ತುಳು ಭಾಷೆಗೆ ಅಧಿಕೃತ ಮಾನ್ಯತೆ ನೀಡಲು ಟ್ವೀಟ್ ಅಭಿಯಾನ! ಲಕ್ಷಕ್ಕೂ ಅಧಿಕ ಟ್ವೀಟ್ ಮೂಲಕ ಕರಾವಳಿಗರ ಕೂಗು ಕೇಂದ್ರಕ್ಕೆ ರವಾನೆ!

ಕುಡ್ಲ: ರಾಜ್ಯದ ಕರಾವಳಿ ಭಾಗದ ಜನರ ಬಾಯಲ್ಲಿ ಕೇಳಲು ಸಿಗೋದು ಒಂದೇ ಭಾಷೆ, ಅದು ತುಳು. ಈ ಭಾಗದ ಜನರು ತುಳುವರೆಂದೇ ಗುರುತಿಸಿಕೊಳ್ಳುತ್ತಾರೆ. ಇಲ್ಲಿನ ಜನತೆಯೂ ಅಷ್ಟೇ ತಮ್ಮನ್ನು ತಾವು ‘ತುಳುವಪ್ಪೆನ ಜೋಕುಲು'(ತುಳು ಅಮ್ಮನ ಮಕ್ಕಳು) ಎಂದೇ ಕರೆಸಿಕೊಳ್ಳುತ್ತಾರೆ. ಅಂದರೆ ಈ ಭಾಷೆಗೆ ಅವರು ತಾಯಿ ಸ್ಥಾನವನ್ನೇ ನೀಡಿದ್ದಾರೆ. ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಹೀಗೇ ನಾನಾ ಧರ್ಮದ ಜನರಿದ್ದರೂ ಇವರನ್ನೆಲ್ಲಾ ಒಂದಾಗಿಸಿರುವುದು ತುಳು ಭಾಷೆ. ಧರ್ಮ ಎಂಬ ಗಡಿಯನ್ನು ತಳ್ಳಿ ಕರಾವಳಿ ಭಾಗದ ಜನರನ್ನು ಒಂದಾಗಿಸಿದೆ ಈ ಭಾಷೆ. ಸದ್ಯ ಈ ತುಳು ಭಾಷೆಗೆ ಸಾಂವಿಧಾನಿಕ ‌ಮಾನ್ಯತೆ ನೀಡುವಂತೆ ಒತ್ತಾಯಿಸಿ ಕರಾವಳಿಯಲ್ಲಿ ಟ್ವಿಟರ್ ಅಭಿಯಾನ ಆರಂಭವಾಗಿದೆ.

ತುಳು ಸಂಘಟನೆಗಳು ಮತ್ತು ತುಳು ಭಾಷಿಗರರಿಂದ ಆರಂಭವಾಗಿರುವ ಈ ಅಭಿಯಾನ ಬೆಂಬಲಿಸಿ ಸಾವಿರಾರು ಟ್ವೀಟ್ ಗಳು ಹರಿದು ಬರಲಾರಂಭಿಸಿವೆ. ಭಾರತದ ಟ್ವಿಟರ್ ಟ್ರೆಂಡಿಂಗ್‌ನಲ್ಲಿ #TuluOfficialinKA_Kl ಹ್ಯಾಷ್‌ ಟ್ಯಾಗ್ 31ನೇ ಸ್ಥಾನದಲ್ಲಿದೆ. ತುಳು ಭಾಷೆಗೆ ಸಾಂವಿಧಾನಿಕ ‌ಮಾನ್ಯತೆ ನೀಡುವಂತೆ ಒತ್ತಾಯಿಸಿ ಅಭಿಯಾನ ಆರಂಭವಾದಾಗಿನಿಂದ ಈವರೆಗೂ ಲಕ್ಷಕ್ಕೂ ಹೆಚ್ಚು ಟ್ವೀಟ್‌ಗಳಾಗಿದ್ದು, ತುಳುನಾಡಿನ ಜನತೆಯ ಒಗ್ಗಟ್ಟು ಪ್ರದರ್ಶನವಾಗಿದೆ.

READ ALSO

ಈ ಹಿಂದೆಯೂ ತುಳುಭಾಷೆಯ ಸ್ಥಾನಮಾನಕ್ಕಾಗಿ ಟ್ವೀಟ್‌ ಅಭಿಯಾನ ಮಾಡಲಾಗಿತ್ತು. ಆದರೆ ಸರ್ಕಾರ ತುಳುವರ ಕೂಗಿಗೆ ಕಿವಿಯಾಗಿಲ್ಲ, ಕರಾವಳಿ ಭಾಗದ ರಾಜಕಾರಣಿಗಳು ಅಸಕ್ತಿ ತೋರಿಸಿರಲಿಲ್ಲ. ಹೀಗಾಗಿ ಮತ್ತೆ ಜೈ ತುಳುನಾಡು ಸಂಘಟನೆ ನೇತೃತ್ವದಲ್ಲಿ ಶಕ್ತಿ ಪ್ರದರ್ಶನ ಆರಂಭಿಸಲಾಗಿದೆ. ಸಂಜೆಯವರೆಗೂ ನಡೆಯಲಿರುವ ಅಭಿಯಾನದಲ್ಲಿ ದೇಶ-ವಿದೇಶಗಳ ತುಳುವರು ಭಾಗಿಯಾಗಲಿದ್ದಾರೆ.