ಕೋಲ್ಕತ್ತಾ: ಪಶ್ಚಿಮ ಬಂಗಾಳ ರಾಜಧಾನಿ ಕೋಲ್ಕತ್ತಾದ ವೈದ್ಯೆ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಳೆ ದೇಶಾದ್ಯಂತ ಪ್ರತಿಭಟನೆ ನಡೆಯಲಿದ್ದು ಬಂದ್‌ಗೆ ಕರೆ ನೀಡಲಾಗಿದೆ. ಸರ್ಕಾರಿ ಸ್ವಾಮ್ಯದ ಆಸ್ಪತ್ರೆಯಲ್ಲಿ ಇತ್ತೀಚೆಗೆ ನಡೆದ ಟ್ರೈನಿ ವೈದ್ಯೆಯ ಅಮಾನುಷ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ಸದ್ಯ ಉಗ್ರ ಸ್ವರೂಪ ಪಡೆದುಕೊಂಡಿದೆ.
ಶನಿವಾರ (ಆಗಸ್ಟ್ 17) ದೇಶಾದ್ಯಂತ ಖಾಸಗಿ ವೈದ್ಯಕೀಯ ಸಂಸ್ಥೆಗಳು ಬಂದ್‌ಗೆ IMA ನಿರ್ಧಾರ ಮಾಡಿದೆ. ಅಲ್ಲದೆ ಸಿಎಂ ಮಮತಾ ಬ್ಯಾನರ್ಜಿ ಸರ್ಕಾರಕ್ಕೆ ಹೈಕೋರ್ಟ್ ಛೀಮಾರಿ ಹಾಕಿದ ಬೆನ್ನಲ್ಲೆ ಇಂದು ಸಂಜೆ ರ್‍ಯಾಲಿಯಲ್ಲಿ ಭಾಗವಹಿಸಿದ್ದಾರೆ. ತನಿಖಾಧಿಕಾರಿಗಳಿಗೆ ಗಡುವು ಕೂಡ ನೀಡಲಾಗಿದೆ.
ಕೋಲ್ಕತ್ತಾದ ಆರ್‌ಜಿ ಕರ್ ವೈದ್ಯಕೀಯ ಕಾಲೇಜಿನಲ್ಲಿ ಟ್ರೈನಿ ವೈದ್ಯೆಯ ಅತ್ಯಾಚಾರ ಮತ್ತು ಹತ್ಯೆಗೆ ಒಗ್ಗಟ್ಟು ಪ್ರದರ್ಶಿಸಿ, ವೈದ್ಯರು ಮತ್ತು ವಿವಿಧ ವೈದ್ಯಕೀಯ ಸಂಸ್ಥೆಗಳ ಪ್ರತಿನಿಧಿಗಳು ದೇಶದ ವಿವಿಧ ಸ್ಥಳಗಳಲ್ಲಿ ಪ್ರತಿಭಟನೆಗಳನ್ನು ಘೋಷಿಸಿದ್ದಾರೆ. ಈ ಪ್ರಕರಣದಲ್ಲಿ 19 ಜನರನ್ನು ಮಾತ್ರ ಬಂಧಿಸಲಾಗಿದೆ.
ಪ್ರಕರಣವನ್ನು ಖಂಡಿಸಿ ತಿರುನಾಳ್ ವೈದ್ಯಕೀಯ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆ (SCTIMST), ಪ್ರಾದೇಶಿಕ ಕ್ಯಾನ್ಸರ್ ಕೇಂದ್ರ (RCC), ಡೆಂಟಲ್ ಪಿಜಿ ಅಸೋಸಿಯೇಷನ್, ಹೌಸ್ ಸರ್ಜನ್ಸ್ ಅಸೋಸಿಯೇಷನ್ ಮತ್ತು ಕೇರಳದ ವಿವಿಧ ವೈದ್ಯಕೀಯ ಕಾಲೇಜುಗಳ ವಿದ್ಯಾರ್ಥಿ ಸಂಘಗಳ ಸಹಯೋಗದೊಂದಿಗೆ ಕೇರಳ ವೈದ್ಯಕೀಯ ಸ್ನಾತಕೋತ್ತರ ಸಂಘ (KMPGA) 24 ಗಂಟೆಗಳ ಮುಷ್ಕರಕ್ಕೆ ಕರೆ ನೀಡಿದೆ.
ಕೋಲ್ಕತ್ತಾದ ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ವೈದ್ಯೆಯ ಮೇಲಿನ ಅತ್ಯಾಚಾರ-ಕೊಲೆ ಪ್ರಕರಣದ ಬಗ್ಗೆ ಕೋಲ್ಕತ್ತಾ ಹೈಕೋರ್ಟ್ ಕಳವಳ ವ್ಯಕ್ತಪಡಿಸಿದ್ದು, ವೈದ್ಯರಿಗೆ ಸುರಕ್ಷಿತ ಕೆಲಸದ ವಾತಾವರಣವನ್ನು ಒದಗಿಸಲಾಗದ ಸರ್ಕಾರದ ಸಾಮರ್ಥ್ಯವನ್ನು ಪ್ರಶ್ನಿಸಿದೆ. ಆರ್‌ಜಿ ಕರ್ ಆಸ್ಪತ್ರೆಯಿಂದ ರೋಗಿಗಳನ್ನು ಸ್ಥಳಾಂತರಿಸಿ, ಆಸ್ಪತ್ರೆಯನ್ನು ಮುಚ್ಚುವುದು ಉತ್ತಮ ಎಂದು ಅದು ಹೇಳಿದೆ.ಅಲ್ಲದೆ ವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಕೃತ್ಯವನ್ನು ಖಂಡಿಸಿ, ನ್ಯಾಯಕ್ಕಾಗಿ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದ ಪ್ರತಿಭಟನಾನಿರತ ವೈದ್ಯಕೀಯ ಸಿಬ್ಬಂದಿಗಳ ಮೇಲೆ ಆಗಸ್ಟ್ 14ರ ಮಧ್ಯರಾತ್ರಿ ನಡೆದ ದಾಳಿಯ ಬಗ್ಗೆ ಕೋಲ್ಕತ್ತಾ ಹೈಕೋರ್ಟ್ ವಿಚಾರಣೆ ನಡೆಸಿದೆ.ತಮ್ಮ ಸಹೋದ್ಯೋಗಿಯನ್ನು ಕಳೆದುಕೊಂಡ ನೋವು ಹಾಗೂ ಆಘಾತದ ನಡುವೆ ತಮ್ಮ ಸುರಕ್ಷತೆಗಾಗಿ ಆಗ್ರಹಿಸಿ ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಪ್ರತಿಭಟನೆ ನಡೆಸುತ್ತಿರುವಂತೆಯೇ ಬುಧವಾರ ರಾತ್ರಿ ಗುಂಪೊಂದು ಆಸ್ಪತ್ರೆ ಮೇಲೆ ದಾಳಿ ನಡೆಸಿ ವಿಧ್ವಂಸಕ ಕೃತ್ಯ ಎಸಗಿದೆ. ಆಸ್ಪತ್ರೆಯ ಎಮರ್ಜೆನ್ಸಿ ವಾರ್ಡ್ ಅನ್ನು ಸಂಪೂರ್ಣವಾಗಿ ನಾಶಗೊಳಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.