
ಬೆಳ್ತಂಗಡಿ: ದೇಶ ನಿರ್ಮಾಣಕ್ಕೆ ಪಣ ತೊಡಬೇಕಾಗಿರುವ ಯುವಜನತೆಗೆ ಮೃತ್ಯುಪಾಶವಾಗಿ ಪರಿಣಮಿಸಿ, ಅವರನ್ನು ಮಾನಸಿಕ ಖಿನ್ನತೆಗೆ ದೂಡಿ, ಆತ್ಮಹತ್ಯೆಗೆ ಪ್ರಚೋದಿಸುತ್ತಿರುವುದರ ಜೊತೆಗೆ ಕುಟುಂಬ ವ್ಯವಸ್ಥೆ, ನೈತಿಕ ಮೌಲ್ಯಗಳು, ಸಾಮಾಜಿಕ ಸ್ವಾಸ್ಥ್ಯಕ್ಕೆ ಅತ್ಯಂತ ಮಾರಕ ಮತ್ತು ಕಂಟಕವಾಗಿ ಪರಿಣಮಿಸಿರುವ ಡೆಡ್ಲಿ ಆನ್‌ಲೈನ್ ಗೇಮ್ ಮತ್ತು ಬೆಟ್ಟಿಂಗ್ ಭೂತಕ್ಕೆ ಈ ಕೂಡಲೇ ಸಂಪೂರ್ಣ ಕಡಿವಾಣ ಹಾಕಿ ರಾಜ್ಯದ ವಿದ್ಯಾರ್ಥಿಗಳು ಹಾಗೂ ಯುವಜನತೆಯನ್ನು ಕಾಪಾಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್ ಉಜಿರೆ ಸಭಾಪತಿಗಳನ್ನು ಕೋರಿದ್ದಾರೆ.
ರಾಜ್ಯದಲ್ಲಿ ಡೆಡ್ಲಿ ಆನ್‌ಲೈನ್ ಗೇಮ್‌ಗೆ ಯುವಜನರು ಪ್ರತಿನಿತ್ಯ ಆಹುತಿಯಾಗುತ್ತಿದ್ದಾರೆ. ಕಳೆದ 4-5 ತಿಂಗಳಲ್ಲಿ ರಾಜ್ಯದಲ್ಲಿ 16 ಕ್ಕೂ ಹೆಚ್ಚು ಜನ ಆನ್‌ಲೈನ್ ಗೇಮ್ಮ ಬೆಟ್ಟಿಂಗ್ ಗೆ ಬಲಿಯಾಗಿದ್ದಾರೆ ಎಂದು ವರದಿಯಾಗಿದೆ. ಆದರೆ ಇವು ಕೇವಲ ವರದಿಯಾದ ಪ್ರಕರಣಗಳ ಸಂಖ್ಯೆ ಮಾತ್ರ. ಸಮಾಜದ ಭೀತಿಯಿಂದ ಹಲವಾರು ಪ್ರಕರಣಗಳು ಬಯಲಾಗದೇ ಹಾಗೇ ಉಳಿದಿವೆ. ಆತ್ಮಹತ್ಯೆಗೆ ಶರಣಾದವರಲ್ಲಿ ಯುವಜನರು ಮತ್ತು ಗ್ರಾಮೀಣ ಪ್ರದೇಶದವರೇ ಹೆಚ್ಚಾಗಿದ್ದಾರೆ. ಲಕ್ಷಗಟ್ಟಲೇ ಸಾಲ ಮಾಡಿ ಹಣ ಕಳೆದುಕೊಂಡ ಹಲವಾರು ವಿದ್ಯಾರ್ಥಿಗಳು ಕೂಡ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಆನ್‌ಲೈನ್ ಗೇಮಿಂಗ್ ಅನ್ನೋದು ಕೆಲವರಿಗೆ ಮನರಂಜನೆಯಾದರೆ, ಮತ್ತೆ ಕೆಲವರಿಗೆ ಜೂಜು-ಮೋಜು ಆದರೆ ಬಹುತೇಕರಿಗೆ ಅದು ಪ್ರಾಣಕ್ಕೆ ಕುತ್ತು ತರುವ ಮೃತ್ಯುಪಾಶ! “ಆಟ’ ದ ಹೆಸರಲ್ಲಿ ಆರಂಭವಾಗುವ ಹವ್ಯಾಸವು ನಂತರದಲ್ಲಿ ವ್ಯಸನವಾಗಿ ಬೆಳೆದು, ಕೊನೆಗೆ ಜೀವನವನ್ನೇ ಕಸಿದುಕೊಳ್ಳುತ್ತಿರುವ ಮಟ್ಟಕ್ಕೆ ತಲುಪುತ್ತಿದೆ. ಆಘಾತಕಾರಿ ಅಂಶವೆಂದರೆ ಈ ರೀತಿ ಆತ್ಮಹತ್ಯೆಯ ದಾರಿ ಹಿಡಿಯುತ್ತಿರುವ ಬಹುತೇಕರೆಲ್ಲರೂ ಸರಿಸುಮಾರು 20 ರಿಂದ 35 ರ ವಯೋಮಾನದವರು.
ಹಣ ಕಳೆದುಕೊಳ್ಳುತ್ತಿರುವವರಲ್ಲಿ ಬಹುತೇಕರು ಸಾಲದ ಸುಳಿಗೆ ಸಿಲುಕಿರುತ್ತಾರೆ. ಈ ವಿಚಾರವನ್ನು ಸ್ನೇಹಿತರು, ಕುಟುಂಬದ ಸದಸ್ಯರ ಬಳಿಯೂ ಹೇಳಿಕೊಳ್ಳಲಾಗದೆ ಮಾನಸಿಕ ಒತ್ತಡಕ್ಕೆ ಸಿಲುಕಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಒಂದೆರಡು ಕಡೆ ಮರ್ಯಾದೆಗೆ ಅಂಜಿ ಇಡೀ ಕುಟುಂಬವೇ ಆತ್ಮಹತ್ಯೆಗೆ ಶರಣಾಗಿರುವಂಥ ಹೃದಯ ವಿದ್ರಾವಕ ಪ್ರಕರಣಗಳೂ ನಡೆದಿವೆ. ಜೊತೆಗೆ ವಿದ್ಯಾರ್ಥಿಗಳು ಈ ಖೆಡ್ಡಾದೊಳಗೆ ಸಿಲುಕುತ್ತಿರುವುದು ಅತ್ಯಂತ ಆತಂಕಕ್ಕೆ ಎಡೆಮಾಡಿದೆ. ಕೆಲವರು ಶಿಕ್ಷಣವನ್ನು ಅರ್ಧದಲ್ಲೇ ಮೊಟಕುಗೊಳಿಸಿದ್ದರೆ ಮತ್ತೆ ಕೆಲವರು ಓದುವಾಗಲೇ ಈ ಚಟಕ್ಕೆ ಬಿದ್ದು ಸರ್ವನಾಶದ ದಾರಿ ಹಿಡಿದಿದ್ದಾರೆ ಎಂದು ನಾಯಕ್ ಅವರು ವಿಧಾನ ಪರಿಷತ್ ಅಧಿವೇಶನ ಸಂದರ್ಭ ಸಭಾಪತಿಗಳ ಗಮನ ಸೆಳೆದಿದ್ದಾರೆ.