ತಿಪಟೂರು: ಕಲ್ಟತರು ನಾಡು ಜಿಲ್ಲಾ ಕೇಂದ್ರವಾಗಿ ಹೊರಹೊಮ್ಮುತ್ತಾ ಎಂಬ ಪ್ರಶ್ನೆ ಮತ್ತೆ ಮತ್ತೆ ಜನಸಾಮಾನ್ಯರಲ್ಲಿ ಕಾಡುತ್ತಿದೆ. ತುಮಕೂರು ಜಿಲ್ಲೆಯ ದೊಡ್ಡ ತಾಲ್ಲೂಕು ಕೇಂದ್ರವಾದ ತಿಪಟೂರನ್ನು ಜಿಲ್ಲಾ ಕೇಂದ್ರವಾಗಿಸಬೇಕು ಎಂಬ ಕೂಗಿನ ನಡುವೆ ಹುಳಿಯಾರು ತಾಲ್ಲೂಕು ಕೇಂದ್ರದ ಬಹು ವರ್ಷಗಳ ಒತ್ತಾಯಕ್ಕೆ ಮತ್ತೆ ಮರುಜೀವ ಬಂದಿದೆ.
ಜಿಲ್ಲಾ ಕೇಂದ್ರವನ್ನಾಗಿ ಮೇಲ್ದರ್ಜೆಗೇರಿಸಲು 5 ತಾಲ್ಲೂಕು ಕೇಂದ್ರಗಳ ಅವಶ್ಯಕವಾಗಿದೆ. ತಿಪಟೂರು ಜಿಲ್ಲಾ ಕೇಂದ್ರಕ್ಕೆ ತಿಪಟೂರು, ಚಿಕ್ಕನಾಯಕನಹಳ್ಳಿ, ತುರುವೇಕೆರೆ ಹಾಗೂ ಹಾಸನ ಜಿಲ್ಲೆಯ ಅರಸೀಕೆರೆ ಮತ್ತು ಸಂಭಾವ್ಯ ತಾಲ್ಲೂಕಾಗಿ ಹುಳಿಯಾರನ್ನು ಮಾರ್ಪಡಿಸಿ ಸೇರಿಸಬಹುದು ಎಂಬ ಚರ್ಚೆ ಬಿರುಸಾಗಿ ನಡೆಯುತ್ತಿದೆ.
ತಿಪಟೂರು ನಗರ ಚಿಕ್ಕನಾಯಕನಹಳ್ಳಿ, ತುರುವೇಕೆರೆ, ಅರಸೀಕೆರೆ ಮತ್ತು ಹುಳಿಯಾರು ಪಟ್ಟಣಗಳಿಗೆ ಕೇವಲ 40 ಕಿ.ಮೀ ಮಾತ್ರವೇ ದೂರವಿದೆ. ತುಮಕೂರು ಜಿಲ್ಲಾ ಕೇಂದ್ರ ಹುಳಿಯಾರು ಸೇರಿದಂತೆ ತಿಪಟೂರು ತಾಲ್ಲೂಕಿನ ಗಡಿಭಾಗಗಳಿಗೆ ಸುಮಾರು 100 ಕಿ.ಮೀ ಅಂತರವಿದೆ.
ತಿಪಟೂರು ಜಿಲ್ಲಾ ಕೇಂದ್ರವಾಗಿ ಹುಳಿಯಾರನ್ನು ತಾಲ್ಲೂಕು ಕೇಂದ್ರವಾಗಿ ಮೇಲ್ದರ್ಜೆಗೇರಿಸಿದರೆ ಅನುಕೂಲವಾಗುತ್ತದೆ ಎನ್ನುವುದು ಸಾರ್ವಜನಿಕರ ಅಭಿಪ್ರಾಯ.
ತಿಪಟೂರು, ಅರಸೀಕೆರೆ ಹಾಗೂ ಹುಳಿಯಾರು ರಾಜ್ಯದಲ್ಲಿಯೇ ಕೊಬ್ಬರಿ ಮಾರಾಟಕ್ಕೆ ಹೆಸರಾಗಿವೆ. ಮೂರು ಎಪಿಎಂಸಿಗಳಿಗೆ ನಿತ್ಯ ಕೊಬ್ಬರಿ ಬರುತ್ತದೆ. ತಿಪಟೂರಿನಲ್ಲಿ 2 ದಿನ, ಅರಸೀಕೆರೆ ಮತ್ತು ಹುಳಿಯಾರು ಎಪಿಎಂಸಿಗಳಲ್ಲಿ ಟೆಂಡರ್ ನಡೆಯುತ್ತದೆ. ಕೊಬ್ಬರಿಯ ಉತ್ತಮ ವಹಿವಾಟು ಇರುವುದರಿಂದ ಒಳ್ಳೆಯ ಆದಾಯ ಬಂದು ಜಿಲ್ಲೆಯನ್ನು ಮತ್ತಷ್ಟು ಅಭಿವೃದ್ಧಿ ಪಡಿಸಬಹುದು.
ತಿಪಟೂರು ಜಿಲ್ಲಾ ಕೇಂದ್ರವಾದರೇ ಹುಳಿಯಾರು ಕೂಗಳತೆ ದೂರವಿರುವುದರಿಂದ ಜನರಿಗೆ ತುರ್ತು ಅಗತ್ಯಗಳು ಲಭಿಸುತ್ತವೆ. ವಾಸುದೇವಚಾರ್, ಹುಂಡೇಕರ್, ಗದ್ದಿಗೌಡರ ಮತ್ತು ಎಂ.ಪಿ.ಪ್ರಕಾಶ್ ಅವರು ಆಯೋಗಗಳು ಅಂತಿಮ ವರದಿ ನೀಡಿದ್ದರೂ ಈವರೆಗೆ ಪ್ರಯೋಜನವಾಗಿಲ್ಲ.