ಬೈಂದೂರು(ನ. 13): ಬೆಳಕಿನ ಹಬ್ಬ ದೀಪಾವಳಿಯನ್ನು ಬೈಂದೂರಿನ ಒತ್ತಡಗಾಯ ನಿರ್ವಹಣಾ ಹಾಗೂ ಪುನಶ್ಚೇತನ ಕೇಂದ್ರ ಸೇವಾಧಾಮದಲ್ಲಿ ಶಾಸಕರಾದ ಶ್ರೀ ಗುರುರಾಜ್ ಗಂಟಿಹೊಳೆ ಅವರ ಪರಿಕಲ್ಪನೆಯ ಸಮೃದ್ಧ ಬೈಂದೂರು ಸಹಕಾರದೊಂದಿಗೆ ನವೆಂಬರ್ 13 ರಂದು ದೀಪಾವಳಿ ಹಬ್ಬವನ್ನು ಆಚರಿಸಲಾಯಿತು.
ಬೆನ್ನುಹುರಿ ಅಪಘಾತಕ್ಕೊಳಗಾದ ವ್ಯಕ್ತಿಗಳು ದೈಹಿಕ ಸವಾಲುಗಳ ಜೊತೆಗೆ ಮಾನಸಿಕ ಒತ್ತಡ ಹಾಗೂ ಸಾಮಾಜಿಕ ಪ್ರತ್ಯೇಕತೆಯನ್ನು ಎದುರಿಸುವ ಸಾಧ್ಯತೆಗಳಿರುತ್ತವೆ. ಇಂತಹ ವ್ಯಕ್ತಿಗಳಿಗೆ ಸೂಕ್ತ ವೈದ್ಯಕೀಯ ಆರೈಕೆ, ಪುನರ್ವಸತಿ ಸೌಲಭ್ಯ ಹಾಗೂ ಮಾನಸಿಕ ಬೆಂಬಲವನ್ನು ಒದಗಿಸಿ, ಅವರು ಆತ್ಮವಿಶ್ವಾಸದಿಂದ ಬದುಕು ಸಾಗಿಸಲು ನೆರವಾಗುವ ಕಾರ್ಯವನ್ನು ಸೇವಾಧಾಮ ನಿರಂತರವಾಗಿ ನಡೆಸುತ್ತಿದೆ. ಈ ಹಿನ್ನೆಲೆಯಲ್ಲಿ ಹಬ್ಬದ ಆಚರಣೆಯು ಸನಿವಾಸಿಗಳಲ್ಲಿ ಸಂತಸವನ್ನು ಮೂಡಿಸುವ ಉದ್ದೇಶ ಹೊಂದಿತ್ತು.
ಕಾರ್ಯಕ್ರಮವನ್ನು ಬೈಂದೂರು ಬಿಜೆಪಿ ಮಂಡಲ ಅಧ್ಯಕ್ಷೆ ಶ್ರೀಮತಿ ಅನಿತಾ ಆರ್. ಕೆ., ಶಿರೂರಿನ ನಂಬಿಯಾರ್ ಕ್ಲಿನಿಕ್‌ನ ಡಾ. ನಂಬಿಯಾರ್, ಬೈಂದೂರು ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ಶ್ರೀ ಗೋಪಾಲ್ ವಸ್ರೆ, ಸೇವಾಭಾರತಿಯ ಕಾರ್ಯದರ್ಶಿ ಶ್ರೀ ವಿಷ್ಣುಪ್ರಸಾದ್ ತೆಂಕಿಲ್ಲಾಯ, ಶ್ರೀಮತಿ ಮಂಜುಳಾ ವಿ. ಪ್ರಸಾದ್, ಶ್ರೀ ಸೀತಾರಾಮ ಶೆಟ್ಟಿ, ಶ್ರೀ ಜೇಸನ್ ಎಂ.ಡಿ. ಹಾಗೂ ಶ್ರೀಮತಿ ಮಾಲಿನಿ ಅವರು ಉದ್ಘಾಟಿಸಿದರು.
ದೀಪಾವಳಿ ಪ್ರಯುಕ್ತ ಬೆನ್ನುಹುರಿ ಅಪಘಾತಕ್ಕೊಳಗಾದ ದಿವ್ಯಾಂಗರು, ಫಲಾನುಭವಿಗಳು, ಆರೈಕೆದಾರರು ಹಾಗೂ ಸಿಬ್ಬಂದಿವರ್ಗದವರಿಗೆ ವಿಭಿನ್ನ ಚಟುವಟಿಕೆಗಳನ್ನು ಮಾಡಿ ಜೊತೆಗೆ ಹಾಡು ಹಾಡುದರ ಮೂಲಕ ಎಲ್ಲರನ್ನು ಮನರಂಜಿಸಲಾಯಿತು. ಅಮೃತಗಳಿಗೆಯಲ್ಲಿ ಅಮೃತ ಹಸ್ತದಲ್ಲಿ ಹಣತೆಯನ್ನು ಹಚ್ಚಿ ಪಟಾಕಿಯನ್ನು ಸಿಡಿಸಿ ದೀಪಾವಳಿಯನ್ನು ಸಂಭ್ರಮಿಸಲಾಯಿತು.
ಸಂಸ್ಥೆಯ ದಾನಿಗಳು, ಹಿತೈಷಿಗಳು, ಹೇನಬೇರು ಗ್ರಾಮಸ್ಥರು, ಸನಿವಾಸಿಗಳು, ಆರೈಕೆದಾರರು, ಸ್ವಯಂಸೇವಕರು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು..




