ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಿರುದ್ಧ ರಂಜನ್ ರಾವ್ ಯರ್ಡೂರು ಸುಪ್ರಿಂ ಕೋರ್ಟ್ ನಲ್ಲಿ ಸಲ್ಲಿಸಿದ್ದ ಮೇಲ್ಮನವಿಯನ್ನು ಆಲಿಸಿದ ನ್ಯಾಯಾಲಯ ದೂರುದಾರರು ನೀಡಿದ ಈ ದೂರು ಆಧಾರ ರಹಿತವಾಗಿದೆ ಎಂದು, ದಾವೆಯನ್ನು ಪ್ರಾಥಮಿಕ ಹಂತದಲ್ಲೇ ವಜಾಗೊಳಿಸಿದೆ.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಿರುದ್ಧ ರಂಜನ್ ರಾವ್ ಯರ್ಡೂರು ಅನೇಕ ಆರೋಪಗಳನ್ನು ಮಾಡಿ, ಖಾಸಗಿ ಕೇಸ್‌ನ್ನು ಬೆಳ್ತಂಗಡಿಯ ಪ್ರಥಮ ದರ್ಜೆ ನ್ಯಾಯಾಲಯದಲ್ಲಿ ಹಾಕಲಾಗಿತ್ತು. ಮಾನ್ಯ ನ್ಯಾಯಾಲಯವು ಈ ಅರ್ಜಿಯನ್ನು ತಿರಸ್ಕರಿಸಿದಾಗ, ಪರಿಷ್ಕರಣೆಗಾಗಿ ಮಂಗಳೂರು ಜಿಲ್ಲಾ ನ್ಯಾಯಾಲಯದಲ್ಲಿ ದೂರುದಾರರು ದಾವೆಯನ್ನು ಹೂಡಿದರು. ನಂತರ ಈ ವಿಚಾರಕ್ಕೆ ಸಂಬಂಧಿಸಿದಂತೆ, ಗ್ರಾಮಾಭಿವೃದ್ಧಿ ಯೋಜನೆಯು ಕರ್ನಾಟಕದ ಮಾನ್ಯ ಉಚ್ಛ ನ್ಯಾಯಾಲಯದಲ್ಲಿ ಅರ್ಜಿಯನ್ನು ಸಲ್ಲಿಸಲಾಯಿತು. ಮಾನ್ಯ ಉಚ್ಛ
ನ್ಯಾಯಾಲಯವು ಈ ಕೇಸನ್ನು ಕೂಲಂಕುಷವಾಗಿ ಪರಿಶೀಲಿಸಿತು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಗ್ರಾಮೀಣ ಪ್ರದೇಶಗಳಲ್ಲಿ ಸ್ವಸಹಾಯ ಸಂಘಗಳನ್ನು ರಚಿಸಿ, ಬ್ಯಾಂಕುಗಳಿಂದ ಸಾಲ ಸೌಲಭ್ಯಗಳನ್ನು ದೊರಕಿಸಿಕೊಡುವುದು ಒಂದು ಆರ್ಥಿಕ ಸೇರ್ಪಡೆಯ ಅಂಗವಾಗಿ ಕೈಗೊಳ್ಳಲಾಗುತ್ತಿದೆ ಎನ್ನುವ ಸತ್ಯಾಂಶವನ್ನು ಯೋಜನೆಯ ಪರವಾಗಿ ನ್ಯಾಯವಾದಿಗಳಾದ ಪಿ.ಪಿ.ಹೆಗ್ಡೆ ಇವರು ವಾದ ಮಂಡಿಸಿದ್ದರು.
ಅಲ್ಲದೇ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಈ ಸಂಸ್ಥೆಯನ್ನು ಒಂದು
ಚಾರಿಟೇಬಲ್ ಟ್ರಸ್ಟ್ ಆಗಿ ಮಾಡಿ, ಇದರ ಮೂಲಕ ಅನೇಕ ಸಮಾಜ ಸೇವೆಗಳನ್ನು ಕೈಗೊಳ್ಳುತ್ತಿದ್ದಾರೆ. ಗ್ರಾಮಾಭಿವೃದ್ಧಿ
ಯೋಜನೆಯ ಈ ಸಮಾಜ ಸೇವಾ ಕಾರ್ಯಕ್ರಮಗಳ ಯಶಸ್ಸನ್ನು ಸಹಿಸದ ದೂರುದಾರರು ದುರುದ್ದೇಶದಿಂದ ಈ ಸುಳ್ಳು ಆರೋಪಗಳನ್ನು ಮಾಡಿರುತ್ತಾರೆಂದು ವಾದಿಸಿದರು. ಧರ್ಮಸ್ಥಳ ಸಂಸ್ಥೆಗಳ ವಿರುದ್ಧ ನಿರಂತರವಾಗಿ ಸುಳ್ಳು ಆರೋಪಗಳನ್ನು ಮಾಡುವುದು ದೂರುದಾರರಿಗೆ ಹವ್ಯಾಸವಾಗಿದೆ ಎಂಬುದನ್ನು ಮಾನ್ಯ ಉಚ್ಛ ನ್ಯಾಯಾಲಯಕ್ಕೆ ತಿಳಿಸಲಾಯಿತು. ಮಾನ್ಯ ಉಚ್ಛ ನ್ಯಾಯಾಲಯವು ಸತ್ಯಾಂಶಗಳನ್ನು ಗಮನಿಸಿ, ಗ್ರಾಮಾಭಿವೃದ್ಧಿ ಯೋಜನೆಯ ಪರವಾಗಿ ಹಾಕಿದ ಅರ್ಜಿಯನ್ನು ಪುರಸ್ಕರಿಸಿ, ಕೆಳ ನ್ಯಾಯಾಲಯದಲ್ಲಿ ನೀಡಿದ ಆದೇಶವನ್ನು ರದ್ದುಗೊಳಿಸಿರುತ್ತದೆ. ಇದರಿಂದ ಮಾನ್ಯ ಉಚ್ಛ ನ್ಯಾಯಾಲಯವು ನೀಡಿದ
ತೀರ್ಪನ್ನು ಪ್ರಶ್ನಿಸಿ, ದಿನಾಂಕ 23.04.2026 ರಂದು ದೂರುದಾರ ರಂಜನ್ ರಾವ್ ಯರ್ಡೂರು ಇವರು ದೇಶದ
ಸರ್ವೋಚ್ಛ ನ್ಯಾಯಾಲಯವಾದ ಸುಪ್ರಿಂ ಕೋರ್ಟ್ ಗೆ ಮೇಲ್ಮನವಿಯನ್ನು (ವಿಶೇಷ ಅರ್ಜಿಯನ್ನು ಕೇಸ್ ನಂಬ್ರ : SPಐ
010752/2026) ಸಲ್ಲಿಸಿರುತ್ತಾರೆ. ಈ ಅರ್ಜಿಯ ಕುರಿತಾಗಿ, ಭಾರತದ ಸರ್ವೋಚ್ಛ ನ್ಯಾಯಾಲಯವು ದಿನಾಂಕ 8.9.2026ರಂದು ದೂರುದಾರರ ಈ ಮನವಿಯನ್ನು ಆಲಿಸಲಾಯಿತು.
ಆದರೆ, ದೂರುದಾರರು ಸಲ್ಲಿಸಿದ ಅರ್ಜಿಯಲ್ಲಿನ ಆರೋಪಗಳಿಗೆ ಸೂಕ್ತವಾದ ಆಧಾರಗಳಿಲ್ಲ ಎಂಬುದನ್ನು ಮನಗಂಡ ಮಾನ್ಯ ಸರ್ವೋಚ್ಛ ನ್ಯಾಯಾಲಯವು, ದಾವೆಯನ್ನು ವಜಾಗೊಳಿಸಿದೆ.





