ನವದೆಹಲಿ: ಪಾಕಿಸ್ತಾನದ ಉಗ್ರ ಸಂಘಟನೆಯೊಂದಿಗೆ ನಂಟು ಹೊಂದಿದ್ದ ಶಂಕೆಯಲ್ಲಿ ರಾಷ್ಟ್ರೀಯ ತನಿಖಾ ದಳ ಸೋಮವಾರ ಬೆಳಿಗ್ಗೆ ದೆಹಲಿ, ಕೇರಳ, ಕರ್ನಾಟಕ ಸೇರಿದಂತೆ ಹತ್ತು ಕಡೆಗಳಲ್ಲಿ ದಾಳಿ ನಡೆಸಿ ಐವರನ್ನು ವಶಕ್ಕೆ ಪಡೆದುಕೊಂಡಿದೆ.
ಈ ಕುರಿತು 48 ಗಂಟೆಗಳ ಹಿಂದೆ ತನಿಖಾ ದಳ ಪ್ರಕರಣ ದಾಖಲಿಸಿಕೊಂಡಿದ್ದು, ಸೋಮವಾರ ದಾಳಿ ನಡೆಸಿದೆ. ಪಾಕಿಸ್ತಾನದ ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆಯೊಂದಿಗೆ ನಂಟು ಹೊಂದಿದ್ದು, ದುಷ್ಕೃತ್ಯ ಎಸಗಲು ಯೋಜನೆ ಹಾಕಿದ್ದ ಶಂಕೆಯಲ್ಲಿ ಭಾರತದ ಆರೇಳು ಮಂದಿ ಮೇಲೆ ಗುಪ್ತಚರ ಇಲಾಖೆ ನಿಗಾ ಇರಿಸಿತ್ತು.
ಪಾಕಿಸ್ತಾನಿ ಮೂಲದ ಸಂಘಟನೆಗಳೊಂದಿಗೆ ಈ ಐವರು ಸಾಮಾಜಿಕ ಜಾಲತಾಣದ ಮೂಲಕ ಸಂಪರ್ಕದಲ್ಲಿದ್ದರು ಎಂದು ತನಿಖಾ ದಳ ಮಾಹಿತಿ ನೀಡಿದೆ.
ಸದ್ಯಕ್ಕೆ ಐವರನ್ನು ವಶಕ್ಕೆ ಪಡೆದ್ದು ವಿಚಾರಣೆ ನಡೆಸುತ್ತಿದ್ದಾರೆ.
ಪಾಕಿಸ್ತಾನವು ಸಾಮಾಜಿಕ ಜಾಲತಾಣದ ಮೂಲಕ ಭಾರತದ ಯುವಕರೊಂದಿಗೆ ಸಂಪರ್ಕ ಸಾಧಿಸಿಕೊಂಡು ಅವರಿಗೆ ಆನ್‌ಲೈನ್‌ನಲ್ಲಿಯೇ ತರಬೇತಿ ನೀಡುತ್ತಿತ್ತು. ಸ್ಥಳೀಯವಾಗಿ ದಾಳಿ ನಡೆಸಲು ಅವರನ್ನು ಪ್ರೇರೇಪಿಸಲಾಗುತ್ತಿತ್ತು ಎಂದು ಮೂಲಗಳು ತಿಳಿಸಿವೆ.