ಕಾರವಾರ ಆಗಸ್ಟ 15 : ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆಯ ಆ್ಯಪ್‍ನಿಂದ ರೈತರ ಜಮೀನಿಗೆ ತೆರಳಿ ರೈತರಿಂದಲೇ ಬೆಳೆಯನ್ನು ನಮೂದಿಸುವ ಕಾರ್ಯಕ್ಕೆ ಸಕ್ಕರೆ, ಕಾರ್ಮಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್ ಶನಿವಾರ ಚಾಲನೆ ನೀಡಿದರು.
ತಾಲೂಕಿನ ಬಿಣಗಾ ಗ್ರಾಮದ ರೈತ ವಾಸು ದಿಲಗಾ ಗೌಡ ಅವರ ರಿ.ಸ.ನಂ 25/03 ಜಮೀನಿನಲ್ಲಿ ಬೆಳೆದ ಭತ್ತದ ಬೆಳೆಯ ಛಾಯಾಚಿತ್ರ ಅಪ್‍ಲೋಡ್ ಮಾಡುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು ಬೆಳೆ ಸಮೀಕ್ಷೆ ಯೋಜನೆಯನ್ವಯ ಜಿಲ್ಲೆಯ ರೈತರು ತಮ್ಮ ಜಮೀನಿನ ಸರ್ವೆ ನಂಬರ, ಹಿಸ್ಸಾ ನಂಬರವಾರು ತಾವು ಬೆಳೆದ ಕೃಷಿ ಬೆಳೆ ಹಾಗೂ ಬಹುವಾರ್ಷಿಕ ತೋಟಗಾರಿಕೆ, ಅರಣ್ಯ ಇತರೆ ಬೆಳೆ ಸಮೀಕ್ಷೆ 2020 ಆ್ಯಪ್ ಡೌನ್‍ಲೋಡ್ ಮಾಡಿಕೊಂಡು ಸ್ವತಃ ತಾವೇ ಬೆಳೆ ಸಮೀಕ್ಷೆ ಮೂಲಕ ನೋಂದಾಯಿಸಬಹುದಾಗಿದೆ ಎಂದು ತಿಳಿಸಿದರು.
ಬೆಳೆ ನಮೂದಿಸಲು ಆಗಸ್ಟ 24 ಕೊನೆಯ ದಿನವಾಗಿದ್ದು, ರೈತರು ನಿಗದಿತ ಸಮಯದಲ್ಲಿ ತಾವು ಬೆಳೆದ ಬೆಳೆಯನ್ನು ಅಪ್‍ಲೋಡ್ ಮಾಡಬೇಕು. ಈ ಯೋಜನೆಯ ಸದುಪಯೋಗವನ್ನು ರೈತರು ಪಡದುಕೊಳ್ಳಬೇಕು. ಇಲ್ಲದಿದ್ದರೆ ಇಲಾಖೆಯಿಂದ ದೊರೆಯುವ ವಿವಿಧ ಸೌಲತ್ತುಗಳಿಂದ ವಂಚಿತರಾಗುವಿರಿ ಎಂದು ತಿಳಿಸಿದರು.
ಈ ಸಮೀಕ್ಷೆಯಿಂದ ಕೃಷಿ, ತೋಟಗಾರಿಕೆ, ರೇಷ್ಮೆ ಬೆಳೆಗಳ ವಿಸ್ತೀರ್ಣ ಲೆಕ್ಕ ಹಾಕುವಲ್ಲಿ, ಪ್ರಕೃತಿ ವಿಕೋಪದ ಸಂದರ್ಭದಲ್ಲಿ ಬೆಳೆ ಹಾನಿ ಕುರಿತು ಅರ್ಹ ಫಲಾನುಭವಿಗಳ ಪಟ್ಟಿ ತಯಾರಿಸುವಲ್ಲಿ, ಬೆಳೆ ವಿಮಾ ಯೋಜನೆಯಡಿ ಸರ್ವೆ ನಂಬರವಾರು ಬೆಳೆ ಪರಿಶೀಲನೆ ಹಾಗೂ ಬೆಳೆ ಕಟಾವು ಪ್ರಯೋಗಗಳನ್ನು ಕೈಗೊಳ್ಳಲು, ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಅರ್ಹ ಫಲಾನುಭವಿಗಳನ್ನು ಗುರುತಿಸಲು ಹಾಗೂ ಬೆಳೆ ಮಾನದಂಡಗಳಿಗೆ ಅನುಗುಣವಾಗಿ ಕೃಷಿ, ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆಗಳ ಫಲಾನುಭವಿ ಆಧಾರಿತ ಯೋಜನೆ ಅನುಷ್ಠಾನಕ್ಕೆ ಸಹಾಯವಾಗಲಿದೆ ಎಂದು ತಿಳಿಸಿದರು.
ರೈತರು ತಪ್ಪದೇ ತಮ್ಮ ಜಮೀನಿನಲ್ಲಿರುವ ಬೆಳೆಗಳ ವಿವರಗಳನ್ನು ದಾಖಲಿಸಬೇಕು. ಗ್ರಾಮಗಳಲ್ಲಿರುವ ವಿದ್ಯಾವಂತ ಯುವಕರು ರೈತರ ಬೆಳೆ ಸಮೀಕ್ಷೆ ಆ್ಯಪ್ ಡೌನ್‍ಲೋಡ್ ಮಾಡಿಕೊಂಡು ತಮ್ಮ ಭಾಗದ ರೈತ ಸಮೂದಾಯ ಬೆಳೆ ಮಾಹಿತಿಯನ್ನು ದಾಖಲಿಸಬಹುದಾಗಿದೆ. ಈ ಕುರಿತು ಹೆಚ್ಚಿನ ಮಾಹಿತಿ ಬೇಕಾದಲ್ಲಿ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿಗಳು, ಕಂದಾಯ ನಿರೀಕ್ಷಕರು, ಗ್ರಾಮ ಲೆಕ್ಕಾಧಿಕಾರಿಗಳು, ಸಹಾಯಕ ತೋಟಗಾರಿಕೆ ಅಧಿಕಾರಿಗಳು, ರೇಷ್ಮೆ ಮತ್ತು ನೀರಾವರಿ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಬೇಕೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಶಾಸಕಿ ರೂಪಾಲಿ ನಾಯ್ಕ ಜಿಲ್ಲಾಧಿಕಾರಿ ಡಾ.ಕೆ. ಹರೀಶ ಕುಮಾರ, ಅಪರ ಜಿಲ್ಲಾಧಿಕಾರಿ ಕೃಷ್ಣಮೂರ್ತಿ ಹೆಚ್. ಕೆ. ಕೃಷಿ ಜಂಟಿ ನಿರ್ದೇಶಕ ಹೊನ್ನಪಗೌಡ ಸೇರಿದಂತೆ ಇತರರು ಹಾಜರಿದ್ದರು.