“ಮನೆ ಬಾಗಿಲಿಗೇ ಮಾಸಾಶನ”: ‘ನವೋದಯ’ ಆ್ಯಪ್ ಮತ್ತು ತಂತ್ರಾಂಶ ಮುಖ್ಯಮಂತ್ರಿ ಲೋಕಾರ್ಪಣೆ’

ಬೆಂಗಳೂರು: ‘ಮನೆ ಬಾಗಿಲಿಗೇ ಮಾಸಾಶನ’ ಅಭಿಯಾನದ ಮೂಲಕ ಫಲಾನುಭವಿಗಳ ಮನೆಗೆ ಪಿಂಚಣಿ ತಲುಪಿಸಲು ರಾಜ್ಯ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ.

ಅರ್ಹ ಫಲಾನುಭವಿಗಳನ್ನು ‘ನವೋದಯ’ ಆ್ಯಪ್ ಮತ್ತು ತಂತ್ರಾಂಶದಲ್ಲಿ ಗುರುತಿಸಿ, ಅವರ ಮನೆ ಬಾಗಿಲಲ್ಲೇ ಪಿಂಚಣಿ ಮಂಜೂರಾತಿ ಮಾಡುವ ಅಭಿಯಾನ‌ಕ್ಕೆ ಬ್ಯಾಂಕ್ವೆಟ್ ಹಾಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಬುಧವಾರ ಚಾಲನೆ ನೀಡಿದರು.

READ ALSO

ಬಳಿಕ ಮಾತನಾಡಿದ ಅವರು, ‘ಮಧ್ಯವರ್ತಿಗಳ ಹಾವಳಿ ಇಲ್ಲದೆ ಸರ್ಕಾರದ ಯೋಜನೆಗಳು ಜನರಿಗೆ ತಲುಪಬೇಕು. ಇದು ಪ್ರಧಾನಿ ನರೇಂದ್ರ ಮೋದಿಯವರ ಆಶಯ ಕೂಡ. ಇಷ್ಟು ದಿನ ಪಿಂಚಣಿಗಾಗಿ ಫಲಾನುಭವಿಗಳು ತುಂಬಾ ಕಷ್ಟ ಪಡುತ್ತಿದ್ದರು. ಇದೀಗ ಅದನ್ನು ತಪ್ಪಿಸಲು ಸರ್ಕಾರ ಮಹತ್ವದ ಯೋಜನೆ ಜಾರಿ ಮಾಡಿದೆ’ ಎಂದರು.

‘ಪಿಂಚಣಿಗಾಗಿ ಜನರು ಸರ್ಕಾರಿ ಕಚೇರಿಗೆ ಹೋಗಿ, ಅಧಿಕಾರಿಗಳ ಬಳಿ ಕೈ ಕಟ್ಟಿ ನಿಲ್ಲುವ ಪರಿಸ್ಥಿತಿ ಇತ್ತು. ಅದೆಲ್ಲವನ್ನೂ ತಪ್ಪಿಸಲು ಈ ಯೋಜನೆ ಸಹಕಾರಿಯಾಗಲಿದೆ. ಇನ್ನು ಮುಂದೆ ಮಧ್ಯವರ್ತಿಗಳು ಇಲ್ಲದೇ, ಅರ್ಹ ಫಲಾನುಭವಿಗಳಿಗೆ ಪಿಂಚಣಿ ನೇರವಾಗಿ ಅವರ ಬ್ಯಾಂಕ್‌ ಖಾತೆಗೆ ತಲುಪಲಿದೆ’ ಎಂದರು.

‘ಮೊದಲ ಹಂತದಲ್ಲಿ ವೃದ್ಧಾಪ್ಯ ವರ್ಗಕ್ಕೆ ಯೋಜನೆ ಜಾರಿ ಮಾಡಲಾಗಿದೆ. ಎರಡನೇ ಹಂತದಲ್ಲಿ ವಿಧವೆಯರು, ಅಂಗವಿಕಲರು ಸೇರಿದಂತೆ ಉಳಿದ ಎಲ್ಲ ಪಿಂಚಣಿದಾರರಿಗೆ ಜಾರಿ ಮಾಡಲು ಕ್ರಮ ವಹಿಸುತ್ತೇವೆ’ ಎಂದರು.

ಕಂದಾಯ ಸಚಿವ ಆರ್. ಅಶೋಕ ಮಾತನಾಡಿ, ‘ಈ ವ್ಯವಸ್ಥೆಯಿಂದ ಅರ್ಹ ಫಲಾನುಭವಿಗಳ ಮನೆ ಬಾಗಿಲಿಗೆ ಸರಳವಾಗಿ ಪಿಂಚಣಿ ಬರಲಿದೆ. ಇಷ್ಟು ವರ್ಷದಲ್ಲಿ ಈ ಯೋಜನೆ ಯಾಕೆ ಜಾರಿಗೆ ತಂದಿಲ್ಲ ಎಂದು ಆಶ್ಚರ್ಯವಾಗಿದೆ. ಹಿಂದಿನ ಸರ್ಕಾರ ಈ ಯೋಜನೆಯನ್ನು ಜಾರಿಗೆ ತರಬೇಕಿತ್ತು. ಆದರೆ, ಅವರು ಅದರ ಕಡೆ ಗಮನಹರಿಸಿಲ್ಲ. ಈಗ ನಾವು ಜಾರಿಗೆ ತಂದಿದ್ದೇವೆ’ ಎಂದರು.

‘ಈ ಯೋಜನೆಯಿಂದ ಮಧ್ಯವರ್ತಿಗಳ ಹಾವಳಿ ತಪ್ಪಲಿದೆ. ಇನ್ನು ಮುಂದೆ ಅರ್ಹತೆ ಇಲ್ಲದವರಿಗೆ ಪಿಂಚಣಿ ಸಿಗುವುದಿಲ್ಲ. ಆಧಾರ್‌ ಲಿಂಕ್ ಮಾಡುವುದರಿಂದ ಸರಳವಾಗಿ ಪಿಂಚಣಿ ವಿತರಣೆ ಸಾಧ್ಯವಾಗಲಿದೆ. ಅಲ್ಲದೆ, ಅಂಚೆ ಕಚೇರಿ ಮೂಲಕ ಪಿಂಚಣಿ ಬಟವಾಡೆ ಇರುವುದಿಲ್ಲ. ನೇರವಾಗಿ ಬ್ಯಾಂಕ್ ಖಾತೆಗೆ ಪಿಂಚಣಿ ಹಣ ಜಮೆ ಆಗಲಿದೆ’ ಎಂದರು.

‘ಉಡುಪಿ ಮತ್ತು ಬಳ್ಳಾರಿ ಜಿಲ್ಲೆಯಲ್ಲಿ ಈಗಾಗಲೇ ಪ್ರಾಯೋಗಿಕವಾಗಿ ಜಾರಿ ಮಾಡಿದ್ದೇವೆ. ಅದು ಯಶಸ್ವಿಯಾದ ಬಳಿಕ ರಾಜ್ಯದಾದ್ಯಂತ ಜಾರಿ ಮಾಡುತ್ತಿದ್ದೇವೆ. ಹೊಸ ತಂತ್ರಜ್ಞಾನದ ಮೂಲಕ ಪಿಂಚಣಿ ವಿತರಿಸಲು ಕ್ರಮ ತೆಗೆದುಕೊಳ್ಳಲಾಗುತ್ತಿದೆ’ ಎಂದರು.

‘ಇಷ್ಟು ದಿನ ಒಬ್ಬ 40–50 ಪಿಂಚಣಿದಾರರ ಕಾರ್ಡ್ ಪಡೆದು ಮಧ್ಯವರ್ತಿ ವಂಚನೆ ಮಾಡುತ್ತಿದ್ದ. ಇನ್ನು ಮುಂದೆ ಮಧ್ಯವರ್ತಿಗಳ ಹಾವಳಿ ಇರುವುದಿಲ್ಲ. ಒಬ್ಬರಿಗೆ ಒಂದೇ ಪಿಂಚಣಿ ಸಿಗುವ ವ್ಯವಸ್ಥೆ ಮಾಡುತ್ತಿದ್ದೇವೆ’ ಎಂದರು.

ಮುಖ್ಯಮಂತ್ರಿಯ ರಾಜಕೀಯ ಕಾರ್ಯದರ್ಶಿ ಜೀವರಾಜ್, ವಿಧಾನಪರಿಷತ್ ಸದಸ್ಯ ರಮೇಶ್ ಗೌಡ ಇದ್ದರು.