ಬಚ್ಚಿಟ್ಟ ಜ್ಞಾನ ಕೊಳೆಯುತ್ತದೆ….
ಬಿಚ್ಚಿಟ್ಟ ಜ್ಞಾನ ಹೊಳೆಯುತ್ತದೆ….
ಹೌದು ಜ್ಞಾನ ಅನ್ನೋದು ಕೆಲವರಿಗೆ ಮಾತ್ರ ಕರುಣಿಸುವಂತದ್ದು. ಅದನ್ನು ಇನ್ನೊಬ್ಬರಿಗೆ ಹಂಚಿದರೆ ಮಾತ್ರ ಅದಕ್ಕೊಂದು ಬೆಲೆಯಿರುತ್ತದೆ. ಕೇವಲ ಸಂಪಾದನೆಗೆ ಮಾತ್ರವೇ ಜ್ಞಾನವನ್ನು ಉಪಯೋಗಿಸಿದರೆ ಅದು ಬಿಸಿನೆಸ್ ಆಗಿರುತ್ತದೆಯೇ ಹೊರತು ಜ್ಞಾನಕ್ಕೆ ಬೆಲೆಯಿರುವುದಿಲ್ಲ. ಅಧ್ಯಾಪಕಿ ಅನ್ನೋದು ಕೇವಲ ಒಂದು ಪದವಿ ಎಂದು ಭಾವಿಸೋದು ಮೂರ್ಖತನ. ಅದು ವಿದ್ಯಾರ್ಥಿಗಳ ಬಾಳಿನ ದಾರಿದೀಪˌ ನಂದಾದೀಪ ಹಾಗೂ ಮಕ್ಕಳ ಜೀವನದ ಯಶಸ್ಸಿಗೆ ಒಂದು ಸೇತುವೆ ಅಂತ ತಿಳಿದವರು ಮಾತ್ರ ಅಧ್ಯಾಪಕಿ ಅನ್ನುವ ಪದವಿಯನ್ನು ಸಿಂಗರಿಸಬಹುದು.
ಇಂತಹ ಒಂದು ಅಧ್ಯಾಪಕಿ ಪದವಿಗೆ ಸಿಂಗಾರವಾಗಿದ್ದಾರೆ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಪಂಜರ್ ಪೇಟೆಯ ಅತಿಥಿ ಶಿಕ್ಷಕಿ ಶ್ರೀಮತಿ ಪುಷ್ಪಾವತಿ..!
ತಾನು ಅತಿಥಿ ಶಿಕ್ಷಕಿಯಾಗಿ ಹೋಗುತ್ತಿದ್ದ ಸ.ಮಾ.ಪ್ರಾ. ಶಾಲೆ ಕಲ್ತೋಡು ಲಾಕ್ ಡೌನ್ ಕಾರಣದಿಂದ ಮುಚ್ಚಿ ಕೆಲವು ತಿಂಗಳುಗಳೇ ಕಳೆದವು. ವಿದ್ಯಾರ್ಥಿಗಳ ಭವಿಷ್ಯ ತೂಗುಯ್ಯಲೆಯಲ್ಲಿರುವ ಇಂಥ ಸಮಯದಲ್ಲಿ ತಾನು ಕಲಿತ ಜ್ಞಾನವನ್ನು ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಧಾರೆಯೆರೆದಿದ್ದಾರೆ.
ತನ್ನ ಮನೆಯ ಅಕ್ಕ ಪಕ್ಕದಲ್ಲಿ ಇರುವ ವಿದ್ಯಾರ್ಥಿಗಳನ್ನು ಒಟ್ಟು ಸೇರಿಸಿ ಕಲಿಸೋದು ಅಧ್ಯಾಪಕಿಯಾದ ಇವರಿಗೇನೂ ಕಷ್ಟದ ಕೆಲಸವಲ್ಲದಿದ್ದರೂ ಜಾಗದ ಅಭಾವವಿತ್ತು ಹಾಗೂ ಕೊರೋನಾದ ಭಯವಿತ್ತು.
“ಮನಸ್ಸಿದ್ದರೆ ಮಾರ್ಗ” ತನ್ನ ಜ್ಞಾನವನ್ನು ವಿದ್ಯಾರ್ಥಿಳಿಗೆ ಹಂಚಲು ಕಷ್ಟವೇನಿಲ್ಲ. ಕೋರೋನಾ ಅನ್ನುವ ಮಹಾಮಾರಿಯ ನಡುವೆ ಮಕ್ಕಳ ಕಲಿಕೆಯ ಮೇಲೆ ಅಭಾವ ಬೀರಬಾರದೆಂದು ಅವರು ಅಯ್ದುಕೊಂಡದ್ದು ತನ್ನ ಮನೆಯ ಪಕ್ಕ ಗಣೇಶೋತ್ಸವದಂದು ಗಣಪತಿಯನ್ನು ಕೂರಿಸಲು ನಿರ್ಮಿಸಿರುವ ಚಿಕ್ಕ ಗುಡಿಯನ್ನು.
ಅಲ್ಲಿ ತಾನೇ ಸ್ವಂತ ಖರ್ಚಿನಲ್ಲಿ ಕಲಿಕಾ ಸಾಮಾಗ್ರಿಗಳನ್ನು ಖರೀದಿಸಿ ಆ ಗುಡಿಯನ್ನು ಶಾಲೆಯಾಗಿ ಪರಿವರ್ತಿಸಿದ್ದಾರೆ. 10-15 ಮಕ್ಕಳನ್ನು ಸೇರಿಸಿ ಕೊರೋನಾ ಜಾಗೃತಿಯ ಜೊತೆಗೆ, ಕಥೆˌ ಅಭಿನಯˌ ಗೀತೆˌ ಬರೆಯುವುದುˌ ಓದುವುದುˌ ಕ್ರಾಪ್ಟ್ ಮುಂತಾದ ಚಟುವಟಿಕೆಗಳನ್ನು ಮಾಡಿಸಿ ಚಿಕ್ಕದಾದ ಶಾಲೆಯ ವಾತಾವರಣವನ್ನೇ ನಿರ್ಮಿಸಿದ್ದಾರೆ.
ಕೋರೋನಾ ಅನ್ನುವ ಮಹಾಮಾರಿ ವೈರಸ್ ಗೆ ಭಯ ಪಡದೆ ಮಕ್ಕಳ ಭವಿಷ್ಯದ ಮೇಲೆ ಹೊಸಬೆಳಕು ಚೆಲ್ಲುತ್ತಿದ್ದಾರೆ. ತನ್ನ ಮನೆ ಕೆಲಸವನ್ನೆಲ್ಲ ಮಧ್ಯಾಹ್ನದವರೆಗೆ ಮಾಡಿ ಮುಗಿಸಿ ನಂತರ ಮಕ್ಕಳಿಗೆ ಪಾಠ ಮಾಡಲು ಶುರು ಮಾಡುತ್ತಾರೆ. ಕೊರೋನಾದ ಭಯವನ್ನು ಹೋಗಲಾಡಿಸಲು ಸರಕಾರದ ನಿಯಮದಂತೆ ಮಕ್ಕಳಿಗೆ ಸಾನಿಟೈಸರ್ˌ ಮಾಸ್ಕ್, ಬಿಸಿ ನೀರು ಹಾಗೂ ಸಾಮಾಜಿಕ ಅಂತರ ಪಾಲಿಸಿಕೊಂಡು ಮಕ್ಕಳಿಗೆ ಪಾಠಗಳನ್ನು ಭೋದಿಸುತ್ತಾ ಬಂದಿದ್ದಾರೆ. ಮತ್ತು ಮಕ್ಕಳನ್ನು ಓಲೈಸಲು ಟಾಕಲೇಟ್ˌ ಬಿಸ್ಕೆಟ್ ನೀಡಿ ಕ್ಲಾಸಿಗೆ ತಪ್ಪಿಸದಂತೆ ಚಾಣಕ್ಷತನ ಮೆರೆಯುತ್ತಾರೆ. ಶಿಕ್ಷಕಿ ಪುಷ್ಪಾವತಿಯವರ ಈ ಕಾಳಜಿ ಪ್ರತಿ ಬಡ ಮಕ್ಕಳ ಭವಿಷ್ಯವನ್ನು ರೂಪಿಸುವ ಮಾರ್ಗವಾಗಲಿ ಹಾಗೂ ಪ್ರತಿ ಶಿಕ್ಷಕರಿಗೂ ಮಾದರಿಯಾಗಲಿ.
ಇಂತಹ ಗ್ರಾಮೀಣ ಪ್ರತಿಭೆ ಕೊಡಗಿನ ಶಿಕ್ಷಕಿ ಪುಷ್ಪಾವತಿ ಯವರಿಗೆ ನಮ್ಮದೊಂದು ಸಲಾಂ……
ಹಾಗೇ “ಬಚ್ಚಿಟ್ಟ ಜ್ಞಾನ ಕೊಳೆಯುತ್ತದೆ….”
“ಬಿಚ್ಚಿಟ್ಟ ಜ್ಞಾನ ಹೊಳೆಯುತ್ತದೆ….” ಎಂದು ತಿಳಿದಿರಲಿ..!