🖊️ ಪ್ರಶಾಂತಭಟ್ ಕೋಟೇಶ್ವರ
ತುಳಸಿ ಒಂದು ಸಸ್ಯ. ಆ ಸಸ್ಯದಲ್ಲಿರುವ ಜೀವಕ್ಕೆ ಎಷ್ಟು ಆಯುಷ್ಯವಿದೆಯೋ ಅಷ್ಟು ದಿವಸ ಇರುತ್ತದೆ. ಆ ನಂತರ ಗಿಡ ಬಾಡಿ(ಸತ್ತು) ಹೋಗುತ್ತದೆ.
ತುಳಸಿಕಟ್ಟೆಯ ಅಥವ ಮನೆಯ ಹತ್ತಿರದ ಬಾಡಿ ಹೋದ ತುಳಸೀ ಗಿಡವನ್ನು ಅವಶ್ಯವಾಗಿ ತೆಗೆಯಬಹುದು. ತೆಗೆದು ಹೊಸ ಸಸಿಯನ್ನು ತಂದು ನೆಡಬೇಕು.
ಬಾಡಿ ಹೋದ ಗಿಡವನ್ನು, ಮಂಗಳವಾರ, ಶುಕ್ರವಾರ, ಅಮಾವಾಸ್ಯಾ, ಪೌರ್ಣಮಿ, ಸಂಕ್ರಾಂತಿಗಳಂದು ತೆಗೆಯಬಾರದು ದ್ವಾದಶಿಯಂತೂ ಸರ್ವಥಾ ತೆಗೆಯಬಾರದು.
ಸಾಮಾನ್ಯವಾಗಿ ಯಾವುದೇ ಗಿಡವನ್ನು ಪುರುಷರೇ ತೆಗೆಯಬೇಕು. ವಂಶವನ್ನು ಬೆಳೆಸುವ ಮಹತ್ತರ ಸೌಭಾಗ್ಯದ ಕಾರ್ಯವನ್ನು ಹೊತ್ತಿರುವ ಸ್ತ್ರೀಯರು ಅದನ್ನು ಮಾಡತಕ್ಕದ್ದಲ್ಲ. ಅತ್ಯಂತ ಅನಿವಾರ್ಯ ಸಂದರ್ಭದಲ್ಲಿ ಸ್ತ್ರೀಯರು ಬಾಡಿ ಹೋದ ಗಿಡವನ್ನು ತೆಗೆಯಬಹುದು.ಹೊಸದಾದ ಗಿಡವನ್ನು ಮುತ್ತೈದೆಯಾದ ಸ್ತ್ರೀಯರು ನೆಡುವುದು ಇಡಿಯ ಕುಲಕ್ಕೆ ಯಶಸ್ಸನ್ನು ನೀಡುವ ಪುಣ್ಯಕಾರ್ಯ.
ಗಿಡ ತೆಗೆದಾದ ಮೇಲೆ ನೆರಳಿನಲ್ಲಿ ಒಂದಷ್ಟು ದಿವಸ ಪೂರ್ಣ ಒಣಗಿಸಬೇಕು. ಕಾಂಡದ ಬಳಿಯಿರುವ ದೊಡ್ಡ ಗಾತ್ರದ ಕಾಷ್ಠಗಳನ್ನು ಕೆಲವು ಹೋಮ ಹವನಗಳಲ್ಲಿ ಬಳಸುವುದರಿಂದ ಹತ್ತಿರದ ವೈದಿಕರಿಗೆ ಮತ್ತು ದೇವಾಲಯಗಳಲ್ಲಿ ನೀಡಬಹುದು .
ರೆಂಬೆ ಕೊಂಬೆಗಳಲ್ಲಿರುವ ಸಣ್ಣ ಸಣ್ಣ ಗಾತ್ರದ ಕಡ್ಡಿಗಳನ್ನೆಲ್ಲ ಪುಟ್ಟಪುಟ್ಟದಾಗಿ ಮುರಿದಿಟ್ಟುಕೊಳ್ಳಬೇಕು. ನಿತ್ಯ ವೈಶ್ವದೇವ ಮಾಡಬೇಕಾದರೆ, ಅಥವಾ ಹೋಮ ಮಾಡಬೇಕಾದರೆ ಅದನ್ನು ಬಳಸಬೇಕು. ದಪ್ಪ ಗಾತ್ರದ ಕಡ್ಡಿಯನ್ನು ಗಂಧ ತೇಯುವಾಗ ಬಳಸಬೇಕು. ತುಳಸೀಕಾಷ್ಠವನ್ನು ಸಾಣೆಕಲ್ಲಿನ ಮೇಲೆ ತೇದ ನಂತರ ಅದರಿಂದ ಬರುವ ಗಂಧದ ನೀರನ್ನು ಸ್ವಾದೂದದಕ್ಕೆ ಸೇರಿಸಿ ದೇವರಿಗೆ ಅಭಿಷೇಕ ಮಾಡಬೇಕು. ದೇವರಿಗೆ ಅತ್ಯಂತ ಪ್ರಿಯ.
ಕಾಂಡದ ಬಳಿಯಿರುವ ದೊಡ್ಡ ಗಾತ್ರದ ಕಾಷ್ಠಗಳನ್ನು ತುಳಸೀ ಮಣಿಗಳನ್ನು ಮಾಡಲು ಎತ್ತಿಟ್ಟುಕೊಳ್ಳಬಹುದು.
ಮತ್ತು ವಿಗ್ರಹಗಳನ್ನು ಸ್ವಚ್ಛ ಮಾಡಲು, ಪಂಚಾಮೃತ ಅಭಿಷೇಕ ಮಾಡಿದಾಗ ವಿಗ್ರಹದಲ್ಲಿ ಉಳಿಯುವ ಅಂಶಗಳನ್ನು ತೆಗೆಯಲು ಪುಟ್ಟ ಪುಟ್ಟ ತುಳಸೀಕಾಷ್ಠಗಳು ತುಂಬ ಉಪಯೋಗವಾಗುತ್ತವೆ.
ತುಳಸಿಯ ಕಾಷ್ಠವನ್ನು ತೆಗೆಯುವಾಗ ಕೈಗೆ ಸಿಗದಷ್ಟು ಸಣ್ಣಸಣ್ಣ ತುಳಸೀಕಾಷ್ಠದ ಕಣಗಳು ನೆಲದ ಮೇಲಿರುತ್ತವೆ. ಜೋಪಾನವಾಗಿ ಅವೆಲ್ಲವನ್ನು ತೆಗೆದು ಒಂದು ಉತ್ತಮ ಪಾತ್ರೆಯಲ್ಲಿಟ್ಟುಕೊಂಡು ದೇವರಿಗೆ ಧೂಪ ಹಾಕುವಾಗ ಅದನ್ನು ಬಳಸಬೇಕು. ಇದು ದೇವರಿಗೆ ಅತ್ಯಂತ ಪ್ರಿಯ.
ಮನೆಯಲ್ಲಿ ಮರಣವುಂಟಾದಾಗ, ದೇಹವನ್ನು ಸುಡಬೇಕಾದರೆ ಚಿತೆಯಲ್ಲಿನ ನೂರಾರು ಕಟ್ಟಿಗೆಗಳ ಮಧ್ಯದಲ್ಲಿ ಒಂದು ಸಣ್ಣ ತುಳಸೀಕಾಷ್ಠವಿದ್ದರೂ ಸಕಲ ಪಾಪಗಳಿಂದ ಜೀವ ಮುಕ್ತನಾಗುತ್ತಾನೆ ಎಂದು ಶಾಸ್ತ್ರದ ವಚನವಿದೆ.
ಯದ್ಯೇಕಂ ತುಲಸೀಕಾಷ್ಠಂ
ಮಧ್ಯೇ ಕಾಷ್ಠಶತಸ್ಯ ಚ
ದಾಹಕಾಲೇ ಭವೇನ್ಮುಕ್ತಿಃ
ಪಾಪಕೋಟಿಯುತಸ್ಯ ಚ
ಹೀಗಾಗಿ ಸಾವುಂಟಾದವರ ಮನೆಗೆ ಹೋಗುವಾಗ ಮನೆಯಲ್ಲಿನ ಒಂದಷ್ಟು ಕಾಷ್ಠವನ್ನು ತೆಗೆದುಕೊಂಡು ಹೋಗಿ ಕೊಡಬೇಕು.
ಹೀಗೆ, ಕೈಗೆ ಸಿಗಲಾರದಂತಹ ಕಣದಿಂದ ಪುಡಿಯಿಂದ ಆರಂಭಿಸಿ ಗಟ್ಟಿಯ ಕಾಷ್ಠದವರೆಗೆ ತುಳಸೀ ಗಿಡ ಭಗವಂತನಿಗೆ ಸಮರ್ಪಿತವಾಗಬೇಕು. ತುಳಸೀ ಕಾಷ್ಟದಿಂದ ಮಣಿಗಳ ಮಾಡಿ ಧಾರಣೆ ಮಾಡಬಹುದು ಇದು ಶರೀರ ಹಾಗೂ ಮನಸ್ಸನ್ನು ಶುದ್ಧೀಕರಿಸುವುದು. ದೇವರ ಪೂಜೆಗೆ ತುಳಸಿ ಸಿಗದಿದ್ದಾಗ ತುಳಸೀ ಕಾಷ್ಟವನ್ನಾದರೂ ಉಪಯೋಗಿಸಬಹುದು. ತುಲಸೀ ಕಾನನಂ ಯತ್ರ ಯತ್ರ ಪದ್ಮವನಾನಿ ಚ। ವಸಂತಿ ವೈಷ್ಣವಾ ಯತ್ರ ತತ್ರ ಸನ್ನಿಹಿತೋ ಹರಿಃ।