ಬೆಳ್ತಂಗಡಿ: ಕೊಕ್ಕಡ ಸಮೀಪದ ಕೌಕ್ರಾಡಿ ಗ್ರಾಮದ ಸೌತಡ್ಕ ದೇವಸ್ಥಾನಕ್ಕೆ ತೆರಳುವ ರಸ್ತೆ ಸಮೀಪದ ನೂಜೆ ತುಕ್ರಪ್ಪ ಶೆಟ್ಟಿ ಯವರ ಮನೆಗೆ ಸುಮಾರು ಒಂಭತ್ತು ಮಂದಿ ದರೋಡೆಕೋರರ ತಂಡವು ಸೋಮವಾರ ಸುಮಾರು 2-30 ಗಂಟೆಯ ಮಧ್ಯ ರಾತ್ರಿ ನುಗ್ಗಿ ಮನೆಯ ಯಜಮಾನ ಮತ್ತು ಅವರ ಪತ್ನಿ ಮೇಲೆ ಹಲ್ಲೆ ನಡೆಸಿ ಲಕ್ಷಾಂತರ ರೂ. ಮೌಲ್ಯದ ನಗನಗದು ದೋಚಿದ ಘಟನೆ ನಡೆದಿದೆ.
ಒಂಭತ್ತು ಮಂದಿ ಇದ್ದ ದರೋಡೆಕೋರರ ತಂಡ ಇವರನ್ನು ಸ್ಥಳದಲ್ಲೆ ಕೂಡಿ ಹಾಕಿ ಹಲ್ಲೆ ನಡೆಸಿದ ಸಂದರ್ಭ ತುಕ್ರಪ್ಪ ಶೆಟ್ಟಿ ಯವರ ಪತ್ನಿಗೆ ದರೋಡೆಕೊರರು ಚೂರಿಯಿಂದ ಹೊಟ್ಟೆಗೆ ಎರಡು ಬಾರಿ ಇರಿದಿದ್ದು, ತೀವ್ರ ಗಾಯಗಳಾಗಿದ್ದು ತಕ್ಷಣವೇ ಇವರನ್ನು ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮನೆಯಲ್ಲಿ ಪತಿ , ಪತ್ನಿ ಮತ್ತು ಇಬ್ಬರು ಸಣ್ಣ ಮಕ್ಕಳು ಮಾತ್ರ ಈ ಸಂದರ್ಭದಲ್ಲಿ ಇದ್ದುದರಿಂದ ಇವರನ್ನೆಲ್ಲ ಮಾರಕಾಸ್ತ್ರ ತೋರಿಸಿ ಬೆದರಿಸಿ ಕೂಡಿ ಹಾಕಿ ಈ ದರೋಡೆ ನಡೆಸಿದ್ದು ಮನೆಯಲ್ಲಿದ್ದ ಚಿನ್ನಾಭರಣ ಮತ್ತು ನಗದನ್ನು ದೋಚಿಕೊಂಡು ಡಕಾಯಿತರ ತಂಡ ಪರಾರಿಯಾಗಿದೆ.
ಸ್ಥಳಕ್ಕೆ ಪೊಲೀಸರು ಬೇಟಿನೀಡಿ ಪರಿಶೀಲನೆ ನಡೆಸಿ ದರೋಡೆಕೋರರ ಬಂಧನಕ್ಕೆ ಬಲೆ ಬೀಸಿದ್ದು, ರಸ್ತೆಗಳಲ್ಲಿ ನಾಕಾಬಂದಿ ಹಾಕಲಾಗಿದೆ. ಘಟನೆಯ ಸುದ್ದಿ ತಿಳಿಯುತ್ತಿದ್ದಂತೆಯೇ ಅಪಾರ ಸಂಖ್ಯೆಯಲ್ಲಿ ಜನರು ಆಗಮಿಸುತ್ತಿದ್ದು, ಜನರಲ್ಲಿ ಆತಂಕ ಸೃಷ್ಟಿಸಿದೆ.