ಚಾಲಕನ ಸಮಯಪ್ರಜ್ಞೆಯಿಂದ ಉಳಿಯಿತು 40ಕ್ಕೂ ಹೆಚ್ಚು ಜೀವಗಳು

ಚಿಕ್ಕಮಗಳೂರು: ಬಸ್ ನಿಲ್ದಾಣದಿಂದ ಹೊರಟ ನಿಲ್ದಾಣ ದಾಟುವ ಮುನ್ನವೇ ಬಸ್ಸಿನ ಚಕ್ರದ ಹಬ್ ಕಟ್ ಆಗಿ ಸಂಭವಿಸಬಹುದಾದಂತಹ ದೊಡ್ಡ ಅನಾಹುತವೊಂದು ಚಾಲಕನ ಸಮಯ ಪ್ರಜ್ಞೆಯಿಂದ ತಪ್ಪಿದೆ. 40ಕ್ಕೂ ಹೆಚ್ಚು ಜನರು ದೊಡ್ಡ ಅನಾಹುತದಿಂದ ಪಾರಾದ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರದ ಬಸ್ ನಿಲ್ದಾಣದಲ್ಲಿ ನಡೆದಿದೆ.

ಕೊಟ್ಟಿಗೆಹಾರ ಬಸ್ ನಿಲ್ದಾಣದಿಂದ ಹೊರಬರುತ್ತಿದ್ದಂತೆ ಬಸ್ಸಿನ ಮುಂದಿನ ಬಲಭಾಗದ ಚಕ್ರದ ಹಬ್ ಕಟ್ ಆಗಿದೆ. ಬಸ್ಸಿನ ಚಕ್ರದ ಹಬ್ಬ ಕಟ್ ಆದರೆ ಸ್ಟೇರಿಂಗ್, ಬ್ರೇಕ್ ಸೇರಿದಂತೆ ಬಸ್ಸಿನ ಯಾವ ಭಾಗವೂ ಕೆಲಸ ಮಾಡುವುದಿಲ್ಲ. ಅನಾಹುತ ಕಟ್ಟಿಟ್ಟ ಬುತ್ತಿ. ಆದರೆ ಬಸ್ ನಿಲ್ದಾಣದ ಬಾಗಿಲಲ್ಲೇ ಈ ದುರಂತ ಸಂಭವಿಸಿದ್ದು ದೊಡ್ಡ ಅನಾಹುತವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದೆ.

READ ALSO

ಬಸ್ಸಿನಲ್ಲಿ ಸುಮಾರು 38-40 ಜನ ಇದ್ದರು. ಎಲ್ಲರೂ ಕೊಟ್ಟಿಗೆಹಾರದಿಂದ ಬಾಳೆಹೊನ್ನೂರು ಮಾರ್ಗದಲ್ಲಿ ಬರುವ ಸುಮಾರು 15ಕ್ಕೂ ಹೆಚ್ಚು ಹಳ್ಳಿಯ ಜನರಿದ್ದರು. ಒಂದು ವೇಳೆ ಬಸ್ ನಿಲ್ದಾಣದಿಂದ ಹೊರಟು ಕೊಟ್ಟಿಗೆಹಾರ ದಾಟಿದ್ದರೆ ಘಾಟಿ ರಸ್ತೆಯಲ್ಲಿ ದೊಡ್ಡ ಅನಾಹುತ ಸಂಭವಿಸುತ್ತಿತ್ತು. ಬಸ್ ಕೇವಲ 30-40 ಕಿ.ಮೀ. ವೇಗದಲ್ಲಿ ಇದ್ದಿದ್ದರು ಗಾಡಿ ನಿಯಂತ್ರಣಕ್ಕೆ ಸಿಗುತ್ತಿರಲಿಲ್ಲ. ಅದೃಷ್ಟವಶಾತ್ ಯಾವ ತೊಂದರೆಯಾಗಲಿ, ಅನಾಹುತವಾಗಲಿ ಸಂಭವಿಸಿಲ್ಲ.

ಹಬ್ ಕಟ್ ಆದ ಕೂಡಲೇ ಅರಿವಾದ ಬಸ್ಸಿನ ಚಾಲಕ ಕೂಡ ಬಸ್ಸನ ಒಂದು ಅಡಿ ಮುಂದಕ್ಕೂ ತೆಗೆದುಕೊಂಡು ಹೋಗದೆ ಅಲ್ಲೇ ನಿಲ್ಲಿಸಿದ್ದಾರೆ. ಇದರಿಂದ ದೊಡ್ಡ ಅನಾಹುತವೊಂದು ಸಂಭವಿಸದಂತಾಗಿದೆ. ಬಸ್ಸಿನಲ್ಲಿದ್ದ ಪ್ರಯಾಣಿಕರು ಕೂಡ ಚಾಲಕನ ಜಾಗರೂಕತೆಗೆ ಅಭಿನಂದನೆ ಸಲ್ಲಿಸಿದ್ದಾರೆ.

ಕೊಟ್ಟಿಗೆಹಾರದಿಂದ ಬಾಳೆಹೊನ್ನೂರಿಗೆ ಸುಮಾರು 35 ಕಿ.ಮೀ. ಅಂತರವಿದೆ. ಈ ಮಾರ್ಗ ಬಹುತೇಕ ಕಾಫಿತೋಟದ ಮಾರ್ಗ. ಘಾಟಿ ರೂಪದ ರಸ್ತೆ. ಈ ರಸ್ತೆಯಲ್ಲಿ ಸಂಚರಿಸುವಾಗ ಬಸ್ಸಿನ ಹಬ್ ಕಟ್ ಆಗಿ ಅನಾಹುತ ಸಂಭವಿಸಿದ್ದರೆ ಸಾವು-ನೋವು ಕೂಡ ಸಂಭವಿಸುವ ಸಾಧ್ಯತೆಯಿತ್ತು.