TRENDING
Next
Prev

“ತಾಂಟ್ರೇ ಬಾ ತಾಂಟ್” ಎಂದು ವಿವಾದಾತ್ಮಕ ಹೇಳಿಕೆ ನೀಡುವ ಎಸ್.ಡಿ.ಪಿ.ಐ. ಮುಖಂಡನನ್ನು ಕೂಡಲೇ ಬಂಧಿಸಬೇಕು, ಇಲ್ಲದಿದ್ದರೆ ಉಗ್ರ ಹೋರಾಟ-ಹಿಂಜಾವೇ

ಬಂಟ್ವಾಳ: ಈಗಾಗಲೇ ಎರಡೆರಡು ಬಾರಿ ಸಾರ್ವಜನಿಕ ವೇದಿಕೆಯಲ್ಲಿ ಬಹಿರಂಗವಾಗಿ “ತಾಂಟ್ರೇ ಬಾ ತಾಂಟ್” ಎಂಬ ಹೇಳಿಕೆ ನೀಡಿ ಭಾರಿ ವಿವಾದಕ್ಕೆ ಕಾರಣವಾಗುತ್ತಿರುವ SDPI ಮುಖಂಡರ ವಿರುದ್ಧ ದೂರು ನೀಡಿದರೂ ಇಲಾಖೆ ಕ್ರಮ ಕೈಗೊಂಡಿಲ್ಲವೆಂದು ಹಿಂದು ಜಾಗರಣಾ ವೇದಿಕೆ ಪುತ್ತೂರು ಜಿಲ್ಲಾ ಘಟಕದ ವತಿಯಿಂದ ನಡೆದ ಪತ್ರಿಕಾಗೋಷ್ಠಿಯಲ್ಲಿ ಅಸಮಾಧಾನ ತೋಡಿಕೊಂಡಿದ್ದಾರೆ.

ಎಸ್.ಡಿ.ಪಿ.ಐ. ಮುಖಂಡ ರಿಯಾಝ್ ಫರಂಗಿಪೇಟೆ ಪದೇ ಪದೇ ನೀಡಿರುವ ಹೇಳಿಕೆಗಳ ವಿರುದ್ಧ ಈಗಾಗಲೇ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಹಿಂದು ಜಾಗರಣಾ ವೇದಿಕೆ ವತಿಯಿಂದ ದೂರು ನೀಡಲಾಗಿದ್ದು, ಇನ್ನೂ ಇಲಾಖೆ ಕ್ರಮ ಕೈಗೊಂಡಿಲ್ಲ. ರಿಯಾಝ್ ಫರಂಗಿಪೇಟೆಯನ್ನು ಕೂಡಲೇ ಬಂಧಿಸಬೇಕು, ಇಲ್ಲದಿದ್ದರೆ ಉಗ್ರ ಹೋರಾಟಕ್ಕೆ ನಾವು ತಯಾರಿದ್ದೇವೆ ಎಂದು ಹಿಂದು ಜಾಗರಣಾ ವೇದಿಕೆ ಪುತ್ತೂರು ಜಿಲ್ಲಾ ಘಟಕ ಹೇಳಿದೆ.

READ ALSO

ಬಂಟ್ವಾಳ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪುತ್ತೂರು ಜಿಲ್ಲಾ ಹಿಂಜಾವೇ ಸಂಪರ್ಕ ಪ್ರಮುಖ್ ನರಸಿಂಹ ಮಾಣಿ, ಹಿಂಜಾವೇ ರಾಜ್ಯ ಗೌರವಾಧ್ಯಕ್ಷ ವಜ್ರದೇಹಿ ಸ್ವಾಮೀಜಿ ಸಹಿತ ಹಿಂದು ಮುಖಂಡರನ್ನು ಗುರಿಯಾಗಿಸಿಕೊಂಡು ರಿಯಾಝ್ ಭಾಷಣಗಳನ್ನು ಮಾಡುತ್ತಿದ್ದು, ಇದು ಹಿಂದುಗಳನ್ನು ಪ್ರಚೋದಿಸುವಂತಿದೆ. ಈ ರೀತಿ ಭಾಷಣ ಮಾಡಿ, ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡುವುದರ ವಿರುದ್ಧ ನಾವು ಈಗಾಗಲೇ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದೂರುಗಳನ್ನು ನೀಡಿದ್ದೇವೆ. ಆದರೆ ಪೊಲೀಸರು ಇನ್ನೂ ಸೂಕ್ತ ಕ್ರಮ ಕೈಗೊಂಡಿಲ್ಲ. ವಿಳಂಗ ಗತಿ ಅನುಸರಿಸಿದರೆ, ಹೋರಾಟಕ್ಕೆ ನಾವು ಸಿದ್ಧರಿದ್ದೇವೆ ಎಂದು ಹೇಳಿದರು.

ರಿಯಾಝ್ ಫರಂಗಿಪೇಟೆಯನ್ನು ಬಂಧಿಸಿ, ಜಿಲ್ಲೆಯಿಂದ ಗಡೀಪಾರುಗೊಳಿಸಬೇಕು ಎಂದು ಒತ್ತಾಯಿಸಿದ ಅವರು, ಮುಂದಿನ ದಿನಗಳಲ್ಲಿ ಈತ ಇದೇರೀತಿ ಸಂಘಪರಿವಾರದ ನಾಯಕರನ್ನು ಸಂಘರ್ಷಕ್ಕೆ ಆಹ್ವಾನ ನೀಡುವ ಹೇಳಿಕೆನ್ನು ಮುಂದುವರಿಸಿದಲ್ಲಿ ಹಿ.ಜಾ.ವೇ.ಯ ಕಾರ್ಯಕರ್ತರು ಕೂಡ ಸೂಕ್ತ ಉತ್ತರ ನೀಡಲಿದ್ದು, ಈ ಸಂದರ್ಭದಲ್ಲಿ ಅಗಬಹುದಾದ ಯಾವುದೇ ಅನಾಹುತಕ್ಕೆ ಪೊಲೀಸ್ ಇಲಾಖೆಯೇ ಕಾರಣವಾಗಲಿದೆ. ಇದೇ ರೀತಿ ಹೇಳಿಕೆಗಳನ್ನು ನೀಡಿದರೆ, ಹಿಂದು ಸಮಾಜ ಸುಮ್ಮನೆ ಕೂರುವುದಿಲ್ಲ, ಮುಂದಿನ ದಿನಗಳಲ್ಲಿ ಅದಕ್ಕೆ ಬೇಕಾದ ಉತ್ತರವನ್ನು ಕೊಡಲು ತಯಾರಿದ್ದೇವೆ ಎಂದು ಎಚ್ಚರಿಸಿದರು. ಇದೇ ವೇಳೆ ಜಿಲ್ಲೆಯಲ್ಲಿ ವಿವಿಧೆಡೆ ನಡೆಯುತ್ತಿರುವ ಅತ್ಯಾಚಾರ ಘಟನೆಗಳನ್ನು ಅವರು ಖಂಡಿಸಿದರು.