ಸೌರ ಶಕ್ತಿ ಬಳಸಿ ಕುಡಿಯುವ ನೀರು ಯೋಜನೆಗೆ ಚಾಲನೆ! ಜಿಲ್ಲೆಯ ಪ್ರಥಮ ಪ್ರಯೋಗ ಯಶಸ್ವಿಯಾಗಲಿ: ಶಾಸಕ ಹರೀಶ್ ಪೂಂಜ

ಬೆಳ್ತಂಗಡಿ: ಮಡಂತ್ಯಾರು ಗ್ರಾ.ಪಂ. ಹಲವಾರು ಮಾದರಿ ಕಾರ್ಯಕ್ರಮಗಳನ್ನು ಜಾರಿಗೊಳಿಸುವ ಮೂಲಕ ತಾಲೂಕಿನಲ್ಲಿ ವಿನೂತನ ಸಾಧನೆ ಮಾಡಿದೆ. ಆತ್ಮ ನಿರ್ಭರ ಭಾರತದ ಕಲ್ಪನೆಯನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಕುಡಿಯುವ ನೀರು ಯೋಜನೆಗೆ ಸೌರ ಶಕ್ತಿ ಬಳಸುವ ಮೂಲಕ ಜಿಲ್ಲೆಯ ಪ್ರಥಮ ಪ್ರಯೋಗ ಯಶಸ್ವಿಯಾಗಲಿ ಎಂದು ಶಾಸಕ ಹರೀಶ್ ಪೂಂಜ ಹೇಳಿದರು.

ಮಡಂತ್ಯಾರು ಗ್ರಾ.ಪಂ. ವ್ಯಾಪ್ತಿಯ ಪಾರೆಂಕಿ ಗ್ರಾಮದ ಹಾರಬೆ ಜನವಸತಿ ಪ್ರದೇಶದ ಕುಡಿಯುವ ನೀರಿನ ಯೋಜನೆಗೆ ಅಳವಡಿಸಿದ ಸೋಲಾರ್ ಪಂಪ್‌ನ್ನು ಉದ್ಘಾಟಿಸಿ ಮಾತನಾಡಿದರು.

READ ALSO

15 ನೇ ಹಣಕಾಸು ಅಥವಾ ಲಭ್ಯ ಅನುದಾನದಲ್ಲಿ ಬೆಳ್ತಂಗಡಿ ತಾಲೂಕಿನಲ್ಲಿ ಎಲ್ಲಾ ಗ್ರಾ.ಪಂ.ಗಳು ಈ ಯೋಜನೆಯನ್ನು ಜಾರಿ ಮಾಡುವಂತೆ ಸೂಚನೆ ನೀಡುವುದಾಗಿ ಶಾಸಕರು ತಿಳಿಸಿದರು. ವಿದ್ಯುತ್ ಉಳಿತಾಯ ಜತೆಗೆ ನೀರಿನ ಮಿತ ಬಳಕೆಯ ಅಂಶವೂ ಸೇರಿದ್ದರಿಂದ ಸೆಲ್ಕೋ ಸಂಸ್ಥೆ ಬೆಳ್ತಂಗಡಿ ತಾಲೂಕಿನಲ್ಲಿ ಆಂದೋಲನದ ರೀತಿಯಲ್ಲಿ ಜಾರಿ ಮಾಡಲು ವಿಶೇಷ ಮುತುವರ್ಜಿ ವಹಿಸುವಂತೆ ಸಲಹೆ ನೀಡಿದರು.

ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ ಮಾತನಾಡಿ, ನನಗೆ ಬಹಳ ಖುಷಿ ನೀಡಿದ ಕಾರ್ಯಕ್ರಮ, ಒಂದು ಮಾದರಿ ಸಮಾರಂಭದಲ್ಲಿ ಭಾಗವಹಿಸಿದ ತೃಪ್ತಿ ನೀಡಿದೆ. ಗ್ರಾ.ಪಂ. ವಿದ್ಯುತ್ ಸ್ವಾವಲಂಬಿಗಳಾಗಿ ಸಾಧನೆ ಮಾಡಲು ಇದು ಪ್ರೇರಣದಾಯಕ ಕಾರ್ಯಕ್ರಮ. ಇಂತಹ ಯೋಜನೆ ಮತ್ತು ಯೋಚನೆ ಮಾಡಿದ ಗ್ರಾ.ಪಂ. ಆಡಳಿತ ಮಂಡಳಿ ಮತ್ತು ಅಧಿಕಾರಿ ವರ್ಗ ಅಭಿನಂದನಾರ್ಹರು ಎಂದು ಶ್ಲಾಘನೆ ವ್ಯಕ್ತಪಡಿಸಿದರು.

ಗ್ರಾ.ಪಂ. ನಿಕಟಪೂರ್ವ ಅಧ್ಯಕ್ಷ ಗೋಪಾಲಕೃಷ್ಣ ಕೆ. ಮಾತನಾಡಿ, ಮಡಂತ್ಯಾರು ಗ್ರಾ.ಪಂ. ಹಲವಾರು ವಿಶೇಷ ಕಾರ್ಯಕ್ರಮ ಹಮ್ಮಿಕೊಂಡ ಕಾರಣವೇ ಗಾಂದಿ ಗ್ರಾಮ ಪುರಸ್ಕಾರ ಲಭಿಸಿದೆ. ವಿದ್ಯುತ್ ಬಿಲ್ ಲೆಕ್ಕ ಹೊಂದಾಣಿಕೆ ಮೂಲಕ ಕನಿಷ್ಠ 50 ಲಕ್ಷ ರೂ. ಬಿಲ್ ಉಳಿತಾಯ ಆಗಿದೆ ಎಂದು ಹೇಳಿದರು.

ತಾ.ಪಂ. ಸದಸ್ಯೆ ವಸಂತಿ ಲಕ್ಷ್ಮಣ್, ತಾ.ಪಂ. ಇ.ಒ. ಕುಸುಮಾಧರ್, ಸೆಲ್ಕೊ ಸಂಸ್ಥೆ ಸಹಾಯಕ ಮಹಾ ಪ್ರಬಂಧಕ ಗುರುಪ್ರಕಾಶ್ ಶೆಟ್ಟಿ, ಗ್ರಾ.ಪಂ. ಆಡಳಿತಾಧಿಕಾರಿ ಯತೀಶ್ ಉಪಸ್ಥಿತರಿದ್ದರು. ಮಡಂತ್ಯಾರು ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ನಾಗೇಶ್ ಎಂ., ಸೆಲ್ಕೋ ಸಂಸ್ಥೆಯ ನವೀನ್ ನೆರಿಯಾ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.