ಬೆಳ್ತಂಗಡಿ: ತಾಲೂಕಿನ ಹೊಸಂಗಡಿ ಗ್ರಾಮದ ಪಾರ್ದೊಟ್ಟು ಪ್ರದೇಶದಲ್ಲಿ ದಾರುಣ ಘಟನೆೊಂದು ನಡೆದಿದ್ದು, ಕೇರಳ ಮೂಲದ ಕಾರ್ಮಿಕನೋರ್ವ ವಿದ್ಯುತ್ ಶಾಕ್ ಮೂಲಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಮೃತ ವ್ಯಕ್ತಿಯನ್ನು ಜೋಸೆಫ್ ತೋಮಸ್ (69) ಎಂದು ಗುರುತಿಸಲಾಗಿದೆ. ಈತ ಕೇರಳದಿಂದ ಬಂದು ಹೊಸಂಗಡಿಯಲ್ಲಿ ಶಾಜು.ಪಿ.ಟಿ ಎಂಬವರ ರಬ್ಬರ್ ತೋಟದಲ್ಲಿ ಕಾರ್ಮಿಕನಾಗಿ ಕೆಲಸ ನಿರ್ವಹಿಸುತ್ತಿದ್ದನು.
ಮಾ. 30ರಂದು ಸಂಜೆ ವೇಳೆ ಶಾಜು ಅವರ ಮನೆಯಲ್ಲಿ ಈತನ ಮೃತದೇಹ ಅನುಮಾನಾಸ್ಪದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಪ್ರಾಥಮಿಕ ಮಾಹಿತಿ ಪ್ರಕಾರ, ಅಡುಗೆ ಮನೆಯ ವಿದ್ಯುತ್ ಸ್ವಿಚ್ ಬೋರ್ಡ್‌ಗೆ ಪ್ಲಗ್ ಜೋಡಿಸಿ, ಕಾಲಿಗೆ ತಂತಿ ಸಂಪರ್ಕಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.
ಘಟನೆಯ ಮಾಹಿತಿ ತಿಳಿದ ತಕ್ಷಣವೇ ವೇಣೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಜೋಸೆಫ್ ಎಂ.ಎಂ ಅವರು ನೀಡಿದ ದೂರಿನ ಮೇರೆಗೆ ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.






