ಮದ್ಯ ಪ್ರೀಯರಿಗೆ ಬಿಗ್ ಶಾಕ್ ಅಬಕಾರಿ ಸುಂಕ ಹೆಚ್ಚಿಸಿದ ರಾಜ್ಯ ಸರಕಾರ

ಬೆಂಗಳೂರು: ಕೊರೋನಾ ಸಂಕಷ್ಟ ಮತ್ತು ಲಾಕ್‌ಡೌನ್ ನಿಂದಾಗಿ ಸಂಪನ್ಮೂಲ ಕ್ರೋಢೀಕರಣಕ್ಕೆ ಕರ್ನಾಟಕ ಸರ್ಕಾರ ಮದ್ಯದ ಮೇಲಿನ ಅಬಕಾರಿ ಸುಂಕವನ್ನು ಶೇ.11 ರಿಂದ ಶೇ.17ಕ್ಕೆ ಏರಿಸಿದೆ.

ಲಾಕ್‌ಡೌನ್‌ನಿಂದಾಗಿ ಕಳೆದ 45 ದಿನಗಳಿಂದ ಮದ್ಯ ಮಾರಾಟಕ್ಕೆ ನಿಷೇಧ ಹೇರಲಾಗಿತ್ತು. ಆದರೆ, ಸೋಮವಾರದಿಂದ ರಾಷ್ಟ್ರದಾದ್ಯಂತ ಮದ್ಯದ ಮಾರಾಟಕ್ಕೆ ಅವಕಾಶಮಾಡಿಕೊಡಲಾಗಿದ್ದು ಮದ್ಯ ಮಾರಾಟಕ್ಕೆ ಅವಕಾಶ ನೀಡಿದ ಕಳೆದ ಎರಡು ದಿನದ ಅವಧಿಯಲ್ಲಿ ರಾಜ್ಯದಲ್ಲಿ ಸುಮಾರು 1,000 ಕೋಟಿಯಷ್ಟು ಮದ್ಯ ಮಾರಾಟವಾಗಿರಬಹುದು ಎಂದು ಅಂದಾಜಿಸಲಾಗಿದೆ.

READ ALSO

ಈ ಹಿನ್ನೆಲೆಯಲ್ಲಿ ಆದಾಯವನ್ನು ಹೆಚ್ಚಿಸುವ ಸಲುವಾಗಿ ರಾಜ್ಯ ಸರ್ಕಾರ ಮತ್ತೆ ಅಬಕಾರಿ ಸುಂಕವನ್ನು ಹೆಚ್ಚಿಸಿದೆ ಎಂದು ಹೇಳಲಾಗುತ್ತಿದೆ.

ಈ ಹಿಂದೆ ಅಬಕಾರಿ ಸುಂಕು ಶೇ.5 ರಷ್ಟಿತ್ತು. ಆದರೆ, ಕಳೆದ ಸಾಲಿನ ಬಜೆಟ್‌ ವೇಳೆ ಈ ಸುಂಕವನ್ನು ಶೇ.11ಕ್ಕೆ ಏರಿಸಲಾಗಿತ್ತು. ಆದರೆ, ಇಂದು ರಾಜ್ಯ ಸರ್ಕಾರ ಮತ್ತೊಮ್ಮೆ ಅಬಕಾರಿ ಸುಂಕವನ್ನು ಶೇ.6 ರಷ್ಟು ಏರಿಸಿದೆ. ಪರಿಣಾಮ ರಾಜ್ಯದಲ್ಲಿ ಒಟ್ಟಾರೆ ಅಬಕಾರಿ ಸುಂಕ ಶೇ.17ಕ್ಕೆ ಏರಿಕೆಯಾದಂತಾಗಿದೆ.

ಹೀಗಾಗಿ ಇನ್ನೂ ಎರಡು ಅಥವಾ ಮೂರು ದಿನಗಳಲ್ಲಿ ಮದ್ಯದ ಬಾಟಲ್‌ಗಳ ಮೇಲೆ ಹೊಸ ದರಗಳ ಲೇಬಲ್ ಗಳೊಂದಿಗೆ ಮಾರಾಟ ಆರಂಭವಾಗಲಿದೆ. ಆದರೆ, ಮೊದಲೇ ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಒಳಗಾಗಿರುವ ಮದ್ಯಪ್ರಿಯರು ದಿಢೀರ್ ಅಬಕಾರಿ ಸುಂಕ ಏರಿಕೆಯಿಂದ ಮತ್ತಷ್ಟು ಸಂಕಷ್ಟಕ್ಕೆ ಒಳಗಾಗಲಿದ್ದಾರೆ ಎನ್ನಲಾಗುತ್ತಿದೆ.