ಬೆಂಗಳೂರು: ಮಹಿಳಾ ಹೋಮ್ ಗಾರ್ಡ್ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಶಾಸಕಿ ಸೌಮ್ಯಾ ರೆಡ್ಡಿ ವಿರುದ್ಧ ಜಯನಗರ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 323, 353 ರಡಿ ಎಫ್ ಐ ಆರ್ ದಾಖಲಾಗಿದೆ.
ರಾಜಭವನ ಮುತ್ತಿಗೆಗೆ ಹಾಕಲು ತೆರಳಿದ್ದ ಕೆಪಿಸಿಸಿ ಅಧ್ಯಕ್ಷ್ಯ ಡಿ.ಕೆ ಶಿವಕುಮಾರ್, ವಿಪಕ್ಷ ನಾಯಕ ಸಿದ್ಧರಾಮಯ್ಯ, ಜಿ. ಪರಮೇಶ್ವರ್ ಸೇರಿ ಇತರೆ ಮುಖಂಡರನ್ನ ಪೊಲೀಸರು ತಮ್ಮ ವಶಕ್ಕೆ ಪಡೆಸಿದ್ದಾರೆ. ಇನ್ನು ಇದೇ ಸಮಯದಲ್ಲಿ ಶಾಸಕಿ ಸೌಮ್ಯ ರೆಡ್ಡಿಯನ್ನ ಲೇಡಿ ಕಾನ್ಸ್ ಸ್ಟೇಬಲ್ ಒಬ್ಬರು ವಶಕ್ಕೆ ಪಡೆಯಲು ಮುಂದಾಗಿದ್ದಾರೆ. ಇದ್ರಿಂದ ಆಕ್ರೋಶಗೊಂಡ ಶಾಸಕಿ ಸೌಮ್ಯಾ ರೆಡ್ಡಿ, ಮಹಿಳಾ ಪೇದೆಗೆ ಹೂ ದಿ ಹೆಲ್ ಆರ್ ಯು ಎಂದು ನಿಂದಿಸುತ್ತಾ ಆಕೆಯ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಈ ದೃಶ್ಯ ಮಾಧ್ಯಮಗಳ ಕ್ಯಾಮೆರಾ ಕಣ್ಣಿಗೆ ಬಿದ್ದಿದ್ದು, ವೈರಲ್ ಆಗಿದ್ದರಿಂದ ಸೌಮ್ಯಾ ರೆಡ್ಡಿಯವರು ಸಾರ್ವಜನಿಕರ ಟೀಕೆಗೂ ಗುರಿಯಾದರು. ಆದರೆ, ಸೌಮ್ಯಾ ರೆಡ್ಡಿ ಈ ಘಟನೆ ಬಗ್ಗೆ ಪೊಲೀಸ್ ಆಯುಕ್ತರಿಗೆ ದೂರು ಸಲ್ಲಿಸಿದ್ದು, ತಮ್ಮ ಮೇಲೆ ಮಹಿಳಾ ಪೇದೆಯೇ ದೌರ್ಜನ್ಯ ನಡೆಸಿದ್ದರು ಎಂದು ಆರೋಪಿಸಿದ್ದರು.
ಈ ನಡುವೆ ಘಟನೆಯ ಸಂಬಂಧ ಹೇಳಿಕೆ ನೀಡಿರುವ ಸೌಮ್ಯಾ ರೆಡ್ಡಿಯವರು, ಪೊಲೀಸರು ನಮ್ಮನ್ನು 20 ನಿಮಿಷಕ್ಕೂ ಹೆಚ್ಚು ಕಾಲ ತಳ್ಳಾಡುತ್ತಿದ್ದರು. ನಾವೇನೋ ಕ್ರಿಮಿನಲ್ ಗಳಂತೆ ನೋಡುತ್ತಿದ್ದರು. ತಳ್ಳಾಟದಲ್ಲಿ ನನ್ನ ಕತ್ತು ಹಾಗೂ ಭುಜಗಳ ಮೇಲೆ ಗಾಯಗಳಾಗಿವೆ. ಸಾಕಷ್ಟು ಹಲ್ಲೆಗಳೂ ನನ್ನ ಮೇಲೆ ನಡೆದಿದೆ. ಕೆಲವೇ ನಿಮಿಷಗಳಲ್ಲಿ ಪ್ರಜ್ಞೆ ತಪ್ಪುತ್ತಿದ್ದೆ. ಹೀಗಾಗಿ ನೀರಿಗಾಗಿ ಹತ್ತಿರದಲ್ಲೇ ಇದ್ದ ಕೆಪಿಸಿಸಿ ಅಧ್ಯಕ್ಷರ ಬಳಿ ತೆರಳಲು ಯತ್ನಿಸಿದ್ದೆ. ಈ ವೇಳೆ ಮಹಿಳಾ ಪೇದೆ ನನ್ನನ್ನು ವಶಕ್ಕೆ ಪಡೆಯಲು ಮುಂದಾದರು. ಕೈಬಿಡುವಂತೆ ತಿಳಿಸಿದ್ದೆ. ಅದು ಸಾಮಾನ್ಯ ವರ್ತನೆಯಾಗಿತ್ತು ಎಂದು ಹೇಳಿದ್ದರು.