ಹಾಸನ : ಕೊರೋನಾ ಮಹಾಮಾರಿಯ ಬೆನ್ನಲ್ಲೇ ಗಾಳಿಯಿಂದ ಹರಡುವ ರೋಗ ಬರಲಿದೆ ಎಂದು ಕೋಡಿಮಠದ ಸ್ವಾಮಿಜೀ ಭವಿಷ್ಯ ನುಡಿದಿದ್ದಾರೆ.
ಕೊರೊನಾ ಇನ್ನಷ್ಟು ಹೆಚ್ಚಾಗುವ ಭೀತಿ ಇದೆ. ಕೊರೊನಾ ಗಾಳಿಯಿಂದ ಬರುವ ರೋಗವಲ್ಲ. ಮುಂದೆ ಗಾಳಿಯಿಂದ ಒಂದು ರೋಗ ಬರಲಿದೆ ಎಂದು ಹಾಸನ ಜಿಲ್ಲೆಯ ಕೋಡಿಮಠ ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮಿಗಳು ಭವಿಷ್ಯ ನುಡಿದಿದ್ದಾರೆ.
ಕೊರೋನಾ ಹೊಸ ರೋಗ ಅಲ್ಲ. ಅದು ಹಳೇ ರೋಗ. ಮೊದಲು ಗಂಟಲು ರೋಗ ಎಂದು ಬರುತ್ತಿತ್ತು. ಈಗ ಕೊರೋನಾ ಅಂತಾ ಹೆಸರು ಬಂದಿದೆ.
ಇದು ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಶ್ರೀಗಳು ಎಚ್ಚರಿಕೆ ನೀಡಿದರು. ಮನುಷ್ಯ ಸ್ವಚ್ಛತೆ ಮರೆತ ಹಿನ್ನಲೆಯಲ್ಲಿ ಈ ರೋಗ ಹೆಚ್ಚಾಗಲಿದೆ. ಕಾರ್ತೀಕ ಮಾಸದಲ್ಲಿ ದೇಶದ ಗ್ರಾಮೀಣ ಪ್ರದೇಶದಲ್ಲಿ ಕೊರೋನಾ ಮತ್ತಷ್ಟು ಹೆಚ್ಚಾಗುವುದು ಎಂದು ಶ್ರೀಗಳು ಭವಿಷ್ಯ ನುಡಿದರು.
ಶ್ರೀಮಂತ ಮಣಿಪುರದ ರಾಜನಿಗೆ ಮಗ ಹುಟ್ಟಿ ಸಮುದ್ರ ರಾಜ್ಯಭಾರ ಮಾಡುತ್ತಿದ್ದರೇ, ಯುದ್ಧವಿಲ್ಲದೆ ಸಾಮ್ರಾಜ್ಯ ಸರ್ವನಾಶವಾದಿತು ನೋಡಾ ಎಂದ ಸ್ವಾಮೀಜಿ ಯಾವುದೇ ಯುದ್ಧಗಳಿಲ್ಲದೆ ಸಮಾಜ ಸರ್ವನಾಶವಾಗುವ ಕಾಲವಿದು ಎಂದು ಸ್ವಾಮೀಜಿ ಭವಿಷ್ಯ ನುಡಿದರು.
‘ದೇಶ ಹಾಗೂ ರಾಜ್ಯ ರಾಜಕೀಯದಲ್ಲಿ ವಿಪ್ಲವ ಆಗಲಿದೆ’
ದೇಶ ಹಾಗೂ ರಾಜ್ಯ ರಾಜಕೀಯದಲ್ಲಿ ವಿಪ್ಲವ ಆಗಲಿದೆ. ಇದಕ್ಕೆ ಬರುವ ಜನವರಿವರೆಗೆ ಸಮಯವಿದೆ ಎಂದು ಕೋಡಿಮಠದ ಶ್ರೀಗಳು ಭವಿಷ್ಯವಾಣಿ ನುಡಿದಿದ್ದಾರೆ. ಪರೋಕ್ಷವಾಗಿ ರಾಜ್ಯ ಮತ್ತು ರಾಷ್ಟ್ರ ರಾಜಕಾರಣದಲ್ಲಿ ಬದಲಾವಣೆ ಆಗಲಿದೆ ಎಂದು ಹೇಳಿದ ಸ್ವಾಮೀಜಿ ಈಗಾಗಲೇ ಅಮೆರಿಕ ಸೇರಿದಂತೆ ಜಗತ್ತಿನ ಬಹುತೇಕ ಕಡೆ ರಾಜಕೀಯ ಬದಲಾವಣೆ ಆಗುತ್ತಿವೆ. ಇದೇ ರೀತಿ ನಮ್ಮ ರಾಜ್ಯ ಹಾಗೂ ದೇಶದಲ್ಲಿ ರಾಜಕೀಯ ವಿಪ್ಲವ ಆಗಲಿದೆ ಎಂದು ಸ್ವಾಮೀಜಿ ಭವಿಷ್ಯ ನುಡಿದರು.