ನವದೆಹಲಿ: ದೇಶಾದ್ಯಂತ ಕೊರೋನಾ ಹಾವಳಿ ಜೋರಾಗಿದ್ದು, ಇದರ ಮಧ್ಯೆ ಎಲ್ಲ ಕೆಲಸ-ಕಾರ್ಯ ಈ ಹಿಂದಿನಂತೆ ಆರಂಭಗೊಳ್ಳಲು ಶುರುವಾಗಿವೆ. ಇದೀಗ ಕೇಂದ್ರ ಮಳೆಗಾಲದ ಅಧಿವೇಶನ ನಡೆಸಲು ಮುಹೂರ್ತ ಫಿಕ್ಸ್ ಮಾಡಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಕೊರೋನಾ ವೈರಸ್, ಲಾಕ್ಡೌನ್ ಬಳಿಕ ಆರಂಭಗೊಳ್ಳುವ ಮೊದಲ ಅಧಿವೇಶನ ಇದಾಗಲಿದ್ದು, ಸೆಪ್ಟೆಂಬರ್ 14ರಿಂದ ಅಕ್ಟೋಬರ್ 1ರವರೆಗೆ ನಡೆಸಲು ನಿರ್ಧರಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಶನಿವಾರ ಮತ್ತು ಭಾನುವಾರ ರಜೆ ತೆಗೆದುಕೊಳ್ಳದೇ ಅಧಿವೇಶನ ನಡೆಸಲು ನಿರ್ಧರಿಸಲಾಗಿದ್ದು, ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ದಿನಕ್ಕೆ 4 ಗಂಟೆಗಳ ಕಾಲ ನಡೆಸಲು ನಿರ್ಧರಿಸಲಾಗಿದೆ.ಅಧಿವೇಶನದ ಸಮಯದಲ್ಲಿ ಸಚಿವರು, ಸಂಸದರು ತಮ್ಮ ತಮ್ಮ ಕ್ಷೇತ್ರಗಳಿಗೆ ಭೇಟಿ ನೀಡದಂತೆ ಸೂಚನೆ ನೀಡುವ ಸಾಧ್ಯತೆ ಹೆಚ್ಚಾಗಿದೆ. ಇದರ ಜತೆಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಅತಿ ಅವಶ್ಯವಾಗಿದ್ದು, ಅಧಿವೇಶನ ನಡೆಯುವ ಸ್ಥಳದಲ್ಲಿ ಕೆಲ ಬದಲಾವಣೆ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಪ್ರಧಾನ ಮಂತ್ರಿ, ಕೇಂದ್ರ ಸಚಿವರು ಹಾಗೂ ಪ್ರತಿಪಕ್ಷದ ನಾಯಕರಿಗೆ ಕುರ್ಚಿ ಮೀಸಲಿಡಲಾಗಿದ್ದು, ಇದರ ಜತೆಗೆ ಡಾ. ಮನಮೋಹನ್ ಸಿಂಗ್ ಹಾಗೂ ಹೆಚ್.ಡಿ ದೇವೇಗೌಡ ಅವರಿಗೆ ಖುರ್ಚಿ ಮೀಸಲಿಡಲಾಗಿದೆ.
ಕೇವಲ 7 ವರದಿಗಾರರಿಗೆ ಅವಕಾಶ: ಅಧಿವೇಶನದ ವರದಿ ಮಾಡಲು ಕೇವಲ 7 ವರದಿಗಾರರಿಗೆ ಮಾತ್ರ ಅವಕಾಶ ನೀಡಲಾಗಿದ್ದು,ಪ್ರಮುಖವಾಗಿ ಪಿಟಿಐ, ಯುಎನ್ಐ, ದೂರದರ್ಶನ ಸೇರಿದಂತೆ ಪ್ರಮುಖ ಸುದ್ದಿವಾಹಿನಿಗಳು ಸೇರಿಕೊಳ್ಳಲಿವೆ.