ಬೇಟೆಯಾಡಲು ಬಂದ ಚಿರತೆ ನಾಯಿಯೊಂದಿಗೆ ಮನೆಯೊಳಗೆ ಲಾಕ್!

ಉಡುಪಿ: ಬ್ರಹ್ಮಾವರ ತಾಲೂಕಿನ ನೈಲಾಡಿ ಸಮೀಪ ಆಹಾರ ಹುಡುಕಿ ಬಂದಿದ್ದ ಚಿರತೆಯೊಂದು ಮನೆಯ ಕೋಣೆಯೊಳಗೆ ಬಂಧಿಯಾಗಿದ್ದು, ಅರಣ್ಯ ಇಲಾಖೆಯ ಕಾರ್ಯಾಚರಣೆ ಮೂಲಕ ಚಿರತೆಯನ್ನು ರಕ್ಷಿಸಲಾಗಿದೆ.

ಇಂದು ಬೆಳಗ್ಗಿನ ಜಾವ ಆಹಾರ ಹುಡುಕತ್ತಾ ಬಂದಿದ್ದ ಚಿರತೆ ಸಾಕು ನಾಯಿಯ ಬೇಟೆಗೆ ಮುಂದಾಗಿದೆ. ಚಿರತೆ ಬೆನ್ನಟ್ಟಿದ ಕಾರಣ ನಾಯಿ ಮನೆಯ ಕೋಣೆಗೆ ಹೊಕ್ಕಿದೆ. ಬೆನ್ನ ಹಿಂದೆಯೇ ಬಂದ ಚಿರತೆ ತಾನೂ ಕೋಣೆಯೊಳಗೆ ಹೊಕ್ಕಿದೆ. ಅಲ್ಲಿಂದೀಚೆಗೆ ಎರಡೂ ಪ್ರಾಣಿಗಳು ಒಂದೇ ಕೋಣೆಯೊಳಗೆ ಬಂಧಿಯಾಗಿವೆ. ಕೋಣೆಯೊಳಗೆ ಸದ್ದು ಕೇಳಿ ಮನೆಯವರು ಎಚ್ಚರಗೊಂಡು ಕೋಣೆ ಬಾಗಿಲು ಹಾಕಿದ್ದಾರೆ. ನಂತರ ಅರಣ್ಯ ಇಲಾಖೆಯ ಸಿಬ್ಬಂದಿಗಳಿಗೆ ಮಾಹಿತಿ ನೀಡಿದ್ದಾರೆ.

READ ALSO

ಸ್ಥಳಕ್ಕೆ ಶಂಕರನಾರಾಯಣ ವಲಯದ ವಲಯ ಅರಣ್ಯಾಧಿಕಾರಿ ಚಿದಾನಂದಪ್ಪ ಮಾರ್ಗದರ್ಶನದಲ್ಲಿ ಉಪ ವಲಯ ಅರಣ್ಯಾಧಿಕಾರಿ ಮಂಜುನಾಥ ನಾಯ್ಕ್, ಸಿಬ್ಬಂದಿ ರವಿ, ರವೀಂದ್ರ, ಸಂತೋಷ್ ಜೋಗಿ, ವಿಠಲ್ ನಾಯ್ಕ್, ಲಕ್ಷ್ಮಣ, ಶಿವು, ಸುದೀಪ್ ಶೆಟ್ಟಿ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.

ಬೋನ್ ಇಟ್ಟು ಅರಣ್ಯ ಇಲಾಖೆ ಸಾರ್ವಜನಿಕರ ಸಹಕಾರದೊಂದಿಗೆ ಚಿರತೆಯನ್ನು ಹಿಡಿದರು. ಸ್ಥಳದ ಸುತ್ತಲೂ ಊರಾರು ಸ್ಥಳೀಯರು ಸೇರಿದ್ದರು. ಸತತ ಒಂದೂವರೆ ಗಂಟೆಯ ನಿರಂತರ ಕಾರ್ಯಾಚರಣೆ ನಡೆಸಿ ಚಿರತೆ ಯನ್ನು ಬಂಧಿಸಲಾಗಿದೆ. ಬಳಿಕ ಸೈಬರ್ರಕಟ್ಟೆ ಪಶು ವೈದ್ಯಕೀಯ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆ ನಡೆಸಿ ಮೀಸಲು ಅರಣ್ಯದಲ್ಲಿ ಸುರಕ್ಷಿತವಾಗಿ ಬಿಡಲಾಯಿತು.