ಅದಾನಿ ಗ್ರೂಪ್‌ ಸುಪರ್ದಿಗೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ವಹಣೆ

ಮಂಗಳೂರು: ಕರ್ನಾಟಕದ ಎರಡನೇ ಅತೀ ದೊಡ್ಡ ವಿಮಾನ ನಿಲ್ದಾಣವಾಗಿರುವ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಈ ಮೊದಲು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ (ಎಎಐ) ವತಿಯಿಂದ ನಿರ್ವಹಣೆಗೊಳ್ಳುತ್ತಿದ್ದು, ನಂತರ ಖಾಸಗಿ ಪಾಲುದಾರಿಕೆ ಅಡಿಯಲ್ಲಿ ನಿರ್ವಹಣೆಗೆ ಕೇಂದ್ರ ಸರ್ಕಾರ ನಡೆಸಿದ ಬಿಡ್‌ನಲ್ಲಿ ಗುಜರಾತ್ ಮೂಲದ ಗೌತಮ್ ಅದಾನಿ ಒಡೆತನದ ಅದಾನಿ ಗ್ರೂಪ್ ಪಡೆದುಕೊಂಡಿತ್ತು.

ಆದರೆ ಹಸ್ತಾಂತರ ಪ್ರಕ್ರಿಯೆ ನಡೆದಿರಲಿಲ್ಲ. ಇದೀಗ ಅದಾನಿ ಗ್ರೂಪ್‌ನ ಹಿರಿಯ ಅಧಿಕಾರಿಗಳು ಎರಡು ದಿನದ ಹಿಂದೆ ನಗರಕ್ಕೆ ಭೇಟಿ ನೀಡಿದ್ದು ಹಸ್ತಾಂತರ ಪ್ರಕ್ರಿಯೆಗೆ ಸಿದ್ಧತೆ ನಡೆಸುತ್ತಿದ್ದಾರೆ ಎನ್ನಲಾಗುತ್ತಿದೆ. 50 ವರ್ಷಗಳ ಒಪ್ಪಂದ ಇದಾಗಿದ್ದು, ವಿಮಾನ ನಿಲ್ದಾಣಗಳ ನಿರ್ವಹಣೆ, ಟರ್ಮಿನಲ್‌ಗಳ ಅಭಿವೃದ್ಧಿ, ಗ್ರಾಹಕ ಸ್ನೇಹಿ ಯೋಜನೆಗಳು ಮೊದಲಾದ ಜವಾಬ್ದಾರಿಗಳನ್ನು ಅದಾನಿ ಗ್ರೂಪ್ ನಿರ್ವಹಿಸಲಿದ್ದು, ತಾಂತ್ರಿಕ ನಿರ್ವಹಣೆಯನ್ನು ಮಾತ್ರ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರವೇ ನಿರ್ವಹಿಸಲಿದೆ.

READ ALSO

ಈ ಮಧ್ಯೆ, ಅದಾನಿ ಕಂಪನಿಯು ಒಳ ಒಪ್ಪಂದ ಮಾದರಿಯಲ್ಲಿ ಬೇರೆ ಕಂಪನಿ ಮೂಲಕ ಕಾರ್ಯಾಚರಣೆ, ನಿರ್ವಹಣೆಗೆ ಬಿಡ್ ಕರೆದಿದ್ದು, ಮಂಗಳೂರು ವಿಮಾನ ನಿಲ್ದಾಣದ ನಿರ್ವಹಣೆ ಮತ್ತು ಕಾರ್ಯಾಚರಣೆಗೆ ಜರ್ಮನಿಯ FLUGHAFEN MUNCHEN GMBH ಕಂಪನಿಗೆ ನಿರ್ವಹಣೆ ಹೊಣೆಯನ್ನು ಅದಾನಿ ಗ್ರೂಪ್ ನೀಡಿದೆ ಎಂದು ತಿಳಿದು ಬಂದಿದ್ದು, ಜುಲೈ ತಿಂಗಳಲ್ಲಿ ನಡೆದ ಬಿಡ್‌ನಲ್ಲಿ ಜರ್ಮನ್ ಸಂಸ್ಥೆಯು ಟೆಂಡರ್ ಪಡೆದುಕೊಂಡಿದೆ.