
ಮಂಗಳೂರು: ಇತ್ತೀಚಿನ ದಿನಗಳಲ್ಲಿ ಸಮಾಜದ ಒಂದು ವರ್ಗ ತುಳುನಾಡಿನ ಪವಿತ್ರ ನಂಬಿಕೆ ಎಂದೇ ಪರಿಗಣಿಸಲ್ಪಟ್ಟಿರುವ ದೈವಾರಾಧನೆಯನ್ನು ಚಿತ್ರವಿಚಿತ್ರ ರೀತಿಯಲ್ಲಿ ಬಿಂಬಿಸಿ ಅಸಂಖ್ಯಾತ ದೈವ ಭಕ್ತರಿಗೆ ನೋವುಂಟು ಮಾಡುತ್ತಿದ್ದಾರೆ ಎಂದು ಆರೋಪಿಸಿ ಯುವ ತುಳುನಾಡ್ ಕುಡ್ಲ ಸಂಘಟನೆಯು ಮಂಗಳೂರು ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ.
ದೈವ ನಂಬಿಕೆಗೆ ಚ್ಯುತಿ ತರುತ್ತಿರುವ ಘಟನೆಗಳು ಪುನರಾವರ್ತನೆಯಾಗುತ್ತಿರುವ ಬೆನ್ನಲ್ಲೇ ಯುವ ತುಳುನಾಡ್ ಕುಡ್ಲ(ರಿ) ಸಂಘಟನೆ ಕಾನೂನಿನ ಮೂಲಕ ಪಾಠ ಕಲಿಸುವ ದಾರಿ ತುಳಿದಿದೆ. ನಂಬಿಕೆಗೆ ಘಾಸಿ ಮಾಡುವವರ ವಿರುದ್ಧ ಯುವ ತುಳುನಾಡ್ ಕುಡ್ಲ ಸಂಘಟನೆ ಕಾನೂನಿನ ಸಮರ ಸಾರಿದೆ.
ದೈವದ ಫೋಟೋಗಳನ್ನು ಬಳಸಿ ಅಸಭ್ಯವಾಗಿ ಎಡಿಟ್ ಮಾಡುವುದು, ನಂಬಿಕೆಗೆ ನೋವುಂಟು ಮಾಡುವ ರೀತಿಯ ಕಲ್ಪನೆಯ ಚಿತ್ರಗಳನ್ನು ಬಿಡಿಸುವುದು, ಸಿನೇಮಾ ಚಿತ್ರದ ಹಾಡುಗಳನ್ನು ಹಾಕಿ ಎಡಿಟ್ ಮಾಡುವುದು, ಮನಸ್ಸಿಗೆ ಘಾಸಿ ಉಂಟು ಮಾಡುವ, ಅಗತ್ಯವೇ ಇಲ್ಲದೆ ಇರುವ ಭಂಗಿಯಲ್ಲಿ ದೈವದ ಫೋಟೋ ತೆಗೆಯುವುದು, ಸಂದಿ ಪಾಡ್ದನ ಬೀರಗಳಲ್ಲಿ ಇಲ್ಲದ ಕಥೆಕಟ್ಟಿ ಅದಕ್ಕೆ ತಕ್ಕುದಾದ ವೀಡಿಯೋ ಮಾಡುವುದು ಇವೇ ಮೊದಲಾದ ಸಂಗತಿಗಳನ್ನು ಗಮನದಲ್ಲಿಟ್ಟುಕೊಂಡು ಅನೇಕ ಸಾಮಾಜಿಕ ಜಾಲತಾಣ ಪೇಜ್, ಗ್ರೂಪ್, ಖಾತೆಗಳ ಮೇಲೆ ದೂರು ಸಲ್ಲಿಸಲಾಗಿದೆ.

ತುಳುನಾಡ ದೈವಾರಧನೆ ಸಸಂಸ್ಕೃತಿ ಮೂಲ ನಂಬಿಕೆ ಉಳಿಸಬೇಕೆಂಬ ನಿಟ್ಟಿನಲ್ಲಿ ಯುವ ತುಳುನಾಡ್ “ತುಳುನಾಡ ಸಂಸ್ಕೃತಿ ಓರಿಪಾಗ” ಅಭಿಯಾನವನ್ನು ಪ್ರಾರಂಭಿಸಿದೆ. ತುಳುನಾಡಿನಾದ್ಯಂತ ದೈವಸ್ಥಾನಗಳಲ್ಲಿ ಚಿತ್ರೀಕರಣ ನಿಷೇಧ ಮತ್ತು ತುಳುಲಿಪಿ ಬೊರ್ಡ್ ಮತ್ತು ಮನವಿಗಳನ್ನು ಮಾಡುತ್ತಾ ಬರುತ್ತಿದೆ.
ಈ ಹಿಂದೆಯೂ ಅನೇಕ ಬಾರಿ ಈ ಬಗ್ಗೆ ತುಳುನಾಡಿನಾದ್ಯಂತ ದೈವ ನಂಬಿಕೆಗೆ ಘಾಸಿ ಮಾಡುವವರ ವಿರುದ್ಧ ಭಾರಿ ವಿರೋಧ ವ್ಯಕ್ತವಾಗಿತ್ತು. ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ನಂಬಿಕೆ ಒರಿಪಾಗ ಎನ್ನುವ ಹ್ಯಾಶ್‌ಟ್ಯಾಗ್‌ನಡಿ ಅಭಿಯಾನ ನಡೆದಿತ್ತು. ನೂರಾರು ಜನ ದೈವದ ಭಕ್ತಿಗೀತೆಯನ್ನು ಬರೆಯುವುದಿಲ್ಲ, ದೈವದ ಫೋಟೋವನ್ನು ಲೈಕ್ಸ್‌ಗಾಗಿ ಬಳಸಿಕೊಳ್ಳುವುದಿಲ್ಲ, ಎಡಿಟೆಡ್ ವೀಡಿಯೋ ಪೋಸ್ಟ್ ಮಾಡುವುದಿಲ್ಲ, ಎಡಿಟ್ ಮಾಡುವುದಿಲ್ಲ ಎಂಬ ಪ್ರತಿಜ್ಞೆ ಕೂಡಾ ತೆಗೆದುಕೊಂಡಿದ್ದು ಭಾರೀ ಸುದ್ದಿಯಾಗಿತ್ತು. ಹೀಗಾಗಿ ಎಡಿಟ್ ಮಾಡುವ, ಫೋಟೋ ತೆಗೆಯುವ, ಚಿತ್ರ ಬಿಡಿಸುವ ಮುನ್ನ ಯೋಚಿಸಿ. ಕಾನೂನಿನ ಕುಣಿಕೆಯಲ್ಲಿ ಬೀಳಬೇಡಿ.

ಯುವ ತುಳುನಾಡ್ ಕುಡ್ಲ ಸಂಘಟನೆ ಈಗಾಗಲೇ ಮಂಗಳೂರು ಕಮಿಷನರ್, ಜಿಲ್ಲಾ ಸೈಬರ್ ಕ್ರೈಮ್ ಸ್ಟೇಷನ್ ಹಾಗೂ ಮಂಗಳೂರು ನಗರದ ಪೊಲೀಸ್ ಠಾಣೆಗಳಲ್ಲಿ ಈ ಬಗ್ಗೆ ಈಗಾಗಲೇ ದೂರು ದಾಖಲಿಸಿದೆ.