ಬೆಳ್ತಂಗಡಿ: ಇತ್ತೀಚೆಗೆ ಉಜಿರೆಯಲ್ಲಿ ಪಾಕ್ ಪರ ಘೋಷಣೆ ಕೂಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರಿ ಚರ್ಚೆಗೆ ಗ್ರಾಸವಾಗಿದ್ದ ವೀಡಿಯೋ ಒಂದನ್ನು ತಿರುಚಿ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಆರೋಪಿಸಿ ಪವನ್ ಶೆಟ್ಟಿ ಎಂಬವರು ಬೆಳ್ತಂಗಡಿ ಠಾಣೆಗೆ ದೂರು ನೀಡಿದ್ದಾರೆ.
ಗ್ರಾಮ ಪಂಚಾಯತ್ ಚುನಾವಣೆಯ ಮತ ಎಣಿಕೆಯ ದಿನದಂದು ಎಸ್.ಡಿ.ಪಿ.ಐ ಪಕ್ಷದ ಬೆಂಬಲಿತರು ಗ್ರಾ.ಪಂ.ಸದಸ್ಯರಾಗಿ ಆಯ್ಕೆಯಾದ ಸಂಭ್ರಮಾಚರಣೆ ನಡೆಸುತ್ತಿದ್ದ ಸಂದರ್ಭದಲ್ಲಿ ಕೆಲವರು ಪಾಕಿಸ್ಥಾನಕ್ಕೆ ಪರ ಘೋಷಣೆ ಕೂಗಿದ್ದರು ಎಂಬ ಆರೋಪದಡಿಯಲ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಕೆಲವರನ್ನು ವಶಕ್ಕೆ ಪಡೆದುಕೊಂಡಿದ್ದರು.
ಇದಕ್ಕೆ ಪೂರಕವಾಗಿ ಹಿಂದು ಕಾರ್ಯಕರ್ತನೋರ್ವನ ಭಾವಚಿತ್ರ ಬಳಸಿ ಅವಹೇಳನ ಮಾಡಿರುವ ಕುರಿತು ಇಂದು ಬೆಳ್ತಂಗಡಿ ಠಾಣೆಯಲ್ಲಿ ದೂರು ನೀಡಲಾಗಿದೆ.
ಉಜಿರೆ ನಿವಾಸಿ ಹಿಂದೂ ಕಾರ್ಯಕರ್ತ ಪಾಕಿಸ್ತಾನ ಪರ ಘೋಷಣೆ ಕೂಗಿದ್ದಾನೆ ಎಂದು, ಸಾಮಾಜಿಕ ಜಾಲತಾಣದಲ್ಲಿ ಫೋಟೋ ಸಹಿತ ಹರಿಬಿಡಲಾಗಿತ್ತು. ಈ ವಿಚಾರವಾಗಿ ತನ್ನ ಮಾನಹಾನಿಗೆ ಪ್ರಯತ್ನಿಸಲಾಗಿದೆ ಎಂದು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಎಸ್.ಡಿ.ಪಿ.ಐ. ಕಾರ್ಯಕರ್ತರ ವಿರುದ್ಧ ದೂರು ನೀಡಿದ್ದಾರೆ.
ಅದೇ ರೀತಿ ಉಜಿರೆ ಮತದಾನ ಎಣಿಕೆ ವೇಳೆ ಹಿಂದೂ ಕಾರ್ಯಕರ್ತರೇ ದೇಶ ದ್ರೋಹದ ಘೋಷಣೆ ಕೂಗಿದ್ದಾರೆ ಎಂದು ಆರೋಪಿಸಿ ಅವರ ವಿರುದ್ಧ ಸೂಕ್ತ ತನಿಖೆ ಕೈಗೊಳ್ಳಬೇಕು ಎಂದು ಎಸ್.ಡಿ.ಪಿ.ಐ. ಕಾರ್ಯಕರ್ತರು ಬೆಳ್ತಂಗಡಿ ಠಾಣೆಯಲ್ಲಿ ಪ್ರತಿ ದೂರನ್ನು ನೀಡಿದ್ದಾರೆ.
ಈ ಕುರಿತಂತೆ ಇತ್ತಂಡಗಳ ಪ್ರಕರಣವನ್ನು ದಾಖಲಿಸಿಕೊಂಡಿರುವ ಪೋಲೀಸರು ತನಿಖೆ ನಡೆಸುತ್ತಿದ್ದಾರೆ.