ನಡೆದಾಡುವ ದೇವರು ತ್ರಿವಿಧ ದಾಸೋಹಿ ಲಿಂಗೈಕ್ಯ ಶಿವಕುಮಾರ ಸ್ವಾಮೀಜಿಗಳ 114ನೇ ಜನ್ಮಜಯಂತಿ ಆಚರಣೆ

ತುಮಕೂರು: ಇಂದು ನಡೆದಾಡುವ ದೇವರು, ತ್ರಿವಿಧ ದಾಸೋಹಿ ಲಿಂಗೈಕ್ಯ ಶಿವಕುಮಾರ ಸ್ವಾಮೀಜಿಗಳ 114ನೇ ಜನ್ಮಜಯಂತಿಯನ್ನು ಆಚರಿಸಲಾಯಿತು . ಕೊರೊನಾ ಹೆಚ್ಚಳ ಹಿನ್ನೆಲೆಯಲ್ಲಿ ಅದ್ಧೂರಿ ಕಾರ್ಯಕ್ರಮಕ್ಕೆ ಬ್ರೇಕ್ ಹಾಕಿದ ಮಠ, ಗದ್ದುಗೆ ಪೂಜೆ, ಮಕ್ಕಳ ನಾಮಕರಣದ ಮೂಲಕ ಜನ್ಮದಿನ ಕಾರ್ಯಕ್ರಮ ನೆರವೇರಿತು. ಬೆಳಗ್ಗೆಯಿಂದ ಭಕ್ತರು ಮಠಕ್ಕೆ ಆಗಮಿಸಿ ಗದ್ದುಗೆ ದರ್ಶನ ಪಡೆದರು.

ಸಾಮೂಹಿಕ ನಾಮಕರಣ ಮತ್ತು ತೊಟ್ಟಿಲು ಶಾಸ್ತ್ರ ಕಾರ್ಯಕ್ರಮ: ಸಾಮೂಹಿಕ ನಾಮಕರಣ ಕಾರ್ಯಕ್ರಮವನ್ನು ಮಠದಲ್ಲಿ ಹಮ್ಮಿಕೊಳ್ಳಲಾಗಿದ್ದು, ಶ್ರೀಗಳ ಹುಟ್ಟುಹಬ್ಬದಲ್ಲಿ ಈ ಕಾರ್ಯಕ್ರಮ ಮೆರುಗು ನೀಡಿದೆ. ಮಠದ ಆವರಣದಲ್ಲಿರುವ ಉದ್ಧಾನ ಶಿವಯೋಗಿಗಳ ಸಮುದಾಯ ಭವನದಲ್ಲಿ 48 ಮಕ್ಕಳಿಗೆ ಸಾಮೂಹಿಕ ನಾಮಕರಣ ಏರ್ಪಡಿಸಲಾಗಿತ್ತು.

READ ALSO

ಬಳಿಕ ಶ್ರೀಗಳ ಭಾವಚಿತ್ರ ಹಾಗೂ ಪುತ್ಥಳಿಯನ್ನು ಮಠದ ಆವರಣದಲ್ಲಿ ಮೆರವಣಿಗೆ ಮಾಡಲಾಯಿತು. ನಂದಿ ಧ್ವಜ, ವೀರಗಾಸೆ, ಪೂರ್ಣಕುಂಭದ ಮೂಲಕ ನಡೆದ ಮೆರವಣಿಗೆ ಶ್ರೀಗಳ ಹುಟ್ಟುಹಬ್ಬಕ್ಕೆ ಮೆರಗು ನೀಡಿತು. ಮಠಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ ಮಾಧುಸ್ವಾಮಿ, ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ್ ಭೇಟಿ ನೀಡಿ ಗದ್ದುಗೆ ದರ್ಶನ ಪಡೆದರು. ಪೀಠಾಧಿಪತಿ ಸಿದ್ದಲಿಂಗಸ್ವಾಮೀಜಿ ಕಾರ್ಯಕ್ರಮದ ಉಸ್ತುವಾರಿ ವಹಿಸಿದರು.

ಬೆಂಗಳೂರು-ತುಮಕೂರು ಸೇರಿದಂತೆ ರಾಜ್ಯದ ಹಲವು ಕಡೆಯಿಂದ ಪೋಷಕರು ಮಕ್ಕಳನ್ನು ಕೆರೆದುಕೊಂಡು ಬಂದಿದ್ದರು. ಗಂಡುಮಕ್ಕಳಿಗೆ ಶಿವಕುಮಾರ್, ಹೆಣ್ಣು ಮಕ್ಕಳಿಗೆ ಶಿವಾನಿ ಎಂದು ನಾಮಕರಣ ಮಾಡಲಾಯಿತು. ನಾಮಕರಣದಲ್ಲಿ ಪಾಲ್ಗೊಂಡಿದ್ದ ಪೋಷಕರಿಗೆ ತೊಟ್ಟಿಲು ಹಾಗೂ ಶ್ರೀಗಳ ಭಾವಚಿತ್ರ ನೀಡಲಾಯಿತು.

ನಡೆದಾಡುವ ದೇವರಿಗೆ ಪ್ರಧಾನಿ ನರೆಂದ್ರ ಮೋದಿ ಅವರೂ ಟ್ವೀಟ್​ ಮೂಲಕ ಶುಭಾಶಯ ತಿಳಿಸಿದ್ದಾರೆ.

ಬೆಳಗ್ಗೆಯಿಂದಲೇ ಮಠದ ಆವರಣದಲ್ಲಿ ಹಬ್ಬದ ವಾತಾವರಣ ಮನೆ ಮಾಡಿದ್ದು, ಭಕ್ತಾದಿಗಳು ಬೆಳಗ್ಗೆಯಿಂದ ಮಠದತ್ತ ಧಾವಿಸಿ ಗದ್ದುಗೆ ದರ್ಶನ ಪಡೆದರು. ಮಠಕ್ಕೆ ಬರುವ ಎಲ್ಲಾ ಭಕ್ತರಿಗೂ ದಾಸೋಹದ ವ್ಯವಸ್ಥೆ ಮಾಡಲಾಗಿದ್ದು ಪಾಯಸ, ಮೈಸೂರು ಪಾಕ್, ಚಿತ್ರಾನ್ನ, ಮಧ್ಯಾಹ್ನಕ್ಕೆ ಊಟದ ವ್ಯವಸ್ಥೆ ಮಾಡಲಾಗಿತ್ತು.