ್ತದೆ ಎಂದು ಗಂಭೀರ ಎಚ್ಚರಿಕೆ ನೀಡಿದರು.